ಕೆಎಲ್‌ಇ ಶತಮಾನೋತ್ಸವ ಸಭಾಂಗಣದಲ್ಲಿ ’ಎಜ್ಯುಕೇಶನ್ ಎಕ್ಸಪೋ-2025’ ಉದ್ಘಾಟನೆ
ಮಾಂಜರಿ, 04 ; ’ಸ್ವಾಯತ್ತ ವಿಶ್ವವಿದ್ಯಾಲಯಗಳಲ್ಲಿ ಪರಿಚಯಿಸಿದ ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್‌ಗಳಿಗೆ ಭಾರತ ಮಾತ್ರವಲ್ಲದೆ; ವಿದೇಶದಲ್ಲೂ ಬೇಡಿಕೆ ಇದೆ. ಈ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ತಕ್ಷಣ ವಿದ್ಯಾರ್ಥಿಗಳು ಉದ್ಯೋಗ ಪಡೆಯಬಹುದು’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.ಜೆಎನ್‌ಎಂಸಿ ಕ್ಯಾಂಪಸ್‌ನಲ್ಲಿ ಇರುವ ಕೆಎಲ್‌ಇ ಶತಮಾನೋತ್ಸವ ಸಭಾಂಗಣದಲ್ಲಿ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ(ಕಾಹೇರ್) ಎರಡು ದಿನ ಹಮ್ಮಿಕೊಂಡಿದ್ದ “ಎಜ್ಯುಕೇಶನ್ ಎಕ್ಸಪೋ-2025’ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.“ಪಿಯುಸಿ ದ್ವಿತೀಯ ವರ್ಷ ತೇರ್ಗಡೆಯಾದ ವಿದ್ಯಾರ್ಥಿಗಳಿಗಾಗಿ ಕಾಹೇರ್‌ನಲ್ಲಿ ವಿವಿಧ ಕೌಶಲ ಮತ್ತು ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಇವುಗಳನ್ನು ಓದಿದವರಿಗೆ ಭಾರತ ಮತ್ತು ವಿದೇಶದಲ್ಲೂ ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಹೆಚ್ಚಿವೆ. ಅನೇಕ ಮುಂದುವರಿದ ರಾಷ್ಟ್ರಗಳಲ್ಲೂ ಮಾನವ ಸಂಪನ್ಮೂಲಕ್ಕೆ ಬೇಡಿಕೆ ಇದೆ. ಪಿಯುಸಿ ಪಾಸಾಗಲಿರುವ ವಿದ್ಯಾರ್ಥಿಗಳು ಮತ್ತು ಅವರ ಪಾಲಕರಿಗೆ ಈಗ ಲಭ್ಯವಿರುವ ಆಯ್ಕೆಗಳ ಬಗ್ಗೆ ತಿಳಿಸಲು ’ಎಜ್ಯುಕೇಶನ್ ಎಕ್ಸಪೋ-2025’ ಆಯೋಜಿಸಿದ್ದೇವೆ’ ಎಂದರು.’ಈ ಹಿಂದೆ ವಿವಿಧ ಕೋರ್ಸ್‌ಗಳು ಮತ್ತು ವೃತ್ತಿ ಜೀವನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಇರಲಿಲ್ಲ. ಆಗ, ತಮ್ಮ ಸ್ನೇಹಿತರು ಮತ್ತು ಕುಟುಂಬದ ಇತರರು ಯಾವ ಕೋರ್ಸ್ ಅಧ್ಯಯನ ಮಾಡುತ್ತಿದ್ದಾರೆಯೋ, ಅದನ್ನೇ ವಿದ್ಯಾರ್ಥಿಗಳು ಅನುಸರಿಸುತ್ತಿದ್ದರು. ಈಗ ದೃಷ್ಟಿಕೋನ ಬದಲಾಗಿದೆ. ಭಾರತ ಮತ್ತು ವಿದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಿರುವ ಶೈಕ್ಷಣಿಕ ಕೋರ್ಸ್‌ಗಳ ಮಾಹಿತಿ ಸಿಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ತಮಗಿಷ್ಟವಾದ ಉತ್ತಮ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು’ ಎಂದು ತಿಳಿಸಿದರು.
ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಮೊದಲು ಬೇಡಿಕೆ ಇತ್ತು. ವಿದ್ಯಾರ್ಥಿಗಳು ಹೆಚ್ಚು ಹಣ ಗಳಿಸಲು ವೈದ್ಯ ಮತ್ತು ಉತ್ತಮ ಉದ್ಯೋಗಾವಕಾಶಕ್ಕಾಗಿ ಎಂಜಿನಿಯರ್ ಆಗುತ್ತಿದ್ದರು. ಆದರೆ, ಇಂದು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಹ ಉದ್ಯೋಗಾವಕಾಶ ಪಡೆಯಲು ಕಷ್ಟಪಡುತ್ತಿದ್ದಾರೆ. ಈ ಮಧ್ಯೆ, ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್‌ಗಳಿಗೆ ಬೇಡಿಕೆ ಬಂದಿದ್ದು, ಸಾಕಷ್ಟು ಉದ್ಯೋಗಾವಕಾಶ ಲಭ್ಯವಿವೆ’ ಎಂದು ಅವರು ಹೇಳಿದರು.’ಆಸ್ಪತ್ರೆಗಳು ಮತ್ತು ವೈದ್ಯರು ರೋಗ ಪತ್ತೆ ಹಚ್ಚುವುದರಿಂದ ಶಸ್ತ್ರಚಿಕಿತ್ಸೆಯವರೆಗಿನ ಎಲ್ಲ ಕೆಲಸಗಳನ್ನು ತಾವಷ್ಟೇ ನಿರ್ವಹಿಸಲು ಸಾಧ್ಯವಿಲ್ಲ. ಇದಕ್ಕೆ ವಿವಿಧ ಹಂತದ ಸಿಬ್ಬಂದಿ ಅಗತ್ಯ. ಹಾಗಾಗಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ ಓದಿದ ವಿದ್ಯಾರ್ಥಿಗಳಿಗೆ ಹಲವು ಅವಕಾಶ ಸೃಷ್ಟಿಯಾಗಿವೆ. ಪಿಯುಸಿ ಮುಗಿದ ನಂತರ ವಿದ್ಯಾರ್ಥಿಗಳು ಆರೋಗ್ಯ ವಿಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ಅಭ್ಯಸಿಸಬೇಕು. ನಮ್ಮ ದೇಶ ಮಾತ್ರವಲ್ಲ; ಜಗತ್ತಿನಲ್ಲಿ ಲಭ್ಯವಿರುವ ಉದ್ಯೋಗವಕಾಶ ಗಮನದಲ್ಲಿ ಇಟ್ಟುಕೊಂಡು ಓದಬೇಕು’ ಎಂದು ಸಲಹೆ ಕೊಟ್ಟರು.ಕಾಹೇರ್ ಕುಲಪತಿ ಡಾ.ನಿತಿನ್ ಗಂಗಾನೆ, ’ವಿದ್ಯಾರ್ಥಿಗಳು ತಮಗಿಷ್ಟವಾದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಇಂದು ಹಲವು ಅವಕಾಶ ಹೊಂದಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ವೃತ್ತಿಜೀವನಕ್ಕೆ ಸಂಬಂಧಿಸಿ ಗುರಿ ಹೊಂದಬೇಕು. ಅದಕ್ಕೆ ಅನುಗುಣವಾಗಿ ಕೋರ್ಸ್ ಆಯ್ದುಕೊಂಡು ಅಭ್ಯಸಿಸಬೇಕು’ ಎಂದರು.’ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್‌ಗಳು ಪದವಿಗೆ ಸಮಾನವಾಗಿವೆಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್‌ಗಳು ಪದವಿಗೆ ಸಮಾನವಾಗಿವೆ. ಅವುಗಳನ್ನು ಪೂರ್ಣಗೊಳಿಸಿದವರು ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ನಡೆಸಬಹುದು’ ಎಂದು ತಿಳಿಸಿದರು. ಕೆಎಲ್‌ಇ-ಯುಎಸ್‌ಎಂ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ, ’ಪ್ರಸ್ತುತ ದಿನಗಳಲ್ಲಿ ನೀಟ್‌ನಲ್ಲಿನ ತೀವ್ರ ಸ್ಪರ್ಧೆಯಿಂದಾಗಿ ಅನೇಕರಿಗೆ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಸಿಗದಿರಬಹುದು. ಅಂಥವರಿಗೆ ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್‌ಗಳು ಉತ್ತಮ ಆಯ್ಕೆಯಾಗಿವೆ. ಶೈಕ್ಷಣಿಕ ಅಗತ್ಯಗಳ ಬಗ್ಗೆ ಮುಂದಿನ 25 ವರ್ಷಗಳ ದೂರದೃಷ್ಟಿ ಹೊಂದಿರುವ ಪ್ರಭಾಕರ ಕೋರೆ, ಇಂಥ ಕೋರ್ಸ್‌ಗಳನ್ನು ಆರಂಭಿಸಲು ಆಸಕ್ತಿ ವಹಿಸಿದ್ದಾರೆ’ ಎಂದರು.ಕಾಹೇರ್ ಕುಲಸಚಿವ ಡಾ.ಎಂ.ಎಸ್.ಗಣಾಚಾರಿ ಸ್ವಾಗತಿಸಿದರು.ವಿವಿಧ ಕಾಲೇಜುಗಳಿಂದ ಬಂದಿದ್ದ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ತಜ್ಞರು, ಕೋರ್ಸ್‌ಗಳು ಮತ್ತು ವೃತ್ತಿ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.