ದಾಂಡೇಲಿ ನಗರಸಭೆ ಆವರಣದಲ್ಲಿ ನಗರೋತ್ಥಾನ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಶಾಸಕ ಆರ್‌.ವಿ ದೇಶಪಾಂಡೆ

ದಾಂಡೇಲಿ ನಗರಸಭೆ ಆವರಣದಲ್ಲಿ ನಗರೋತ್ಥಾನ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಶಾಸಕ  ಆರ್‌.ವಿ ದೇಶಪಾಂಡೆ MLA R.V. Deshpande laid the foundation stone for urban development work in Dandeli Municipal Corpor

ದಾಂಡೇಲಿ  07:  ಸಂಪದ್ಭ್ಬರಿತ ನಗರವಾಗಿದ್ದ ದಾಂಡೇಲಿಯಲ್ಲಿ ಎರಡು ಕೈಗಾರಿಕೆೆಗಳು ಮುಚ್ಚಿ ಕಾರ್ಮಿಕರು ಸಂಕಷ್ಟದಲ್ಲಿದ್ದಾಗ ಶಾಸಕನಾಗಿ ನಾನೇನು ಮಾಡಬೇಕು ಎಂದು ಆಲೋಚಿಸಿ ನಿರ್ಧರಿಸಿದ್ದೇ ಪ್ರವಾಸೋದ್ಯಮ. ಇಂದು ಪ್ರವಾಸೋದ್ಯಮ ದಾಂಡೇಲಿಗೆ ಹೆಚ್ಚಿನ ಮಹತ್ವ ತಂದು ಕೊಟ್ಟಿದೆ. ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು, ಶಾಸಕರು ಆದ ಆರ್‌.ವಿ. ದೇಶಪಾಂಡೆ ನುಡಿದರು. 

ಅವರು ದಾಂಡೇಲಿ ನಗರಸಭೆ ಆವರಣದಲ್ಲಿ ಜರುಗಿದ ನಗರೋತ್ಥಾನ ಹಿ ಮೂರರ 6.7 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಜಿಲ್ಲೆಯ ಪ್ರಮುಖ ಪ್ರವಾಸ ತಾಣವಾಗಿರುವ ದಾಂಡೇಲಿಯ ಸಮಗ್ರ ಅಭಿವೃದ್ದಿಗಾಗಿ ಜಾರಿಗೊಳಿಸಿರುವ ನಗರೋತ್ಥಾನ ಯೋಜನೆಗಳಿಗೆ ಇನ್ನಷ್ಟು ವೇಗ ನೀಡುವದರೊಂದಿಗೆ ನಗರದ ರಸ್ತೆ ಸುಧಾರಣೆ, ಒಳ ಚರಂಡಿ ವ್ಯವಸ್ಥೆ ಅಭಿವೃದ್ದಿ, ನಗರ ಸೌಂದರೀಕರಣಕ್ಕಾಗಿ ಬೀದಿ ದೀಪಗಳ ಅಳವಡಿಕೆ, ಕುಡಿಯುವ ನೀರಿನ ಪೂರೈಕೆ, ಉದ್ಯಾನವನಗಳ ನಿರ್ಮಾಣ ಹೀಗೆ ಹತ್ತು ಹಲವಾರು ಕಾಮಗಾರಿಗಳು ನಗರದಲ್ಲಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ನಗರೋತ್ಥಾನ  ಯೋಜನೆಯಡಿ ಹಂತ ಹಂತವಾಗಿ ನಡೆಯುತ್ತಲಿದೆ.

ಪ್ರವಾಸೊದ್ಯಮ ದೃಷ್ಟಿಯಿಂದ ನಗರದಲ್ಲಿ ಮೂಲ ಸೌಕರ್ಯಕ್ಕೆ ಒತ್ತು ಕೊಡಲಾಗಿದೆ. ಸ್ಥಳೀಯ ಏಕೈಕ ಕೈಗಾರಿಕೆಯಾದ ಪೇಪರ ಮಿಲ್‌ನವರು ಸಿ.ಎಸ್‌.ಆರ್‌. ಯೋಜನೆಯಡಿ ಅಭಿವೃದ್ದಿ ಕೆಲಸಗಳಿಗೆ ಕೈ ಜೋಡಿಸಿದ್ದಾರೆ. ಕಾರ್ಮಿಕರು ಧರಣಿ ಮುಷ್ಕರ ಮಾಡುವದನ್ನು ನಿಲ್ಲಿಸಬೇಕು. ಉತ್ಪಾದನೆ ಹೆಚ್ಚುವಂತೆ ಮಾಡಿ ಉದ್ಯಮವನ್ನು ಉಳಿಸಿಕೊಳ್ಳುವುದರ ಮೂಲಕ ಹೆಚ್ಚಿನ ಲಾಭ ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವೆಸ್ಟ ಕೋಸ್ಟ ಪೇಪರ್ ಮಿಲ್ಲಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ರಾಜೇಂದ್ರ ಜೈನ ಮಾತನಾಡಿ ದಾಂಡೇಲಿಯಂತ ಚಿಕ್ಕ ನಗರಕ್ಕೆ ಶಾಸಕರು ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ಪೌರಾಯುಕ್ತ ವಿವೇಕ್ ಬನ್ನೆ ಪ್ರಾಸ್ತಾವಿಕವಾಗಿ ಮಾತನಾಡಿ ನಗರದಲ್ಲಿ ನಡೆದಿರುವ ಮತ್ತು ಕೈಗೊಳ್ಳಲಿರುವ ಕಾಮಗಾರಿಗಳ ಕುರಿತು ವಿವರಿಸಿದರು. ವೇದಿಕೆ ಮೇಲೆ  ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಿಯಾಜ ಬಾಬು ಸೈಯ್ಯದ್, ತಹಶೀಲದಾರ ಶೈಲೇಶ್ ಪರಮಾನಂದ, ತಾಪಂ ಇ.ಓ ಟಿ.ಸಿ ಹಾದಿಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಉಪಸ್ಥಿತರಿದ್ದರು.