ಸಮಾಜದ ಇನ್ನೊಂದು ಮುಖವನ್ನು ಅರಿತಾಗ ಸುಧಾರಣೆ ಸಾಧ್ಯ: ರಾಮಮೂರ್ತಿ
ಬೆಳಗಾವಿ 17: ನಾವು ಸಮಾಜದ ಕಟ್ಟುಪಾಡುಗಳಿಗೆ ಹೊಂದಿಕೊಂಡು ಬಡಕುತ್ತಿದ್ದೇವೆ. ನಮ್ಮ ಸುತ್ತ ನಡೆಯುತ್ತಿರುವ ಆಗು ಹೋಗುಗಳ ಕುರಿತು ನಿಜವಾಗಿ ಜಾಗೃತಿ ವಹಿಸಿದಾಗ ಮಾತ್ರ ಬದಲಾವಣೆಗಳು ತರಲು ಸಾಧ್ಯ ಎಂದು ಬೆಳಗಾವಿ ನಗರದ ಸಿ.ಡಿ.ಪಿ.ಓ ಕೆ.ವಿ ರಾಮಮೂರ್ತಿ ಹೇಳಿದರು. ಇಲ್ಲಿನ ಶಿವ ಬಸವ ನಗರದ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ, ಸಭಾಂಗಣದಲ್ಲಿ, ಓಯಸಿಸ್ ಸಂಸ್ಥೆ, ಬೆಂಗಳೂರು ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಮಾನವ ಕಳ್ಳ ಸಾಗಾಣಿಕೆ, ಬಾಲ್ಯ ವಿವಾಹ, ಪೋಕ್ಸೋ ಹಾಗೂ ಡಿಜಿತಲ್ ಸಾಕ್ಷರತೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮಾನವ ಕಳ್ಳ ಸಾಗಾಣಿಕೆ ಕೋಟ್ಯಂತರ ರೂಪಾಯಿ ವ್ಯವಹಾರದ ಮಾರುಕಟ್ಟೆಯಾಗಿ ಪರಿಣಮಿಸಿದೆ. ಇದಕ್ಕೆ ನಾವು ನಮ್ಮ ಸಮಾಜದ ಇನ್ನೊಂದು ಮುಖದ ಕುರಿತು ಅರಿವನ್ನು ಹೊಂದಿರುವುದು ಆವಶ್ಯಕವಾಗಬೇಕಿದೆ ಎಂದರು. ಡಿಜಿಟಲ್ ಸಾಕ್ಷರತೆ ಬಗ್ಗೆ ಮಾತನಾಡುತ್ತಾ, ಬಿಹಾರದಂತಹ ಬೆಳವಣಿಗೆ ಹೊಂದದ ರಾಜ್ಯದಲ್ಲಿ ನಾವು ಈ ಸೈಬರ್ ಕೃತ್ಯಗಳು ಹೆಚ್ಚಾಗಿ ಆಗುತ್ತಿರುವುದನ್ನು ನೋಡಬಹುದು. ನಮ್ಮ ತಂತ್ರಜ್ಞಾನ ಬೆಳೆದಂತೆಲ್ಲ ಅವರ ಚಾಣಾಕ್ಷತೆ ಹೆಚ್ಚುತ್ತಲಿದೆ. ಕೇವಲ ಒಂದು ಫೋನಿನಿಂದ ಅವರು ಲಕ್ಷಗಟ್ಟಲೆ ದೋಚುತ್ತಿದ್ದಾರೆ. ಇದರ ಜಾಡನ್ನು ಹಿಡಿಯಲು ಹೋದ ಪೊಲೀಸರಿಗೂ ಸಾಕ್ಷಿಗಳು ಸಿಗದ ರೀತಿ ಅವರು ಡಿಜಿಟಲ್ ವಂಚನೆಯನ್ನು ಎಸಗುತ್ತಾರೆ. ಅದಕ್ಕಾಗಿ ನಾವು ಜಾಗೃತಿ ಹೊಂದಿ ಇತರರಿಗೂ ಇದರ ಜಾಗೃತಿ ಮೂಡಿಸಬೇಕು ಎಂದರು. ಬೆಳಗಾವಿ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯರು, ಡಾ. ಎ. ಎಲ್. ಪಾಟೀಲ ಅವರು ಮಾತಮಾಡಿ ಇಂತಹ ಜಾಗೃತಿ ಕಾರ್ಯಕ್ರಮಕ್ಕಾಗಿ ನಮ್ಮ ಮಹಾವಿದ್ಯಾಲಯವನ್ನು ಆಯ್ಕೆ ಮಾಡಿದಂತಹ ಮಹಿಳಾ ಕಲ್ಯಾಣ ಸಂಸ್ಥೆಯ ಸರ್ವರಿಗೂ ಧನ್ಯವಾದಗಳನ್ನು ತಿಳಿಸಿದರು. ನಾವೆಲ್ಲ ಒಂದು ಕಾಲದಲ್ಲಿ ಬಾಲ್ಯ ವಿವಾಹ, ಪೋಕ್ಸೋ, ಮಾನವ ಕಳ್ಳ ಸಾಗಾಣಿಕೆ ಏನೆಂದು ತಿಳಿಯದ ಕಾಲವಿತ್ತು. ಆದರೆ, ಈಗ ಹಾಗಿಲ್ಲ ಎಲ್ಲರೂ ಇದರ ಬಗ್ಗೆ ಅರಿವನ್ನು ಹೊದಿರಲೇಬೇಕು. ಈ ಜಾಗೃತಿಯನ್ನು ನಮ್ಮಲ್ಲಿ ಮೂಡಿಸಲು ಓಯಸಿಸ್ ಸಂಸ್ಥೆಯವರು ಬೆಂಗಳೂರಿನಿಂದ ಬಂದಿದ್ದಾರೆ. ಅದಕ್ಕೆ ಅವರಿಗೆಲ್ಲ ಧನ್ಯವಾದಗಳು ಹಾಗೂ ಎಲ್ಲರೂ ಮಾನವ ಕಳ್ಳ ಸಾಗಾಣಿಕೆ ಕುರಿತು ಅರಿವು ಪಡೆಯೋಣ ಎಂದು ತಿಳಿಸಿದರು. ಓಯಸಿಸ್ ಸಂಸ್ಥೆಯ ಕಮ್ಯುನಿಟಿ ಡೆವಲಪ್ಮೆಂಟ್ ಸೋಶಿಯಲ್ ವರ್ಕರ್ ಆಗಿ ಕಾರ್ಯ ನಿರ್ವಹಿಸುವ ಸೇಂಥಿಲ್ ಕುಮಾರ ಅವರು ಮಾತನಾಡಿ, ಬೆಳಗಾವಿಯಂತಹ ಗಡಿ ಭಾಗಗಳಲ್ಲಿ ನಾವು ಮಾನವ ಕಳ್ಳ ಸಾಗಾಣಿಕೆಯನ್ನ ಕಾಣಬಹುದು. ಇಷ್ಟು ಜಾಗೃತಿ ಕಾರ್ಯಕ್ರಮಗಳ ನಂತರವೂ ಈ ಕೃತ್ಯ ದಿನೇ ದಿನೇ ಹೆಚ್ಚುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಇದನ್ನ ತಡೆಗಟ್ಟಲು ನಾವೆಲ್ಲ ಸಂಘಟಿತರಾಗಿ ಒಟ್ಟಾಗಿ ಕೆಲಸ ಮಾಡಬೇಕು. ತವೆಲ್ಲ ಮುಂದೆ ಶಿಕ್ಷಕರ ವೃತ್ತಿಗೆ ಸೇರುವವರು. ನಿಮ್ಮ ಕೈಯಲ್ಲಿ ನಮ್ಮ ದೇಶದ ಮುಂದಿನ ಹಲವಾರು ಪ್ರಜೆಗಳು ಇರುತ್ತಾರೆ. ಅವರಿಗೆ ಇದರ ಕುರಿತು ಅರಿವು ಮೂಡಿಸಿ ಸುಶಿಕ್ಷಿತರನ್ನಾಗಿ ಮಾಡಲು ಮೊದಲು ನೀವು ಈ ವಿಷಯದ ಆಲವನ್ನ ಅರಿಯಬೇಕು ಎಂದು ಹೇಳಿದರು. ಬೆಳಗಾವಿ ಮಹಿಳಾ ಕಲ್ಯಾಣ ಸಂಸ್ಥೆ ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ ಕೆ.ಪಿ.ಎಸ್ ಯರಗಟ್ಟಿ ಶಾಲೆಯ ಪ್ರಾಂಶುಪಾಲ ಕಿರಣ್ ಎಂ.ಚೌಗಲಾ, ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ರೇಡಿಯೋ ನಿರೂಪಕರು ಆರ್.ಜೆ. ಚೇತನ, ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.