ಹೂವಿನಹಡಗಲಿ: ಶಸ್ತ್ರಕ್ಕಿಂತ ಶಾಸ್ತ್ರವೇ ಶ್ರೇಷ್ಠ: ಹಂಪಸಾಗರ ಶ್ರೀ

ಲೋಕದರ್ಶನ ವರದಿ

ಹೂವಿನಹಡಗಲಿ 04: ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ತುಂಬಿ ತುಳುಕುತ್ತಿರುವ ಅಂಧಕಾರ, ದುರಾಸೆಯಂತಹ ದುಷ್ಟ ಗುಣಗಳನ್ನು ಷ ಶಸ್ತ್ರಕ್ಕಿಂತ ದೈವಾಂಶಗಳನ್ನೊಳಗೊಂಡ ಶಾಸ್ತ್ರಗಳ ಬೋಧನೆಯ ಮೂಲಕ ನಿವಾರಿಸುವ ಕಾರ್ಯವಾಗಬೇಕಿದೆ ಎಂದು ಹಂಪಸಾಗರದ ನವಲಿ ಕಟ್ಟೆಮನಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಸ್ವಾಮೀಜಿ ಹೇಳಿದರು.

ತಾಲೂಕು ನವಲಿ ಗ್ರಾಮದಲ್ಲಿ "ನೆನೆದವರ ಮನದಲ್ಲಿ ಮಹಾದೇವತಾತಾ" ಎಂಬ ಶೀರ್ಷಿಕೆಯಲ್ಲಿ  ಹಮ್ಮಿಕೊಂಡಿದ್ದ ಮಾಸಿಕ ಚಿಂತನಾ ಸಭೆಯ ಸಾನಿಧ್ಯವಹಿಸಿ ಅವರು ಮಾತನಾಡಿದರು. ದುಷ್ಠರನ್ನು ಸಂಹಾರ ಮಾಡುವುದಕ್ಕಿಂತ ನಮ್ಮಲ್ಲಿಯ ದುಷ್ಠ ಗುಣಗಳನ್ನು ಸಂಹಾರ ಮಾಡಿದಾಗ ಮಾತ್ರ ಉತ್ತಮ ಬದುಕಾಗಲು ಸಾಧ್ಯ ಎಂದು ಹೇಳಿದರು.     

ಪಂಚಾಚಾರ್ಯರ ಸಿದ್ಧಾಂತ ಶಿಖಾಮಣಿ, ಶರಣರ ವಚನಗಳು, ದಾಸರ ಕೀರ್ತನೆಗಳಿಂದ ನರ ಹರನಾಗುವ, ಶಿಲೆ ಶಿವನಾಗುವ ತತ್ವಗಳನ್ನು ಅರಿಯಬಹುದಾಗಿದೆ. ನಿತ್ಯ ಬದುಕಿನ ನೆಮ್ಮದಿಗೆ ಧಾರ್ಮಿಕ ಸಿಂಚನವೇ ಮಾರ್ಗವಾಗಿದೆ ಎಂದರು.

ತಂಬ್ರಹಳ್ಳಿಯ ಹೆಚ್.ಬಿ.ನಾಗನಗೌಡ ಮಾತನಾಡಿ, ಸತ್ಸಂಗದಿಂದ ಮಾನವನ ಬದುಕು ಹಸನಾಗುವುದು ಎಂದು ದೃಷ್ಠಾಂತದ ಮೂಲಕ ತಿಳಿಸಿದರು. ಹಂಪಸಾಗರ ಉಘಾಮಠದ ಎನ್.ಎಚ್.ಎಂ.ಸಿದ್ಧಲಿಂಗಸ್ವಾಮಿ ಉಪಸ್ಥಿತರಿದ್ದರು. ಗ್ರಾಮದ ದೈವಸ್ಥರು ಪಾಲ್ಗೊಂಡಿದ್ದರು.

ಹೆಚ್.ಎಂ.ಶರಣಯ್ಯ ಶಾಸ್ತ್ರಿ ವೇದಘೋಷ ಹೇಳಿದರು. ಹಂಪಸಾಗರದ ರುದ್ರಾಣಿ ಬಳಗದವರು ಪ್ರಾರ್ಥನೆ ಹಾಡಿದರು. ನವಲಿಯ ಶಿವಕುಮಾರಸ್ವಾಮಿ ಸ್ವಾಗತಿಸಿದರು. ಉಪನ್ಯಾಸಕ ಹೆಚ್.ಎಂ. ಗುರುಬಸವರಾಜಯ್ಯ ನಿರ್ವಹಿಸಿದರು.