ಬಳ್ಳಾರಿ: ಬಾಲ್ಯ ವಿವಾಹ ತಡೆಗೆ ಹೆಚ್ಚಿನ ಜಾಗೃತಿ ಅಗತ್ಯ

ಲೋಕದರ್ಶನ ವರದಿ

ಬಳ್ಳಾರಿ 09: ಆಧುನಿಕ ಜಮಾನ ಇಷ್ಟೆಲ್ಲಾ ಬೆಳೆದಿದ್ದರೂ ಇಂದಿಗೂ ಬಾಲ್ಯವಿವಾಹ ನಡೆಯುತ್ತಿರುವುದು ದುರದೃಷ್ಟಕರ.ಇನ್ನಾದರೂ ಬಾಲ್ಯ ವಿವಾಹ ತಡೆಗೆ ಹೆಚ್ಚಿನ ಜಾಗೃತಿ ವಹಿಸೋಣ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಖಾಸಿಂ ಚೂರಿಖಾನ್ ಹೇಳಿದರು.

ಜಿಲ್ಲಾಡಳಿತ, ಜಿಪಂ, ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಾಲ್ಯ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಶನಿವಾರ ನಗರದ ಜಿಪಂ ಸಭಾಂಗಣದಲ್ಲಿ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಮತ್ತು ನ್ಯಾಯಾಧೀಶರೊಂದಿಗೆ ಆಯೋಜಿಸಿದ್ದ ಒಂದು ದಿನದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಾಲ್ಯವಿವಾಹ ಎಂಬುದು ಸಾಮಾಜಿಕ ಪೀಡುಗಾಗಿದೆ. ಇಂದಿಗೂ ಬಾಲ್ಯವಿವಾಹ ಚಾಲ್ತಿಯಲ್ಲಿರುವುದು ದುರದೃಷ್ಟಕರ. ಸಮೀಕ್ಷೆಯೊಂದರ ಪ್ರಕಾರ 20ಸಾಮೂಹಿಕ ಮದುವೆಗಳಲ್ಲಿ 5ಬಾಲ್ಯವಿವಾಹ ಜರುಗುತ್ತವೆ ಎಂಬ ಮಾಹಿತಿಯಿದೆ. ಬಡತನವೇ ಬಾಲ್ಯವಿವಾಹಕ್ಕೆ ಪ್ರಮುಖ ಕಾರಣವಾಗಿದೆ. ಹೆಣ್ಣು ಎಂದರೇ ಭಾರ ಎಂದುಕೊಳ್ಳುವ ಮನೋಭಾವದಿಂದ ಪಾಲಕರು ಹೊರಬರಬೇಕು. ಪಾಲಕರಿಗೆ ಅಗತ್ಯ ತಿಳುವಳಿಕೆ ನೀಡುವ ಮೂಲಕ ಬಾಲ್ಯ ವಿವಾಹ ತಡೆಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕು ಎಂದರು.

ಬಳ್ಳಾರಿ ಜಿಲ್ಲೆಯಲ್ಲಿ ವರ್ಷಕ್ಕೊಂದು ಬಾಲ್ಯವಿವಾಹ ನಡೆಯುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಮಾಹಿತಿ ನೀಡುತ್ತಾರೆ,  ವಾಸ್ತವವಾಗಿ ಹೆಚ್ಚಿನ ಮಟ್ಟದಲ್ಲಿ ಬಾಲ್ಯ ವಿವಾಹ ನಡೆಯುತ್ತವೆ. ಹೀಗಾಗಿಜಾಗೃತಿ ವಹಿಸಿ ಕೆಲಸ ಮಾಡಿದರೆ ಹೆಚ್ಚಿನ ಮಟ್ಟದಲ್ಲಿ ಬಾಲ್ಯ ವಿವಾಹ ತಡೆಯಬಹುದು ಎಂದರು.

ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ್ ಮಾತನಾಡಿ, ಜಾಗೃತಿ ಮೂಡಿಸಿದರೂ ಬಾಲ್ಯ ವಿವಾಹ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದು ದುರಂತದ ಸಂಗತಿ.ಚಿಕ್ಕವಯಸ್ಸಿನಲ್ಲಿ ಬಾಲಕಿಯರು ಮದುವೆಯಾಗುವುದರಿಂದ ಅವರ ಜೀವನ ಹಾಳಾಗುತ್ತದೆ. ಇನ್ನಾದರೂ ಎಲ್ಲರೂ ಎಚ್ಚೇತ್ತು ಬಾಲ್ಯವಿವಾಹ ಪ್ರಕರಣಗಳಿಗೆ ಕಡಿವಾಣ ಹಾಕೋಣ ಎಂದರು.

ಮುಖ್ಯ ನ್ಯಾಯಾಂಗ ದಂಢಾಧಿಕಾರಿ ಬಿ.ಎನ್. ಸುಜಾತಾ ಮಾತನಾಡಿ, ಬಾಲ್ಯ ವಿವಾಹ ನಿಷೇಧ ಕುರಿತು ಸಮರ್ಪಕ ಜಾಗೃತಿ ಮೂಡಿಸಬೇಕು.ಬಾಲಕಿಯರಲ್ಲಿ ಮೊದಲು ಧೈರ್ಯ ತುಂಬಬೇಕು.ಅಂದಾಗ ಬಾಲ್ಯ ವಿವಾಹ ತಡೆಯಬಹುದು ಎಂದರು.

ಸಿವಿಲ್ ನ್ಯಾಯಾಧೀಶ ಅರ್ಜುನ ಮಲ್ಲೂರ, ಜಿಪಂ ಸಿಇಓ ಕೆ.ನಿತೀಶ, ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಉಪಾಧ್ಯಕ್ಷೆ ದೀನಾ ಮಂಜುನಾಥ ಸೇರಿ ಮತ್ತಿತರರು ಇದ್ದರು.