ಲೋಕದರ್ಶನ ವರದಿ
ಗದಗ 17: ಕೇಂದ್ರ ಸರಕಾರ ಮಹಾದಾಯಿ ನದಿ ನೀರಿನ ಹಂಚಿಕೆ ಬಗ್ಗೆ ಅಧಿಸೂಚನೆ ಹೊರಡಿಸಲು ಮೀನ ಮೇಷ ಎಣಿಸುತ್ತಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಶ್ರೀರಾಮ ಸೇನೆಯ ನೂರಾರು ಕಾರ್ಯಕರ್ತರು ಮಹಾತ್ಮಾ ಗಾಂಧಿ ವತರ್ುಲದಲ್ಲಿ ಆತ್ಮಶುದ್ಧಿ ಉಪವಾಸ ಸತ್ಯಾಗ್ರಹ ನಡೆಸಿದರು.
ಸುಮಾರು ಎರಡು ನೂರು ಜನರಷ್ಟಿದ್ದ ಶ್ರೀರಾಮ ಸೇನೆಯ ಕಾರ್ಯಕರ್ತರು ಯೋಜನೆಯನ್ನು ಶೀಘ್ರದಲ್ಲಿ ಪ್ರಾರಂಭಿಸಬೇಕು. ಯೋಜನೆಯ ಕಾಮಗಾರಿಯನ್ನು ಕೂಡಲೇ ಪುನರಾರಂಭಿಸಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ಧಾರವಾಡ ವಿಭಾಗೀಯ ಸಂಚಾಲಕ ರಾಜೂ ಖಾನಪ್ಪನವರ, ಮಹಾದಾಯಿ ನದಿ ಜೋಡಣೆಯಿಂದ ಧಾರವಾಡ, ಹಾವೇರಿ, ಗದಗ, ಬಾಗಲಕೋಟ, ಬೆಳಗಾವಿ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಅದರೊಂದಿಗೆ ಈ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಒದಗಿ ರೈತರ ಬಾಳು ಹಸನಾಗಲಿದೆ. ಆದರೆ ಅಧಿಸೂಚನೆಯನ್ನು ಹೊರಡಿಸಲು ಕೇಂದ್ರ ಸರಕಾರ ಮಾತ್ರ ಹಿಂದೇಟು ಹಾಕುತ್ತಿರುವದು ಅತ್ಯಂತ ವಿಷಾದನೀಯವಾಗಿದೆಯೆಂದು ಹೇಳಿದರು.
ಚುನಾವಣೆಯ ಮುನ್ನ ಬಿಜೆಪಿ ನಾಯಕರು ಮಹಾದಾಯಿ ವಿಷಯವನ್ನು ಪ್ರಸ್ತಾಪಿಸಿ ವಿಧಾನಸಭೆ ಚುನಾವಣೆಯನ್ನು ಎದುರಿಸಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಈ ವಿಷಯದ ಮೇಲೆಯೇ ಚುನಾವಣೆ ಎದುರಿಸಿ ರಾಜ್ಯದಲ್ಲಿ ಯಶಸ್ವಿಯೂ ಆದರು.ಆದರೆ ಚುನಾವಣೆಯ ನಂತರ ಮಾತ್ರ ಬಿಜೆಪಿ ನಾಯಕರಿಗೆ ತಾವು ನೀಡಿದ ಭರವಸೆ ಮರೆತುಹೋಯಿತೆಂದು ವಿಷಾದಿಸಿದರು.
ಮಹಾದಾಯಿ ನದಿ ಜೋಡಣೆ ವಿಷಯ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಧುರೀಣರುಗಳಿಗೆ ಕೇವಲ ಬಾಯಿಚಪಲ ತಿರೀಸಿಕೊಳ್ಳುವ ವಸ್ತುವಾಗಿದೆ. ಈ ನಾಯಕರಿಗೆ ಸಮಸ್ಯೆ ಪರಿಹಾರವಾಗುವದು ಬೇಕಾಗಿಲ್ಲ. ಅವರಿಗೆ ಬೇಕಾಗಿರುವದು ಈ ವಿಷಯದ ಮೇಲೆಯೇ ಇನ್ನೂ ನಾಲ್ಕಾರು ಚುನಾವಣೆಗಳನ್ನು ಎದುರಿಸುವದಾಗಿದೆಯೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಂಜೀವ ಸೂರ್ಯವಂಶಿ, ಮಹೇಶ ರೋಖಡೆ, ಕಿರಣ ಹಿರೇಮಠ, ಜಗದೀಶ ವಾಗ್ಮೋಡೆ, ಮುತ್ತಣ್ಣ ಪವಾಡಶೆಟ್ಟರ, ಬಸವರಾಜ ಕರಿಗಾರ, ಬಸವರಾಜ ಕುರ್ತಕೋಟಿ, ಶಿವಾನಂದ ಹಿರೇಮಠ, ಹುಲಿಗೆಪ್ಪ ವಾಲ್ಮೀಕಿ, ಕುಮಾರ ನಡಗೇರಿ, ಅಶೋಕ ಭಜಂತ್ರಿ, ರಾಘವೇಂದ್ರ ಪವಾರ, ಶಿವಪ್ಪ ದಂಡಿನ, ವಿರೇಶ ಮಾನ್ವಿ, ರಾಹುಲ್ ಸುಗಂಧಿ, ಕಾತರ್ೀಕ ರಜಪೂತ, ಆಗರ ಮಹೇಂದ್ರಕರ, ಸಂತೋಷ ಹೊಸಳ್ಳಿ ಮುಂತಾದವರು ಮಾತನಾಡಿದರು