ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ಮೋಸ: ತಡೆಯಲು ಆಗ್ರಹಿಸಿ ಮನವಿ
ವಿಜಯಪುರ 01; ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಹೋಗಲಾಡಿಸಲು ಹಲವಾರು ಬಾರಿ ಮನವಿ ಕೊಟ್ಟರೂ ಏನೂ ಪ್ರಯೋಜನ ಆಗಿರುವುದಿಲ್ಲ ಎಂದು ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ವಿ ರಮೇಶ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲೆಯ ಸಮಸ್ತ ರೈತರಿಗೆ ಆಗುತ್ತಿರುವ ಮೋಸ ತಡೆಯುವಂತೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡುತ್ತಾ ಕಾಯಂ ಕಾರ್ಯದರ್ಶಿ ಹುದ್ದೆ ಭರ್ತಿ ಮಾಡಬೇಕು, ಅಂದಾಗ ಮಾತ್ರ ರೈತರಿಗೆ ನ್ಯಾಯ ಸಿಗುವುದು, ಇಲ್ಲಿ ಪ್ರಮುಖವಾಗಿ ರೈತರಿಗೆ ತೂಕದಲ್ಲಿ ಮೋಸ, ತರಕಾರಿಗಳಿಗೆ ಶೇ 10ಅ ಕಮಿಷನ್, ಪ್ಯಾಕಿಂಗ್ ಹಾಗೂ ಹಮಾಲಿ, ಖಾಲಿ ಚೀಲ, ಸೂಟ್, ಜಕಾತಿ ಎಂದು ರೈತರಿಗೆ ಮೋಸದ ಮೇಲೆ ಮೋಸ ಮಾಡುತ್ತಿರುವುದು ನಿಲ್ಲಬೇಕು.
ದ್ರಾಕ್ಷಿ ಹರಾಜು ಪ್ರಕ್ರೀಯೆ ಹೊರಗಡೆ ಕೆ.ಐ.ಡಿ.ಬಿಯಲ್ಲಿ ಅನಧಿಕೃತವಾಗಿ ಖರೀದಿ ಮಾಡುತ್ತಿದ್ದು, ಯಥೇಚ್ಛವಾಗಿ ರೈತರಿಗೆ ಮೋಸ ಮಾಡಲಾಗುತಿದೆ. ಇದನ್ನು ಇಲ್ಲಿಯೇ ಎ.ಪಿ.ಎಂ.ಸಿ ಸಭಾಂಗಣದಲ್ಲಿಯೇ ಖರೀದಿಸಬೇಕು ಇದೇರೀತಿ ರೀತಿಯಲ್ಲಿ ಸಾಕಷ್ಟು ದೊಡ್ಡಮಟ್ಟದ ಅನ್ಯಾಯವಾಗುತ್ತಿದೆ. ಈ ಕುರಿತು ಎಲ್ಲಾ ವರ್ತಕರಿಗೆ ಸಭೆ ಕರೆದು ಎಚ್ಚರಿಕೆ ನೀಡಿ ರೈತರಿಗೆ ಆಗುತ್ತಿರುವ ಮೋಸ ನಿಲ್ಲುವಂತೆ ಮಾಡಬೇಕು ಎಂದರು.
ಈಗಾಗಲೇ ಈ ಕುರಿತು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಿಗೆ ಬೆಂಗಳೂರಿನ ಕಚೇರಿಯಲ್ಲಿ ಹಾಗೆ ಬೆಳಗಾವಿಯ ಸುವರ್ಣ ಸೌಧದ ರೈತ ಹೋರಾಟ ಸಮಯದಲ್ಲಿಯೂ ಮನವಿ ಸಲ್ಲಿಸಲಾಗಿದೆ ಅವರು ತುಂಬಾ ಒಳ್ಳೆಯ ರೀತಿ ಧನಾತ್ಮಕವಾಗಿ ಸ್ಪಂದನೇ ನೀಡಿ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ವಿಜಯಪುರ ಸೇರಿದಂತೆ ಎಲ್ಲಾ 13 ತಾಲೂಕುಗಳಲ್ಲಿ ರೈತರಿಗೆ ಅನುವಾಗುವ ನಿಟ್ಟಿನಲ್ಲಿ ನೂತನ ರೈತ ಭವನ, ರೈತರಿಗೆ ವಸತಿಗಾಗಿ ಕಟ್ಟಡ ನಿರ್ಮಿಸಬೇಕು. ಜೊತೆಗೆ ಜಿಲ್ಲೆಯ ರೈತ ಭವನ ಆಧುನಿಕರಿಸಿ ಯಾವಾಗಲೂ ರೈತರಿಗೆ ಅನುವಾಗುವ ನಿಟ್ಟಿನಲ್ಲಿ ಪ್ರಾರಂಭಿಸಬೇಕು ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಚೂನ್ನಪ್ಪಾ ಪೂಜೇರಿ ಅವರ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಯಾವಾಗಲೂ ರೈತಪರ ಕಾಳಜಿ ಹೊಂದಿ ಕಳೆದ ಹಲವಾರು ವರ್ಷಗಳಿಂದ ರೈತಪರ ಹೋರಾಟ ಮಾಡುತ್ತಿರುವ ನಮ್ಮ ಸಂಘಟನೆಗೆ ಎ.ಪಿ.ಎಂ.ಸಿಯಲ್ಲಿ ಉಚಿತವಾಗಿ ಒಂದು ಕಚೇರಿ ಮಾಡಿಕೊಡಬೇಕು ಇದರಿಂದ ಜಿಲ್ಲೆಯ 13 ತಾಲೂಕಿನ ರೈತರಿಗೆ, ಕಬ್ಬು ಬೆಳೆಗಾರರಿಗೆ ದ್ರಾಕ್ಷಿ ಬೆಳೆಗಾರರಿಗೆ ತೋಟಗಾರಿಕಾ ಬೆಳೆಗಾರರಿಗೆ ಅನುಕೂಲವಾಗುವುದು ಎಂದು ಮನವಿ ಮಾಡಿಕೊಂಡರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ, ವಿಜಯಪುರ ತಾಲೂಕಾ ಅಧ್ಯಕ್ಷ ಮಹಾದೇವಪ್ಪ ತೇಲಿ, ತಿಕೋಟಾ ತಾಲೂಕಾ ಅಧ್ಯಕ್ಷರಾದ ಸಾತಲಿಂಗಯ್ಯ ಸಾಲಿಮಠ, ನಗರ ಘಟಕ ಅಧ್ಯಕ್ಷರಾದ ಸಂಗಪ್ಪ ಟಕ್ಕೆ, ಜಿಲ್ಲಾ ಸಂಚಾಲಕರಾದ ಜಕರಾಯ ಪೂಜಾರಿ, ಗುರುಪಾದಯ್ಯ ಹಿರೇಮಠ, ಗೌಡಪ್ಪಗೌಡ ಸೇರಿದಂತೆ ಅನೇಕರು ಇದ್ದರು.