ಲಿಂಗಪತ್ತೆ ಮತ್ತು ಭ್ರೂಣ ಹತ್ಯೆ ಎರಡು ಅಪರಾಧ; ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ
ಧಾರವಾಡ 30: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ-1098/112 ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ರಕ್ಷಣೆಗಾಗಿ ಇರುವ ಪಿ.ಸಿ.ಪಿ.ಎನ್.ಡಿ.ಟಿ ನಿಷೇಧ ಕಾಯ್ದೆ-1994, ಬಾಲನ್ಯಾಯ ಕಾಯ್ದೆ-2015, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಷೇಧ ಕಾಯ್ದೆ-2012, ಬಾಲ್ಯ ವಿವಾಹ ನಿಷೇದ ಕಾಯ್ದೆ-2006, ಹಾಗೂ ಮಕ್ಕಳಿಗೆ ಸಂಬಂಧಪಟ್ಟ ವಿವಿಧ ಕಾನೂನುಗಳ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ನಿನ್ನೆ (ಜ.29) ಧಾರವಾಡ ಅವರ್ ಲೇಡಿ ಆಪ್ ಲೂರ್ಧ ನರ್ಸಿಂಗ್ ಕಾಲೇಜ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಅವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾಡಿದರು. ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಪಡೆಯುವುದು ಅತೀ ಅವಶ್ಯವಾಗಿದೆ. ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆ ಪ್ರತಿಯೊಂದು ಸ್ಕ್ಯಾನಿಂಗ ಸೆಂಟರ ಹಾಗೂ ಆಸ್ಪತ್ರೆಗಳಲ್ಲಿ ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆ ಬಗ್ಗೆ ಅಳವಡಿಕೆ ಕಡ್ಡಾಯ, ಯಾವುದೇ ಲಿಂಗ ಪತ್ತೆ ಮಾಡುವ ಹಾಗಿಲ್ಲ. ಇದು ಕಾಯ್ದೆಯ ವಿರುದ್ಧವಾಗಿದೆ. ಗಂಡು ಮತ್ತು ಹೆಣ್ಣುಗಳಲ್ಲಿ ಪ್ರತಿಶತ ಲಿಂಗಾನುಪಾತ ಕಂಡು ಬಂದು ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇದೆ. ಲಿಂಗಪತ್ತೆ ಮತ್ತು ಭ್ರೂಣ ಹತ್ಯೆ ಎರಡು ಅಪರಾಧ. ಇಂತಹ ಕೃತ್ಯ ನೀವು ಮಾಡುವ ವೃತ್ತಿಯಲ್ಲಿ ಕಂಡು ಬಂದರೆ 1098/112ಗೆ ಕರೆ ಮಾಡಿ ತಿಳಿಸಿ. ನರ್ಸಿಂಗ್ ವಿದ್ಯಾರ್ಥಿಗಳು ಜೀವ ಉಳಿಸುವ ಕೆಲಸಮಾಡಬೇಕೆ ಹೊರತು ಜೀವ ತೆಗೆಯುವ ಕೆಲಸ ಮಾಡಬಾರದು. ಪರಿತ್ಯಕ್ತ, ಒಪ್ಪಿಸುವ ಅನಾಥ ಮಕ್ಕಳನ್ನು ಪುನರ್ವಸತಿಗೊಳಿಸಲು ಇಲಾಖೆ ಇದೆ. ಜಿಲ್ಲೆಯಲ್ಲಿ ಸ್ವೀಕಾರ ಕೇಂದ್ರಗಳು ಇವೆ. ಇಂತಹ ಸಂಸ್ಥೆಗಳ ಬಗ್ಗೆ ಮಾಹಿತಿ ಪಡೆದು ಮಕ್ಕಳ ಪುನರ್ವಸತಿ ಮಾಡುವುದು ನಿಮ್ಮ ಜವಾಬ್ದಾರಿ. ಪೊಕ್ಸೊ ಮತ್ತು ಬಾಲ್ಯ ವಿವಾಹ ಹಾಗೂ ಮಕ್ಕಳ ಕಾಯ್ದೆ ಕುರಿತು ನೀವು ಕಾನೂನು ಅರಿವು ಪಡೆಯಬೇಕು ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ. ಮಹೇಶ ಚಿತ್ತರಗಿ ಅವರು ಮಾತನಾಡಿ, ತಾಯಿ ಮರಣ ಹಾಗೂ ಶಿಶು ಮರಣ ತಡೆದರೆ ಮಾತ್ರ ದೇಶದ ಅಭಿವೃಧ್ಧಿಯಾಗುತ್ತದೆ. ಭಾರತ ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ ಮತ್ತು ಲಿಂಗ ಪತ್ತೆ ಮಾಡಬಾರದು ಎಂದು ಸರ್ಕಾರ ಹಲವಾರು ಯೋಜನೆ, ಭಾಗ್ಯಲಕ್ಷ್ಮೀ, ಮಾತೃ ವಂದನಾ, ಮಾತೋಶ್ರೀ, ಮಾತೃಪೂರ್ಣ ಯೋಜನೆ ಮಧ್ಯಾಹ್ನ ಬಿಸಿಯೂಟ ಯೋಜನೆ ಹಾಗೂ ಭೇಟಿ ಬಚಾವೋ ಭೇಟಿ ಪಡಾವೋ ಹೀಗೆ ಹಲವಾರು ಯೋಜನೆ ಮಾಡಿ ಹೆಣ್ಣು ಮಕ್ಕಳ ಅಭಿವೃಧ್ಧಿಗಾಗಿ ಸರ್ಕಾರ ಹಲವಾರು ಯೋಜನೆ ಜಾರಿಗೆ ತರಲಾಗಿದೆ. ಎಲ್ಲ ಯೋಜನೆಗಳನ್ನು ಫಲಾನುಭವಿಗಳಿಗೆ ಮುಟ್ಟಿಸಿ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಲು ಎಲ್ಲರೂ ಶ್ರಮಿಸೋಣ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಶೋಕ ಮಜ್ಜಗಿ ಅವರು ಮಾತನಾಡಿ, ಸರ್ಕಾರದ ಎಲ್ಲಾ ಯೋಜನೆಗಳು ಕಟ್ಟ ಕಡೆಯ ಹಳ್ಳಿಯವರೆಗೂ ತಲುಪಬೇಕು. ಯಾವುದೇ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಕೇವಲ ಇಲಾಖೆಯವರು ಮಾತ್ರವಲ್ಲದೆ ಸಾರ್ವಜನಿಕರು ಸಹ ಪಾಲ್ಗೋಳ್ಳಬೇಕು. ಬಾಲ್ಯವಿವಾಹ ಒಂದು ಅನಿಷ್ಠ ಪದ್ಧತಿಯಾಗಿದ್ದು, ಅದನು ಸಂಪೂರ್ಣವಾಗಿ ಹೋಗಲಾಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅವರ್ ಲೇಡಿ ಆಪ್ ಲೂರ್ಧ ನರ್ಸಿಂಗ್ ಕಾಲೇಜನ ಪ್ರಾಂಶುಪಾಲೆ ಸಿಸ್ಟರ್ ಮವಲೆ ಅವರು ಮಾತನಾಡಿ, ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದು ನಮ್ಮ ಸೌಭಾಗ್ಯ ಸದರಿ ಕಾಯ್ದೆಯ ಕುರಿತು ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಅರಿವು ಬಹಳ ಮುಖ್ಯ ಕಾಯ್ದೆಯ ಅನುಷ್ಠಾನವು ವೈದ್ಯಕೀಯ ಕ್ಷೇತ್ರದಲ್ಲಿ ಬಹಳ ಪ್ರಮುಖ ಸ್ಥಾನವನ್ನು ವಹಿಸಿದೆ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೋಬೆಷನ್ ಅಧಿಕಾರಿ ನೂರಜಹಾನ ಕಿಲ್ಲೆದಾರ ಅವರು ಬಾಲ್ಯ ವಿವಾಹ ನಿಷೇಧ ಕಾಯ್ದೆ-2006, ಕರ್ನಾಟಕ ತಿದ್ದುಪಡಿ ಕಾಯ್ದೆ-2016, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2012 ಕುರಿತು ಹಾಗೂ ಮಕ್ಕಳಿಗೆ ಸಂಬಂಧಪಟ್ಟ ವಿವಿಧ ಕಾನೂನುಗಳ ಕುರಿತು ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀತಾ ವಾಡಕರ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯಕ್ರಮವನ್ನು ಮಹ್ಮದಅಲಿ ತಹಶೀಲ್ದಾರ ಅವರು ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಭಾಗವಹಿಸಿದ್ದರು.