ಬಳ್ಳಾರಿ: ಸ್ವಚ್ಛ ಭಾರತ ಪ್ರಚಾರದ ವಸ್ತುವಲ್ಲ: ರಾಜೇಶ ದರಬಾರ

ಲೋಕದರ್ಶನ ವರದಿ

ಬಳ್ಳಾರಿ 12: ಸ್ವಚ್ಛ ಭಾರತ ಎನ್ನುವುದು ಪ್ರಸ್ತುತ ಸಂದರ್ಭದಲ್ಲಿ ಕೇವಲ ಪ್ರಚಾರ ವಸ್ತುವಾಗಿ ಬಳಕೆಯಾಗುತ್ತಿದೆ. ಅಕ್ಟೋಬರ್ 2 ರಂದು ಪೊರಕೆ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗುವ ನಾವುಗಳು ಮುಂದಿನ ವರ್ಷ ಅಕ್ಟೋಬರ್ ಬರುವತನಕೆ ಅದರ ಗುಂಗಲ್ಲೇ ಮೈಮರೆತು ಇದ್ದು ಬಿಡುತ್ತೇವೆ. ಆದರೆ ಅರ್ಥ ಮಾಡಿಕೊಳ್ಳಬೇಕಾಗಿರುವುದು ಸ್ವಚ್ಛ ಭಾರತ ಎನ್ನುವುದು ಪ್ರಚಾರದ ವಸ್ತುವಲ್ಲ ಬದಲಿಗೆ ನಾವೆಲ್ಲ ನಿತ್ಯ ಮಾಡಲೇಬೇಕಾದ ಕರ್ತವ್ಯವಾಗಿದೆ ಎಂದು ವಿದ್ಯಾವರ್ಧಕ ಸಂಘದ ರಾಜೇಶ ಡಿ.ದರಬಾರ ಹೇಳಿದರು.

ವಿದ್ಯಾವರ್ಧಕ ಸಂಘದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ನಗರದ ಗೋಪಾಲಪುರ ಬಡಾವಣೆಯಲ್ಲಿ ಸ್ವಚ್ಚತಾ ಕಾರ್ಯ ಕೈಗೊಂಡು ಮಾತನಾಡಿದ ಅವರು; ಸ್ವಚ್ಛ ಭಾರತ ನಿರ್ಮಾಣಕ್ಕೆ ಕೈ ಜೋಡಿಸಿದ ನಮ್ಮ ದರಬಾರ ಸಮೂಹ ಶಿಕ್ಷಣ ಸಂಸ್ಥೆ ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಶ್ರಮಿಸುತ್ತಿದೆ. ಆ ನಿಟ್ಟಿನಲ್ಲಿ ಕಳೆದ ಅಕ್ಟೋಬರ್ 2 ರಂದು ಪ್ಲಾಸ್ಟಿಕ್ಗೆ ಪ್ರತಿಯಾಗಿ ಸಕ್ಕರೆಯನ್ನು ವಿತರಿಸುವ ಮೂಲಕ 6 ಕ್ವಿಂಟಾಲ್ ಪ್ಲಾಸ್ಟಿಕ್ ಸಂಗ್ರಹಿಸಿದ್ದೇವು. ಈ ವಿನೂತನ ಯೋಜನೆ ನಾಡಿನಾಧ್ಯಂತ ಅತ್ಯಂತ ಪ್ರಶಂಸೆಗೆ ಪಾತ್ರವಾಗಿತ್ತು ಆದರೆ ಅದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿ ಹೋದರೆ ಗಾಂಧಿಯವರ ಕನಸು ಮೋದಿಯವರ ಯೋಜನೆ ಎರಡು ಅರ್ಥಪೂರ್ಣವಾಗುವುದಕ್ಕೆ ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ ನಮ್ಮ ಶಿಕ್ಷಣ ಸಂಸ್ಥೆ ಒಂದು ಹೆಜ್ಜೆ ಮುಂದಿಡುತ್ತಿದೆ. ನಮ್ಮ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 9 ವಿಭಾಗಗಳಿದ್ದು ಪ್ರತಿ ತಿಂಗಳು 5ನೇ ತಾರಿಖಿನಂದು ಒಂದೊಂದು ವಿಭಾಗದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಡಳಿತಮಂಡಳಿ ಸದಸ್ಯರು ನಗರದ ಒಂದೊಂದು ಬಡಾವಣೆಯನ್ನು ಆಯ್ಕೆ ಮಾಡಿಕೊಂಡು ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವುದರ ಮೂಲಕ ನೈರ್ಮಲೀಕರಣದ ಅಗತ್ಯತೆ ಹಾಗೂ ಪ್ಲಾಸ್ಟಿಕ್ ಬಳೆಕಯಿಂದಾಗುವ ತೊಂದರೆಗಳ ಕುರಿತು ಅರಿವು ಮೂಡಿಸುವುದರೊಂದಿಗೆ ಸ್ವಚ್ಛ ಹಾಗೂ ಸದೃಢ ಭಾರತ ನಿರ್ಮಾಣದಲ್ಲಿ ನಮ್ಮ ಅಳಿಲು ಸೇವೆಯನ್ನು ಸಲ್ಲಿಸಲು ಸಿದ್ಧರಾಗಿದ್ದು ಅದರ ಪ್ರಾರಂಭಿಕ ಹಂತವಾಗಿ ಇಂದು ಗೋಪಾಲಪುರ ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ ವಿದ್ಯಾಥರ್ಿಗಳು ಮನೆ ಮನೆಗೂ ತೆರಳಿ ಪ್ಲಾಸ್ಟಿಕ್ ಸಂಗ್ರಹ ಮಾಡಿದರು. ರಸ್ತೆ ಅಕ್ಕ ಪಕ್ಕ ಬಿದ್ದ ಪ್ಲಾಸ್ಟಿಕ್ ಬಾಟಲಿಗಳನ್ನು ಹಾಗೂ ಪ್ಲಾಸ್ಟಿಕ್ ಚೀಲಗಳನ್ನು ಗೋಣಿ ಚೀಲದಲ್ಲಿ ತುಂಬಿ ಚರಂಡಿಗಳು ಕಟ್ಟಿಕೊಳ್ಳದಂತೆ ಎಚ್ಚರಿಕೆಯನ್ನು ರವಾನಿಸಿದರು. ಈ ಸಂದರ್ಭದಲ್ಲಿ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ರೂಪಾ ಠೋಳ ಸೇರಿದಂತೆ ಇತರ ಶಿಕ್ಷಕರು ಉಪಸ್ಥಿತರಿದ್ದರು.