ಏಡ್ಸ ರೋಗದ ಬಗೆಗೆ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು: ನಾಮದೇವ ಸಾಲಮಂಟಪಿ

Awareness should be spread widely about AIDS: Namdev Salamantapi

ಅಥಣಿ 04: ವಿಶ್ವ  ಏಡ್ಸ್‌  ದಿನಾಚರಣೆಯ ಅಂಗವಾಗಿ ಅಥಣಿ ಪಟ್ಟಣದ ತಾಲೂಕು ಸರಕಾರಿ ಆಸ್ಪತ್ರೆ, ರೋಟರಿ ಕ್ಲಬ್, ತಾಲೂಕಾ ಕಾನೂನು ಸೇವಾ ಸಮೀತಿ ಹಾಗೂ ತಾಲೂಕು ಆಡಳಿದ ಸಂಯುಕ್ತ ಆಶ್ರಯದಲ್ಲಿ ಜನ ಜಾಗೃತಿ ಅಭಿಯಾನ ನಡೆಯಿತು. 

ಸುರಕ್ಷಿತ ಲೈಂಗಿಕತೆ ಸುರಕ್ಷಿತ ಜೀವನ, ಎಚ್‌ಐವಿ ತಡೆಯಲು ಜಾಗೃತಿ ಅಗತ್ಯ ಎಂದು ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಎನ್ ಎಸ್ ಎಸ್ ವಿದ್ಯಾರ್ಥಿಗಳು, ರೋಟರಿ  ಪದಾಧಿಕಾರಿಗಳು, ಪುರಸಭೆಯ ಚುನಾಯಿತ ಪ್ರತಿನಿಧಿಗಳು ಮತ್ತು  ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯವರು ಪಾದಯಾತ್ರೆ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಿದರು. ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನ ಸಿವ್ಹಿಲ್ ನ್ಯಾಯಾಧೀಶರಾದ ನಾಮದೇವ ಸಾಲಮಂಟಪಿ ಮಾತನಾಡಿ, ಏಡ್ಸ ರೋಗದ ಬಗೆಗೆ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು ಆಗ ಮಾತ್ರ ಮಾರಕ ಈ ರೋಗವನ್ನು ನಿಯಂತ್ರಿಸಲು ಸಾಧ್ಯ ಎಂದರು.         

ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಥಣಿ ರೋಟರಿ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ,  ಮಾರಕ ಏಡ್ಸ ರೋಗವನ್ನು ನಿಯಂತ್ರಿಸಲು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಮತ್ತು ಅಗತ್ಯ ಮುಂಜಾಗೃತೆಗಳ ಜಾಗೃತಿ ಮೂಡಿಸುವುದಾಗಿದೆ ಎಂದ ಅವರು ರೋಟರಿ ಸೇರಿದಂತೆ ಅನೇಕ ಸಂಸ್ಥೆಗಳು ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲಿಯೇ ನಿರಂತರವಾಗಿ ಜಾಗೃತಿ ಮೂಡಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ ಎಂದರು.          

ಜಾಗೃತಿ ಜಾಥಾದಲ್ಲಿ ಪಾಲ್ಗೊಂಡ ಪುರಸಭಾ ಸದಸ್ಯೆ ಮೃಣಾಲಿನಿ ದೇಶಪಾಂಡೆ ಮಾತನಾಡಿ,  ಇತ್ತೀಚಿಗೆ ಯುವ ಜನಾಂಗದಲ್ಲಿ ಏಡ್ಸ ರೋಗ ಹರಡುತ್ತಿದ್ದು, ಇದನ್ನು ತಡೆಯಲು ಕಾಲೇಜಗಳಲ್ಲಿಯೂ ಈ ರೋಗದ ತೀವೃತೆ ಮತ್ತು ಮುಂಜಾಗೃತೆಗಳ ಕುರಿತು ಮಾಹಿತಿ ಕೊಡಬೇಕು ಎಂದ ಅವರು ಏಡ್ಸ ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಅವರಿಗೆ ಮಾನಸಿಕ ಬಲವನ್ನೂ ಕೂಡ ಕೊಡಬೇಕು ಈ ನಿಟ್ಟಿನಲ್ಲಿಯೂ ನಾವೆಲ್ಲ ಒಂದು ಹೆಜ್ಜೆ ಮುಂದಿಡಬೇಕಿದೆ ಎಂದರು. ತಾಲೂಕಾ ವೈದ್ಯಾಧಿಕಾರಿ ಡಾ. ಬಸವರಾಜ ಕಾಗೆ ಮಾತನಾಡಿ, ಸರಕಾರಿ ಆಸ್ಪತ್ರೆಯಲ್ಲಿ ಏಡ್ಸ ರೋಗಿಗಳಿಗೆ ಉಚಿತವಾಗಿ ಸಮಾಲೋಚನೆ ಮತ್ತು ಓಷಧಿಗಳನ್ನು ಕೊಡಲಾಗುತ್ತಿದೆ ಎಂದ ಅವರು ಕೆಲ ಅಗತ್ಯ ಮುಂಜಾಗೃತೆ ಮತ್ತು ಸುರಕ್ಷಿತ ವಿಧಾನಗಳನ್ನು  ಪಾಲಿಸಿದಲ್ಲಿ ನಿಶ್ಚಿತವಾಗಿಯೂ ಏಡ್ಸ ರೋಗವನ್ನು ತಡೆಯಬಹುದು ಎಂದು ಸಲಹೆ ನೀಡಿದರು.      

ಜಾಥಾದಲ್ಲಿ ಪ್ರಭಾರಿ ಪ್ರಧಾನ ಸಿವ್ಹಿಲ್ ಹಾಗೂ ಜೆಎಮ್‌. ಎಫ್‌.ಸಿ ನ್ಯಾಯಾಧೀಶರಾದ ಓಂಕಾರಮೂರ್ತಿ ಎಚ್, ಪುರಸಭಾಧ್ಯಕ್ಷೆ ಶಿವಲೀಲಾ ಬುಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ವಕೀಲರ ಸಂಘದ ಅಧ್ಯಕ್ಷ ನಿಂಗಪ್ಪ ಖೋಕಲೆ,  ಪುರಸಭಾ ಸದಸ್ಯೆ ವಿದ್ಯಾ ಐಹೊಳೆ ಸೇರಿದಂತೆ ರೋಟರಿ ಸಂಸ್ಥೆ ಪದಾಧಿಕಾರಿಗಳು, ತಾಲೂಕಾ ಆಸ್ಪತ್ರೆ ಸಿಬ್ಬಂದಿ, ವೈದ್ಯರು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.