ಗಾಂಧಿ ಭವನ ನಿರ್ಮಾಣ ಸ್ಥಳಕ್ಕೆ ಡಿಸಿ ಭೇಟಿ. ಕಾಮಗಾರಿ ಪರೀಶೀಲನೆ; ಶೀಘ್ರದಲ್ಲಿ ಲೋಕಾರೆ್ಣಗೆ ಕ್ರಮ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ .31: ಕರ್ನಾಟಕ ಸರಕಾರವು ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳನ್ನು ಸಾರ್ವಜನಿಕವಾಗಿ ಹೆಚ್ಚು ಹೆಚ್ಚು ಪ್ರಚುರಪಡಿಸಲು ಅನುಕೂಲವಾಗುವಂತೆ ಜಿಲ್ಲಾ ಕೇಂದ್ರದಲ್ಲಿ ಗಾಂಧಿ ಭವನ ನಿರ್ಮಿಸಲು ಆದೇಶಿಸಿದ್ದು, ಅದರಂತೆ ಧಾರವಾಡದಲ್ಲಿ ಗಾಂಧಿ ಭವನ ನಿರ್ಮಿಸಲಾಗಿದ್ದು, ಜಿಲ್ಲಾ ಉಸ್ತವಾರಿ ಸಚಿವರ ಗಮನಕ್ಕೆ ತಂದು ಶೀಘ್ರದಲ್ಲಿ ಭವನ ಲೋಕಾರೆ್ಣ ಮಾಡುವದಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ, ಧಾರವಾಡ ನಗರದ ಹೊಸ ಬಸನಿಲ್ದಾಣ ಎದುರಿಗೆ ನಿರ್ಮಾಣವಾಗಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗಾಂಧಿ ಭವನ ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ನಂತರ, ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಕರ್ನಾಟಕ ಸರಕಾರವು 2016-17 ನೇ ಸಾಲಿನ ಆಯವ್ಯಯದಲ್ಲಿ ಮಹಾತ್ಮ ಗಾಂಧೀಜಿಯವರ ಜೀವನ, ತತ್ವ, ಸಂದೇಶ ಮತ್ತು ಗಾಂಧಿ ವಿಚಾರಧಾರೆಗಳನ್ನು ಹೆಚ್ಚು ಪ್ರಚಾರ ಕೈಗೊಳ್ಳಲು ಪ್ರತಿ ಜಿಲ್ಲೆಯಲ್ಲಿ ತಲಾ ರೂ.3 ಕೋಟಿ ಅನುದಾನದಲ್ಲಿ ಗಾಂಧಿ ಭವನ ನಿರ್ಮಿಸಲು 2018 ರಲ್ಲಿ ಅನುದಾನ ಬಿಡುಗಡೆ ಮಾಡಿತ್ತು. ಅದರಂತೆ ಅಂದಿನ ಜಿಲ್ಲಾಧಿಕಾರಿಗಳು ಗುಲಗಂಜಿಕೊಪ್ಪದ ಸರ್ವೆ ನಂ: 80 ಅಂದರೆ, ಹೊಸ ಬಸ ನಿಲ್ದಾಣದ ಎದುರಿಗೆ ಇರುವ ಜಾಗದಲ್ಲಿ 29 ಗುಂಟೆ ಜಮೀನನ್ನು ಗಾಂಧಿ ಭವನ ನಿರ್ಮಿಸಲು ನೀಡಿದ್ದರು.
ಸರಕಾರದ ಸೂಚನೆಯಂತೆ ಸೆಪ್ಟೆಂಬರ 2020 ರಲ್ಲಿ ಕರ್ನಾಟಕ ರೂರಲ್ ಇನ್ ಫ್ರಾಸ್ಟ್ರಕ್ಚರ್ ಡೆವೆಲಪಮೆಂಟ್ ಲಿ. ಧಾರವಾಡ ಇವರಿಗೆ ಕಾಮಗಾರಿ ವಹಿಸಿ, ಆದೇಶಿಸಲಾಗಿತ್ತು. ಈಗ ಕಾಮಗಾರಿ ಪೂರ್ಣಗೊಂಡಿದ್ದು, ಕೊನೆಯ ಹಂತದ ಫಿನಿಶಿಂಗ್ ಕೆಲಸ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಈ ಕುರಿತು ಚರ್ಚಿಸಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರೊಂದಿಗೆ ಮಾತನಾಡಿ ಶೀಘ್ರದಲ್ಲಿ ಜನ ಬಳಕೆಗಾಗಿ ಕಟ್ಟಡ ಲೋಕಾರೆ್ಣ ಕಾರ್ಯಕ್ರಮ ಮಾಡಲಾಗುತ್ತದೆ ಎಂದರು.
ಗಾಂಧಿ ಭವನದಲ್ಲಿ ಗೋಡೆಗಳ ಮೇಲೆ ಮಹಾತ್ಮ ಗಾಂಧೀಜಿಯವರ ಜೀವನ ಚಕ್ರ ಬಿಂಬಿಸುವ ಅತ್ಯುತ್ತಮ ಪೆಂಟಿಂಗ್ ಬಿಡಿಸಲಾಗಿದೆ. ಗಾಂಧೀಜಿಯವರ ಪ್ರಮುಖ ಚಳುವಳಿ ದಂಡಿ ಯಾತ್ರೆ ಸೇರಿದಂತೆ ವಿವಿಧ ರೀತಿಯ ಘಟನೆಗಳನ್ನು ಪ್ರತಿಮೆಗಳಲ್ಲಿ ಅರಳಿಸಲಾಗಿದೆ ಎಂದು ಹೇಳಿದರು.
ಗಾಂಧಿ ಭವನದಲ್ಲಿ ಕಚೇರಿ, ತರಬೇತಿ ಕೇಂದ್ರ, ಗ್ರಂಥಾಲಯ, ವಸ್ತುಸಂಗ್ರಹಾಲಯ, ಸುಮಾರು ಎರಡನೂರು ಜನ ಆಸೀನರಾಗಬಹುದಾದ ಕಾರ್ಯಕ್ರಮ ಸಭಾಂಗಣ, ವಸ್ತಪ್ರದರ್ಶನ ಹಾಲ್, ಅಗತ್ಯ ಶೌಚಾಲಯಗಳು, ವಾಹನ ಪಾಕಿಂರ್ಗ್ ಮತ್ತು ಕಾರಿಡಾರ್‌ಗಳನ್ನು ನಿರ್ಮಿಸಲಾಗಿದೆ. ಈ ಭಾಗದಲ್ಲಿ ಬಸ್ ನಿಲ್ದಾಣ, ವಾಹನ ದಟ್ಟಣೆ ಹೆಚ್ಚಾಗಿರುವದರಿಂದ ಸ್ವಲ್ಪ ದೂಳು ಹೆಚ್ಚಾಗಿದೆ ಎಂದರು.
ಗಾಂಧಿ ಭವನ ಕಟ್ಟಡ ಸುಂದರವಾಗಿದ್ದು, ಅರ್ಥಪೂರ್ಣವಾಗಿ ರೂಪಿಸಲಾಗಿದೆ. ಇದರ ಸದ್ಬಳಕೆ ಆಗಬೇಕು. ವಾರ್ತಾ ಇಲಾಖೆ ಆಯುಕ್ತರೊಂದಿಗೆ ಈ ಕುರಿತು ಮಾತನಾಡಿ, ಗಾಂಧಿ ಭವನ ನಿರಂತರವಾಗಿ ಗಾಂಧೀಜಿಯವರ ಜೀವನ ಸಂದೇಶ ಸಾರುವ ವಿಚಾರ ಸಂಕಿರಣ, ತರಬೇತಿ, ನಾಟಕ, ಗುಡಿ ಕೈಗಾರಿಕೆಗಳ ತರಬೇತಿಗಳು ಮುಂತಾದ ಗಾಂಧಿ ಪ್ರಣೀತ ಕಾರ್ಯಚಟುವಟಿಕೆಗಳಿಂದ ಸದಾ ಕಾಲ ಕ್ರಿಯಾಶೀಲವಾಗಿ ಇರುವಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಗಾಂಧಿ ಭವನ ಮೆಂಟೆನೆನ್ಸ್ ಬಗ್ಗೆ ಸಹ ಚರ್ಚಿಸಿ, ವಾರ್ತಾ ಇಲಾಖೆ ಮಾಲಿಕತ್ವದಲ್ಲಿ ಪಾಲಿಕೆ ಅಥವಾ ನಿಗಮ ಮಂಡಳಿಗೆ ವಹಿಸಿ, ಗಾಂಧೀಜಿಯವರ ಆಶಯಗಳಿಗೆ ಅನುಗುಣವಾಗಿ ಇತರ ಜಿಲ್ಲೆಗಳಿಗೆ ಗಾಂಧಿ ಭವನ ಮಾದರಿ ಆಗುವಂತೆ ನಿರ್ವಹಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕ್ರೇಡಿಲ್ ಕಾರ್ಯನಿರ್ವಾಹಕ ಇಂಜನೀಯರ್ ಸುಜಾತಾ ಕಾಳೆ, ವಾರ್ತಾ ಇಲಾಖೆ ಸಹಾಯಕ ವಾರ್ತಾಧಿಕಾರಿ ಡಾ.ಎಸ್.ಎಂ.ಹಿರೇಮಠ ಸೇರಿದಂತೆ ಇತರರು ಇದ್ದರು.