ಹಿಂದೂಗಳ ರಕ್ಷಣೆ ನಮ್ಮ ಹೊಣೆ, ನಾವು ಯಾವ ಧರ್ಮ ಅಥವಾ ಪಕ್ಷದ ವಿರೋಧಿಯೂ ಅಲ್ಲ : ಮಹಾಲಿಂಗಪ್ಪ ಗುಂಜಿಗಾಂವಿ
ಮಹಾಲಿಂಗಪುರ 29:ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಹಾಗೂ ಆತನ ಸಹಚರರ ಪುಂಡಾಟಿಕೆಯಿಂದ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಸಚಿವ ಪ್ರಿಯಾಂಕ್ ಅವರನ್ನು ಪಕ್ಷದಿಂದ ಕೂಡಲೇ ಉಚ್ಛಾಟಿಸಬೇಕು ಎಂದು ಶ್ರೀರಾಮ ಸೇನೆ ರಾಜ್ಯ ಉಪಾಧ್ಯಕ್ಷ ಮಹಾಲಿಂಗಪ್ಪ ಗುಂಜಿಗಾವಿ ಹೇಳಿದರು.
ಸ್ಥಳೀಯ ಜಿಎಲ್‌ಬಿಸಿ ಅತಿಥಿಗೃಹದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ಶ್ರೀರಾಮ ಸೇನೇಯ ರಾಷ್ಟ್ರೀಯ ಗೌರವಾಧ್ಯಕ್ಷರು ಹಾಗೂ ಜೇವರ್ಗಿ ತಾಲೂಕಿನ ಆಂದೋಲ ಕರುಣೇಶ್ವರ ಮಠದ ಪೀಠಾಧೀಶ ಸಿದ್ಧಲಿಂಗ ಸ್ವಾಮಿಗಳ ಮತ್ತು ಅಲ್ಲಿಯ ಬಿಜೆಪಿ ಶಾಸಕ ಹಾಗೂ ಬಿಜೆಪಿ ಪಕ್ಷದ ಪದಾಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ ಮತ್ತು ಆತನ 8 ಜನ ಸಹಚರರೇ ಹೊಣೆಗಾರರೆಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಸಚಿನ್ ಪಾಂಚಾಳ ಅವರ ಸಾವಿಗೆ ನ್ಯಾಯ ಸಿಗಬೇಕು.
ರಾಜು ಕಪನೂರ ಮೇಲೆ ಈ ಮೊದಲೇ ಗುಂಡಾ ಕಾಯ್ದೆಯಡಿ ಕೇಸುಗಳು ದಾಖಲಾಗಿದೆ.ಅಂಥವರ ಮೂಲಕ ಅಲ್ಲಿಯ ಗುತ್ತಿಗೆದಾರ ಸಚಿನ್ ಪಾಂಚಾಳಗೆ 2 ಕೋಟಿ ಬಿಲ್ ತೆಗೆಯಲು 10 ಲಕ್ಷ ರೂ.ಬೇಡಿಕೆ ಇಡಲಾಗಿದೆ. 2 ಕೋಟಿ ರೂ. ಮೊದಲೇ ಸಾಲ ಮಾಡಿಕೊಂಡಿದ್ದ ಸಚಿನ್ 10 ಲಕ್ಷ ಎಲ್ಲಿಂದ ಕೊಡಬೇಕು.ಸಚಿವ ಪ್ರಿಯಾಂಕ್ ಖರ್ಗೆ ಗೂಂಡಾಗಳನ್ನು ಇಟ್ಟುಕೊಂಡು ಹಫ್ತಾ ವಸೂಲಿ ಹಾಗೂ ಗುತ್ತಿಗೆದಾರರಿಂದ ಹಣ ವಸೂಲಿ ದಂಧೆಗೆ ಇಳಿಸಿ ಜೀವ ಬೆದರಿಕೆ ಹಾಕಿದ ಪರಿಣಾಮ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹುಬ್ಬಳ್ಳಿಯಲ್ಲಿ ಮಠಗಳಿಗೆ ಬೆಂಕಿ ಹಚ್ಚಿದ ಪೊಲೀಸ್ ಜೀಪ್ ಮೇಲೆ ನಿಂತು ಭಾಷಣ ಮಾಡಿದ ಎಸ್‌ಡಿಪಿಐ ಕಾರ್ಯಕರ್ತರ ಮೇಲಿನ ಕೇಸ್‌ಗಳನ್ನು ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿದ್ದರಿಂದ ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಹಾಗೂ ಸಾಧು ಸಂತರಿಗೆ ಮಠಾಧಿಪತಿಗಳಿಗೆ ಕೊಲೆ ಬೆದರಿಕೆೆ ಎಗ್ಗಿಲ್ಲದೇ ಸಾಗಿದೆ.ಕಾಂಗ್ರೆಸ್ ಸರ್ಕಾರದಲ್ಲಿ ಪುಂಡಾಟಿಕೆ ಮಾಡುವವರನ್ನು ಜೈಲ್ ಒಳಗಡೆ ಹಾಕದೆ ರಾಜಾರೋಷವಾಗಿ ಹೊರಗಡೆ ಬಂದು ಮೆರೆದಾಡುವಂತೆ ಮಾಡಲಾಗುತ್ತಿದೆ.
ಇತ್ತೀಚೆಗೆ ಗದಗದಲ್ಲಿ ಹಿಂದೂ ಕಾರ್ಯಕರ್ತನ ಸಹೋದರಿಗೆ ಚುಡಾಯಿಸಿದವನನ್ನು ಸಹೋದರ ಪ್ರಶ್ನಿಸಿದ್ದಕ್ಕೆ 4-5 ಜನ ಎಸ್‌ಡಿಪಿಐ ಕಾರ್ಯಕರ್ತರು ಮಾರಕಾಸ್ತ್ರಗಳಿಂದ ಅವನ ಕುತ್ತಿಗೆಗೆ ಇರಿದಿದ್ದಾರೆ. .ಪಿಎಫೈ ಮುಂದುವರಿದ ಭಾಗವೇ ಎಸ್‌ಡಿಪಿಐ ಆಗಿದೆ.ಇಷ್ಟೆಲ್ಲಾ ಭೀಬತ್ಸ ಮೆರೆಯುತ್ತಿರುವ ಎಸ್‌ಡಿಪಿಐ ನಿಷೇಧಿಸಬೇಕು, ರಕ್ತಪಾತವೇ ಎಸ್‌ಡಿಪಿಐ ಕಾರ್ಯಕರ್ತರ ಕೆಲಸವಾಗಿದೆ.ಹಿಂದೂ ಕಾರ್ಯಕರ್ತರು,ಹಿಂದೂಗಳು, ದೇಶಭಕ್ತರು ಬದುಕಬಾರದೆ.ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಯಾರನ್ನು ಬೆಂಬಲಿಸುತ್ತಿದೆ.
ನಾನು ಮುಸ್ಲಿಂ ಅಥವಾ ಕ್ರಿಶ್ಚಿಯನ್‌ರ ವಿರೋಧಿಯಲ್ಲ ಮತ್ತು ಯಾವ ಪ್ಷದ ಪರ ಮತ್ತು ವಿರೋಧಿಯೂ ನಾವಲ್ಲ, ಅವರ ಮತ ಧರ್ಮ ಅವರಿಗೆ ಶ್ರೇಷ್ಠ.ನನ್ನದೇನೂ ತಕರಾರಿಲ್ಲ.ಆದರೆ ನಮ್ಮ ಹಿಂದೂಗಳ ಜೀವ ಕಾಪಾಡುವದು ನಮ್ಮ ಜವಾಬ್ದಾರಿ.ಅದನ್ನು ಹಿರಿಯರು ನಮಗೆ ಕಲಿಸಿದ್ದಾರೆ.
ಸಚಿವ ಪ್ರಿಯಾಂಕಾ ಖರ್ಗೆ ಅಂಥವರಿಂದ ಕಾಂಗ್ರೆಸ್ ಪಕ್ಷ ಉಳಿಯುವದಿಲ್ಲ.ಪಕ್ಷಕ್ಕೆ ಕಳಂಕ.ನಾನು ಕಾಂಗ್ರೆಸ್ ವಿರೋಧಿಯಲ್ಲ,ಶ್ರೀರಾಮ ಸೇನೆ ಯಾವ ಪಕ್ಷದ ಪರವಾಗಿ ಅಥವಾ ವಿರೋಧವಾಗಿ ಇಲ್ಲ.ಕಲಬುರ್ಗಿ ಜಿಲ್ಲೆಯಲ್ಲಿ ಹಿಂದೂಗಳನ್ನು,ಸಾಧು ಸಂತರನ್ನು ಸರ್ಕಾರ ರಕ್ಷಿಸಬೇಕೆಂದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ಪದಾಧಿಕಾರಿಗಳಾದ ಮಹಾಂತೇಶ ಗುಡೇಜಾಡರ,ಮಹಾಲಿಂಗಪ್ಪ ಹೊಸಪೇಟೆ,ಮಹಾಂತೇಶ ಜೀರಗಾಳ,ಸಿದ್ದು ಖೋತ,ದಶರಥ ಕಬಾಡಿ,ಚೇತನ ಬರಡೋಲ,ಪ್ರಲ್ಹಾದ ನೂಲಿ ಮುಂತಾದವರು ಇದ್ದರು.