ಇಲಾಖೆಗೆ ಬಿಡುಗಡೆಯಾದ ಅನುದಾನ ಲ್ಯಾಪ್ಸ್ ಆದರೆ ಸಂಬಂಧಿಸಿದ ಅಧಿಕಾರಿಗಳನ್ನು ಜವಾಬ್ದಾರ ಮಾಡಿ, ಕ್ರಮಕೈಗೊಳ್ಳಲಾಗುತ್ತದೆ: ಸಚಿವ ಸಂತೋಷ ಲಾಡ್
ಧಾರವಾಡ 28: ವಿವಿಧ ಇಲಾಖೆಗಳ ಮೂಲಕ ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ಸರಕಾರ ಬಿಡುಗಡೆ ಮಾಡಿರುವ ಅನುದಾನ ಮಾರ್ಚ 31 ರೊಳಗೆ ಪೂರ್ಣ ಬಳಕೆ ಆಗದೆ, ಲ್ಯಾಪ್ಸ್ ಆದರೆ ಸಂಬಂಧಿಸಿದ ಇಲಾಖೆ ಅಧಿಕಾರಿಯನ್ನು ಜವಾಬ್ದಾರರನ್ನಾಗಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವದಾಗಿ ಕಾರ್ಮಿಕ ಇಲಾಖೆ ಮತ್ತು ಧಾರವಾಡ ಜಿಲ್ಲೆ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ 2024-25 ನೇ ಸಾಲಿನ ಡಿಸೆಂಬರ-2024 ರ ಅಂತ್ಯಕ್ಕೆ ಕೊನೆಗೊಂಡ 3ನೇ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರೀಶೀಲನಾ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಹಿಂದಿನ ಕೆ.ಡಿ.ಪಿ ಸಭೆಯಲ್ಲಿ ನೀಡಿದ ನಿರ್ದೇಶನಗಳ ಪ್ರಕಾರ ಇಲಾಖಾ ಕಾರ್ಯಕ್ರಮಗಳಲ್ಲಿ ಅಭಿವೃದ್ಧಿ ಕಾರ್ಯಗಳು ಅಷ್ಟು ತೃಪ್ತಿಕರವಾಗಿಲ್ಲ. ಕೆಲವು ಇಲಾಖೆಗಳು ನೀಡಿರುವ ಅನುದಾನ ಬಳಕೆಯಲ್ಲೂ ಹಿಂದಿಳಿದಿವೆ. ಏನೆ ಕಾರಣಗಳಿದ್ದರೂ ನಿಯಮಾವಳಿ ಪ್ರಕಾರ ಅನುಮೋದಿತ ಕ್ರಿಯಾಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು ಮತ್ತು ಬಿಡುಗಡೆ ಆಗುವ ಅನುದಾನವನ್ನು ಪೂರ್ಣವಾಗಿ ಬಳಸಿ, ಕಾಮಗಾರಿ ಮುಕ್ತಾಯಗೊಳಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಸಿದರು.
ಹಲವಾರು ವರ್ಷಗಳಿಂದ ಇಲಾಖೆಗಳಲ್ಲಿರುವ ಅಧಿಕಾರಿಗಳು ಹೊಸ ವಿಚಾರಗಳೊಂದಿಗೆ ಸಭೆಗೆ ಬರಬೇಕು. ತಮ್ಮ ಜ್ಞಾನ ಮತ್ತು ಅನುಭವ ಬಳಸಿ, ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಹೊಸ ಯೋಜನೆ, ಕಾರ್ಯಕ್ರಮಗಳನ್ನು ತರಲು ಸರಕಾರಕ್ಕೆ ಸಲಹೆ ನೀಡಬೇಕೆಂದು ಸಚಿವರು ಹೇಳಿದರು.
ಹಿಂದಿನ ವರ್ಷದ ಪ್ರಗತಿ, ಕಾರ್ಯಕ್ರಮಗಳ ಅನುಷ್ಠಾನದ ಹೊಲಿಕೆ ಮಾಡಿ, ಸಾಧನೆಯನ್ನು ನಿರ್ಧರಿಸಬೇಕು. ಪ್ರತಿ ಸಭೆಯಲ್ಲಿ ಅಧಿಕಾರಿಗಳಿಗೆ ಈ ಕುರಿತು ನಿರ್ದೇಶನ ನೀಡಿದರು ಅವರು ಸ್ಪಂದಿಸುತ್ತಿಲ್ಲ. ಅವರದೇ ಇಲಾಖೆಯ ಬೆಸಿಕ್ ಮಾಹಿತಿ ಅವರಲ್ಲಿ ಇರುವುದಿಲ್ಲ. ಇದು ನಿಮ್ಮ ಒಳಗೊಳ್ಳುವಿಕೆಯನ್ನು ತೋರಿಸುತ್ತದೆ ಎಂದು ಸಚಿವ ಸಂತೋಷ ಲಾಡ್ ಬೇಸರ ವ್ಯಕ್ತಪಡಿಸಿದರು.
ಎಲ್ಲ ಅಧಿಕಾರಿಗಳಿಗೆ ದಿನಚರಿ ಕಡ್ಡಾಯ: ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಕಾಲ ಕಳೆಯದೆ ಕ್ಷೇತ್ರ ಭೇಟಿ ಮೂಲಕ ಗ್ರಾಮಗಳಿಗೆ, ಕಾಮಗಾರಿ ಸ್ಥಳಗಳಿಗೆ, ಇಲಾಖೆ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಪ್ರತಿ ಅಧಿಕಾರಿ ದಿನನಿತ್ಯ ನಿರ್ವಹಿಸುವ ಕಚೇರಿ ಕಾರ್ಯಗಳ ಕುರಿತು ಡೈರಿ ಬರೆಯಬೇಕು. ಮುಂದಿನ ಕೆಡಿಪಿ ಸಭೆಗೆ ತಪ್ಪದೇ ತಮ್ಮ ದಿನಚರಿ (ಡೈರಿ)ಯೊಂದಿಗೆ ಬರಬೇಕೆಂದು ಸಚಿವರು ನಿರ್ದೇಶಿಸಿದರು.
ಸೊನ್ನೆ ಸಾಧನೆ ಮಾಡುವ ಶಿಕ್ಷಕರಿಗೆ ಸನ್ಮಾನ: ವಿದ್ಯಾಕಾಶಿ ಎಂಬ ಅನ್ವರ್ಥಕ ನಾಮದ ಧಾರವಾಡ ಜಿಲ್ಲೆ ಇಂದು ಮಕ್ಕಳ ಶಿಕ್ಷಣದಲ್ಲಿ ಹಿಂದುಳಿದಿದೆ. ಪ್ರಸಕ್ತ ಸಾಲಿನಲ್ಲಿ ಹೆಚ್ಚು ಸಾಧನೆ ಮಾಡಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ನೇತೃತ್ವದಲ್ಲಿ ಮಿಷನ್ ವಿದ್ಯಾಕಾಶಿ ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ವಿಶೇಷ ತರಬೇತಿ, ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಂದು ಅನುದಾನಿತ ಹಾಗೂ ಎರಡು ಅನುದಾನ ರಹಿತ ಶಾಲೆಗಳಲ್ಲಿನ ಒಬ್ಬ ವಿದ್ಯಾರ್ಥಿಯೂ ಉತ್ತೀರ್ಣ ಆಗಿಲ್ಲ. ಹೀಗೆ ಶೂನ್ಯ ಸಾಧನೆ ಮಾಡಿದ ಮತ್ತು ಈ ವರ್ಷ ಶೂನ್ಯ ಸಾಧನೆ ಮಾಡುವ ಶಾಲೆಗಳ ಶಿಕ್ಷಕರಿಗೆ ಜಿಲ್ಲಾ ಮಟ್ಟದಲ್ಲಿ, ರಾಷ್ಟ್ರೀಯ ಹಬ್ಬಗಳಲ್ಲಿ ಸನ್ಮಾನ ಮಾಡಲಾಗುತ್ತದೆ. ಇಂತವರು ಆತ್ಮಸಾಕ್ಷಿ ಕೇಳಿಕೊಂಡು ಕೆಲಸ ಮಾಡಬೇಕು. ಇಂತಹ ಶಾಲೆ, ಶಿಕ್ಷಕರನ್ನು ಮುಂದಿನ ದಿನಗಳಲ್ಲಿ ಸಹಿಸುವದಿಲ್ಲ. ಅಂತವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವದಾಗಿ ಸಚಿವ ಸಂತೋಷ ಲಾಡ್ ಸಭೆಯಲ್ಲಿ ಎಚ್ಚರಿಸಿದರು.
ವಿಧಾನ ಪರಿಷತ್ ಸರಕಾರದ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಅವರು ಮಾತನಾಡಿ, ಶಾಲೆ ಬಿಟ್ಟ ಮಕ್ಕಳ ಮಾಹಿತಿ ಸಂಗ್ರಹಿಸಬೇಕು. ಅದಕ್ಕೆ ಕಾರಣ ತಿಳಿದು ಅವರ ಮುಂದಿನ ಶಿಕ್ಷಣಕ್ಕೆ ಸಹಾಯ ಮಾಡಬೇಕು ಅಥವಾ ಕೌಶಲ್ಯಾಭಿವೃದ್ಧಿ ನೀಡಿ ಉದ್ಯೋಗಸ್ಥರನ್ನಾಗಿ ಮಾಡಬೇಕು ಎಂದರು.
ಅಧಿಕಾರಿಗಳು ಸಭೆಗಳಲ್ಲಿ ಜವಾಬ್ದಾರಿಯಿಂದ ಭಾಗವಹಿಸಬೇಕು. ಕೆಡಿಪಿ, ಪ್ರಮುಖ ಸಭೆಗಳಿಗೆ ಇಲಾಖೆಯ ಪೂರ್ಣ ಮಾಹಿತಿ, ಸಿದ್ಧತೆಯೊಂದಿಗೆ ಬರಬೇಕು ಎಂದರು.
ಶಾಸಕ ಎನ್.ಎಚ್.ಕೋನರಡ್ಡಿ ಅವರು ಮಾತನಾಡಿ, ಮುಂಬರುವ ಬಜೆಟ್‌ದಲ್ಲಿ ಜಿಲ್ಲೆಗೆ ಆದ್ಯತೆ ಸೀಗುವಂತೆ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಬೇಕು. ಜಿಲ್ಲೆಯ ನೀರಾವರಿ, ಶಿಕ್ಷಣ, ವಸತಿ ನಿಲಯ, ರಸ್ತೆ ಮುಂತಾದ ಮುಲಭೂತ ಸೌಕರ್ಯಗಳಿಗೆ ಆದ್ಯತೆ ಸೀಗುವಂತೆ ಮಾಡಬೇಕೆಂದರು.
ಗ್ರಾಮೀಣ ಕುಡಿಯುವ ನೀರು ಹಾಗೂ ಅವಳಿನಗರದ ಕುಡಿಯುವ ನೀರಿನ ಮುಖ್ಯ ಯೋಜನೆಗಳ ಕಾಮಗಾರಿ ಹೊಂದಿರುವ ಕಂಪನಿ ನೀರೀಕ್ಷಿತ ಮಟ್ಟದಲ್ಲಿ ಕಾರ್ಯ ಮಾಡುತ್ತಿಲ್ಲ. ಅವರ ನಿಧಾನಗತಿ ನೋಡಿದರೆ ಜೂನ್ ಒಳಗೆ ಕೆಲಸ ಆಗುವಂತೆ ಕಾಣುವಂತ್ತಿಲ್ಲ. ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕಂಪನಿ ಮುಖ್ಯಸ್ಥರ ಹಾಗೂ ಅಧಿಕಾರಿಗಳ ಸಭೆ ಜರುಗಿಸುವಂತೆ ಸಚಿವರಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ ವಿನಂತಿಸಿದರು.
ಶಾಸಕ ಎಂ.ಆರ್.ಪಾಟೀಲ ಅವರು ಮಾತನಾಡಿ, ರೈತರ ಬೆಳೆಗಳು ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗಿದ್ದರೂ ಗಮನಿಸದೆ ಅಧಿಕಾರಿಗಳು, ಉತ್ತಮ ಬೆಳೆ ಇರುವ ಕೆಲವೆ ಕೆಲವು ತೋಟಗಳಲ್ಲಿ ಬೆಳೆ ಆನೆವಾರಿ ಮಾಡುತ್ತಾರೆ. ಅಲ್ಲಿ ಸೀಗುವ ಇಳುವರಿ ದಾಖಲಿಸುತ್ತಾರೆ. ಇದರಿಂದ ಶೆ. 90 ರಷ್ಟು ರೈತರಿಗೆ ಹಾನಿ ಆಗುತ್ತದೆ. ಮತ್ತು ಬೆಳೆ ಆನೆವಾರಿಗೆ ಬರುವಾಗ ರೈತರಿಗೆ, ಪ್ರಮುಖರಿಗೆ, ಜನಪ್ರತಿನಿಧಿಗಳಿಗೆ ತಿಳಿಸದೆ ಬರುತ್ತಾರೆ. ಪ್ರತಿ ಬೆಳೆ ಆನೆವಾರಿಗೆ ನನಗೆ ತಿಳಿಸಲಿ, ನಾನು ಹೋಗುತ್ತೇನೆ ಎಂದರು. ಮತ್ತು ಆಯಾ ಮತಕ್ಷೇತ್ರದ ಶಾಸಕರಿಗೆ ಅವರ ಕ್ಷೇತ್ರದ ಕಾರ್ಯಕ್ರಮ, ಯೋಜನೆಗಳ ಬಗ್ಗೆ ಅಧಿಕಾರಿಗಳು ತಪ್ಪದೇ ಮಾಹಿತಿ ನೀಡುವಂತೆ ತಾವು ನಿರ್ದೇಶನ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ತಿಳಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಇಲಾಖೆಗಳ ಪ್ರಗತಿ ಪರೀಶೀಲನೆ ಮಾಡಲಾಗಿದ್ದು, ತಾಂತ್ರಿಕ ಕಾರಣಗಳಿಂದಾಗಿ ಕೆಲವು ಇಲಾಖೆಗಳು ನಿಗದಿತ ಗುರಿ ಸಾಧಿಸಿರುವದಿಲ್ಲ. ಎಲ್ಲ ಅಧಿಕಾರಿಗಳು ಫಲನಾಭವಿ ಆಧಾರಿತ ಯೋಜನೆಗಳಿಗೆ ಅಗತ್ಯವಿದ್ದರೆ ತಕ್ಷಣ ಶಾಸಕರ ಅನುಮೋದನೆ ಪಡೆದು ಅನುಷ್ಠಾನಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದರು.
ಅವಳಿನಗರದ ನಿರಂತರ ನೀರು ಯೋಜನೆ ಶೀಘ್ರ ಅನುಷ್ಠಾನಕ್ಕೆ ಅಗತ್ಯ ಕಾರ್ಮಿಕರನ್ನು ಬಳಸಿ, ಪೂರ್ಣಗೊಳಿಸಲು ಸೂಚಿಸಲಾಗಿದೆ. ಅಪೌಷ್ಠಿಕತೆ ಇರುವ ಮಕ್ಕಳಿಗೆ ಹೆಚ್ಚು ಆದ್ಯತೆ ನೀಡಿ ಆರೈಕೆ ನೋಡಿಕೊಳ್ಳಲು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಸಚಿವರ ನಿರ್ದೇಶನದಂತೆ ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ ಅನುದಾನವನ್ನು ಪೂರ್ಣ ಬಳಕೆ ಮಾಡಿ, ಅಭಿವೃದ್ಧಿ ಸಾಧಿಸಲು, ಇಲಾಖಾ ಅಧಿಕಾರಿಗಳೊಂದಿಗೆ ನಿರಂತರ ಫಾಲೋ ಅಪ್ ಮಾಡಲಾಗುತ್ತದೆ. ನರೇಗಾದಲ್ಲಿ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಇಲಾಖಾವಾರು ಪ್ರಗತಿ ಪರೀಶೀಲನೆ ನಡೆಸಿ ನಿಗದಿತ ಗುರಿ, ಅಭಿವೃದ್ಧಿ ಸಾಧಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ್, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ ವೇದಿಕೆಯಲ್ಲಿದ್ದರು.
ಶಾಲಾ ಶಿಕ್ಷಣ ಇಲಾಖೆ: ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಜಿಲ್ಲೆಯಲ್ಲಿ 28,648 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 15,291 ಗಂಡು ಮಕ್ಕಳು ಮತ್ತು 14,655 ಹೆಣ್ಣು ಮಕ್ಕಳು ಸೇರಿದ್ದಾರೆ. ಕಳೆದ ವರ್ಷದ ವಾರ್ಷಿಕ ಪರೀಕ್ಷೆ ನಂತರ ಸುಮಾರು 1,398 ಮಕ್ಕಳಲ್ಲಿ ಶಾಲೆ ಕಲಿಕೆ ಬಿಟ್ಟಿದ್ದು, ಈ ಕುರಿತು ವರದಿ ಸಲ್ಲಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ ಸಭೆಯಲ್ಲಿ ಹೇಳಿದರು.
ಕೃಷಿ ಇಲಾಖೆ: ಜನವರಿ 1 ರಿಂದ ಡಿಸೆಂಬರ 31 ರವರೆಗ ಜಿಲ್ಲೆಯಲ್ಲಿ ವಾಡಿಕೆ ಮಳೆ 787.10 ಮೀ.ಮೀಟರಗೆ 890.20 ಮೀ.ಮೀಟರ ವಾಸ್ತವಿಕ ಮಳೆ ಆಗಿದೆ. ಮುಂಗಾರಿನಲ್ಲಿ 16,787.42 ಕ್ವಿಂಟಾಲ್ ಹಾಗೂ ಹಿಂಗಾರಿನಲ್ಲಿ 37,483.33 ಕ್ವಿಂಟಾಲ ಬಿತ್ತನೆ ಬೀಜ ವಿತರಿಸಲಾಗಿದೆ. ಹಿಂಗಾರಿನಲ್ಲಿ 2,01,314 ಹೆಕ್ಟೆರ ಪ್ರದೇಶದಲ್ಲಿ ಬೀತನೆಯಾಗಿದೆ. ಅಗತ್ಯ ಗೊಬ್ಬರ, ಕಳೆನಾಶಕ, ಕೀಟನಾಶಕ ಜಿಲ್ಲೆಯಲ್ಲಿ ಲಭ್ಯವಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ತಿಳಿಸಿದರು.
ತೋಟಗಾರಿಕೆ ಇಲಾಖೆ: ಜಿಲ್ಲೆಯಲ್ಲಿ ಪ್ರಮುಖವಾಗಿ ಮಾವು, ಕೆಂಪು ಮೆಣಸಿನಕಾಯಿ, ಈರುಳ್ಳಿ ಮತ್ತು ಆಲೂಗಡ್ಡೆ ತೋಟಗಾರಿಕೆ ಬೆಳೆಗಳಾಗಿದ್ದು, ಬಾಳೆ, ಚಿಕ್ಕು, ಪೇರಲ ಸಹ ಬೆಳೆಯಲಾಗುತ್ತಿದೆ. ಪ್ರಸಕ್ತ ಸಾಲಿಗೆ ಮಾವು ಉತ್ತಮ ಫಸಲು ಬರುವ ನೀರೀಕ್ಷೆ ಇದೆ ಎಂದು ಉಪನಿರ್ದೇಶಕ ಕೆ.ಸಿ.ಭದ್ರಣ್ಣವರ ತಿಳಿಸಿದರು.
ಪಶುಪಾಲನೆ ಇಲಾಖೆ: ಇಲಾಖೆಯ ಯೋಜನೆಗಳನ್ನು ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನ ಮಾಡಿದ್ದು ಬಿಡುಗಡೆ ಆಗಿರುವ ಅನುದಾನಕ್ಕೆ ಶೇ. 74.09 ರಷ್ಟು ಪ್ರಗತಿ ಸಾಧಿಸಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಶೇ. 100 ರಷ್ಟು ಅಭಿವೃದ್ಧಿ ಸಾಧಿಸಲಾಗುವುದು ಎಂದು ಉಪನಿರ್ದೇಶಕ ಡಾ. ರವಿ ಸಾಲಿಗೌಡರ ಅವರು ಹೇಳಿದರು.
ಆರೋಗ್ಯ ಇಲಾಖೆ: ಜಿಲ್ಲೆಯಲ್ಲಿ ಕಳೆದ ಎಪ್ರಿಲ್ 2024 ರಿಂದ ಡಿಸೆಂಬರ್ 31 ರವರೆಗೆ ಒಟ್ಟು 23,708 ಹೆರಿಗೆಗಳಾಗಿದ್ದು, ಇದರಲ್ಲಿ ಧಾರವಾಡ ಜಿಲ್ಲೆಯ 11 ಹಾಗೂ ಇತರ ಜಿಲ್ಲೆಗಳಿಂದ ಆಗಮಿಸಿದ್ದ 24 ತಾಯಂದಿರ ಮರಣವಾಗಿದೆ. ಮಕ್ಕಳ ಲಸಿಕಾಕರಣದಲ್ಲಿ ಶೇ. 97 ರಷ್ಟು ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಕ್ಷಯರೋಗ ಪತ್ತೆ ಅಭಿಯಾನ ನಡೆದಿದೆ.
ಆರೋಗ್ಯ ಕೇಂದ್ರಗಳು ಮೆಽಽ ಪಂಚಿಮ್ ಬಂಗಾ ಫಾರಮೇಟಿಸಿಕಲ್ ಸಂಸ್ಥೆಯು ತಯಾರಿಸಿದ ಐವಿ ಓಷಧಿಗಳನ್ನು ತಾತ್ಕಾಲಿಕವಾಗಿ ಪ್ರತ್ಯೇಕವಾಗಿ ಸಂಗ್ರಹಿಸಡಲು ಸೂಚಿಸಲಾಗಿದೆ. ಓಷಧಿಯ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ಜಿಲ್ಲೆಯಲ್ಲಿ ತೀವ್ರ ಅಪೌಷ್ಠಿಕತೆಯ 93 ಹಾಗೂ ಸಾಧಾರಣ ಅಪೌಷ್ಟಿಕತೆಯ 2,278 ಮಕ್ಕಳು ಇದ್ದಾರೆ. ಅವರಿಗೆ ವಾರದಲ್ಲಿ ಐದು ದಿನ ಮೊಟ್ಟೆ, ಹಾಲು, ಶಾಯಿಶೂರ್ ಚಾಕೊ ಮಾಲ್ಟ್ ನೀಡಲಾಗುತ್ತದೆ. ನಿರಂತರವಾಗಿ ಈ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಮತ್ತು ತೀವ್ರ ಅಪೌಷ್ಠಿಕತೆ ಇರುವ ಮಕ್ಕಳಿಗೆ ಜಿಲ್ಲಾಆಸ್ಪತ್ರೆ ಹಾಗೂ ಕಿಮ್ಸ್ ಆಸ್ಪತ್ರೆಯಲ್ಲಿ 14 ದಿನಗಳ ಕಾಲ ಚಿಕಿತ್ಸೆ, ಹಾರೈಕೆ ನೀಡಲಾಗುತ್ತದೆ ಎಂದು ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರ ಹೇಳಿದರು.
ಸಭೆಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಲೋಕೋಪಯೋಗಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ನರೇಗಾ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನೆ ನಡೆಸಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಸ್ವಾಗತಿಸಿ, ಸಭೆ ನಿರ್ವಹಿಸಿದರು. ಉಪ ಕಾರ್ಯದರ್ಶಿ ಬಿ.ಎಸ್.ಮೂಗನೂರಮಠ ವಂದಿಸಿದರು. ಸಭೆಯಲ್ಲಿ ಕೆ.ಡಿ.ಪಿ ನಾಮನಿರ್ದೇಶಿತ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.