ಲೋಕದರ್ಶನ ವರದಿ
ಕೊಪ್ಪಳ 02: ಸಾಮಾಜಿಕ ಜಾಲತಾಣಗಳು ಪ್ರಬಲವಾಗಿರುವ ಕಾರಣ ಸಹಜವಾಗಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಬಗ್ಗೆ ಟೀಕೆಗಳು ಹೆಚ್ಚುತ್ತಿರುವುದು ಅಚ್ಚರಿಯೇನಲ್ಲ. ಆದ್ರೆ ಜನರು ಏನನ್ನು ನೋಡಲು, ಓದಲು, ಕೇಳಲು ಬಯಸುತ್ತಾರೋ ಅಂಥ ಸುದ್ದಿ, ಕಾರ್ಯಕ್ರಮಗಳನ್ನು ಕೊಡುತ್ತಿವೆ ಎಂದು ಪತ್ರಕರ್ತ, ನಟ, ನಿದರ್ೆಶಕ ಗೌರೀಶ್ ಅಕ್ಕಿ ಹೇಳಿದರು.
ನಗರದ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಶನಿವಾರ ಪದವಿ ನಂತರ ಪತ್ರಿಕೋದ್ಯಮದಲ್ಲಿರುವ ಅವಕಾಶಗಳ ಕುರಿತು ಅವರು ಉಪನ್ಯಾಸ ನೀಡಿದರು. ಮಾಧ್ಯಮಗಳು ಕೇವಲ ಮೌಢ್ಯವನ್ನಷ್ಟೇ ಬಿತ್ತುವ ಕೆಲಸ ಮಾಡುತ್ತಿವೆ ಎನ್ನುವುದು ಅರ್ಧ ಸತ್ಯ ಮಾತ್ರ. ಸಮಾಜಪರ ಕೆಲಸಗಳನ್ನು ತಿಳಿಸುವ ಮೂಲಕ ಅರಿವು, ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ ಎಂಬುದನ್ನೂ ಒಪ್ಪಿಕೊಳ್ಳಲೇಬೇಕು. ಎಲ್ಲ ಕಾರ್ಯಕ್ರಮಗಳು ಜನ ಯಾವುದನ್ನ ಹೆಚ್ಚು ಇಷ್ಟ ಪಡುತ್ತಾರೆ ಎಂಬುದನ್ನೇ ಅವಲಂಬಿಸಿವೆ. ಕೆಟ್ಟದ್ದು ಎಂಬ ಟೀಕೆ, ಅದನ್ನ ಜಾಸ್ತಿ ನೋಡಿದಾಗಲೇ ಬರುತ್ತದೆಯಲ್ಲವೇ? ಅದೇ ಕೆಟ್ಟದ್ದನ್ನ ಜನ ನೋಡದಿದ್ದರೆ, ಅಂಥ ಕಾರ್ಯಕ್ರಮಗಳು ಸಹಜವಾಗಿ ಮಾಯವಾಗುತ್ತವೆ ಎಂದು ಅವರು ವಿವರಿಸಿದರು.
ಆಸಕ್ತಿ ಇರುವ ಕೆಲಸವನ್ನ ವೃತ್ತಿಯನ್ನಾಗಿ ಸ್ವೀಕರಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸೆಟಲ್ ಆಗಬೇಕು ಎನ್ನುವ ಮನೋಧೋರಣೆ ಹಿಂದೆ ಬಿದ್ದರೆ ಯಾವ ಸಾಧನೆಯನ್ನು ಸಾಧಿಸಲು ಸಾಧ್ಯವಿಲ್ಲ. ಬರವಣಿಗೆ ಬಗ್ಗೆ ಆಸಕ್ತಿ ಇದ್ದರೆ ಸಾಗರದಷ್ಟು ಅವಕಾಶಗಳು ತೆರೆದುಕೊಳ್ಳುತ್ತವೆ. ಸ್ಪಷ್ಟ ಉಚ್ಛಾರ, ಮಧುರ ಧ್ವನಿ ಇದ್ದರೆ ಕಂಠದಾನದಂಥ ಹಲವು ಅವಕಾಶಗಳು ಕಣ್ಮುಂದೆ ಸುಳಿಯುತ್ತವೆ. ಕಷ್ಟಪಟ್ಟು ಏನನ್ನೂ ಮಾಡಬೇಕಿಲ್ಲ, ಏನೇ ಆಗಿರಲಿ ಇಷ್ಟಪಟ್ಟು ಮಾಡಬೇಕು ಎಂದು ಅವರು ಕರೆ ನೀಡಿದರು.
ವಿದ್ಯಾಥರ್ಿಗಳೊಂದಿಗೆ ಸಂವಾದ ನಡೆಸಿದ ಗೌರೀಶ್, ವಿದ್ಯಾಥರ್ಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರಾಧ್ಯಾಪಕ ಬಸವರಾಜ ಕರುಗಲ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಎಸ್.ದಾದ್ಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಪ್ರಾಧ್ಯಾಪಕರಾದ ಡಾ.ಬಸವರಾಜ ಪೂಜಾರ, ಡಾ.ದಯಾನಂದ ಸಾಳುಂಕೆ, ಶರಣಬಸಪ್ಪ ಬಿಳಿಯಲಿ ಇತರರು ಇದ್ದರು. ಪ್ರಾಧ್ಯಾಪಕ ನಾಗರಾಜ ದಂಡೋತಿ ನಿರೂಪಿಸಿ, ವಂದಿಸಿದರು.