ವಿಶ್ವ ಪತ್ರಿಕಾ ದಿನಾಚರಣೆ: ಗಣ್ಯರಿಂದ ಶುಭಾಶಯ

ಬೆಂಗಳೂರು, ಮೇ 3,ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಅಂಗವಾಗಿ ಹಲವು ಗಣ್ಯರು ಮಾಧ್ಯಮ ಮಿತ್ರರಿಗೆ ಶುಭಾಶಯ ಕೋರಿದ್ದಾರೆ. ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಹೇಳಿಕೆ ಬಿಡುಗಡೆ ಮಾಡಿ, ಪತ್ರಕರ್ತ  ಮಿತ್ರರಿಗೆ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಶುಭಾಶಯಗಳು. ಪ್ರಜಾಪ್ರಭುತ್ವಕ್ಕೆ  ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಹೇಗೆ ಮುಖ್ಯವೋ ಹಾಗೆಯೇ ಪತ್ರಿಕೋದ್ಯಮವು ನಾಲ್ಕನೇ  ಅಂಗ ಎಂದೇ ಕರೆಯಲ್ಪಟ್ಟಿದೆ. ನಿಷ್ಪಕ್ಷಪಾತ ಧೋರಣೆ, ಹರಿತ ಬರಹ, ಸಮಾಜದ ತಪ್ಪುಗಳನ್ನು  ತಿದ್ದುವುದರ ಜೊತೆ ಸರ್ಕಾರಗಳ ಸುಲಭ ಕಾರ್ಯ ಚಟುವಟಿಕೆಗೆ ಆಗಾಗ ಉತ್ತಮ ಸಲಹೆಗಳನ್ನು  ಕೊಡುತ್ತಾ ಬಂದಿದೆ. ಪತ್ರಿಕೆಗಳಲ್ಲಿ ಬರುವ ಸುದ್ದಿಗೆ ಅದರದೇ ಆದ ಮಹತ್ವವಿದ್ದು,  ಸಾರ್ವಕಾಲಿಕ ದಾಖಲೆಯಂತೆ ಉಳಿಯುತ್ತದೆ ಎಂದು ತಿಳಿಸಿದ್ದಾರೆ.
ಈಗಂತೂ  ಕೊರೋನಾ ಸಂಕಷ್ಟದ ಕಾಲ. ದೇಶವೇ ಲಾಕ್ ಡೌನ್ ಸಂಕಷ್ಟವನ್ನು ಎದುರಿಸುತ್ತಿದೆ. ಹೊರಗೆ  ಹೋದರೆ ಸೋಂಕು ತಗುಲುವುದು ಎಂಬ ಭಯ ಇದ್ದರೂ ನಮ್ಮ ಪತ್ರಕರ್ತ ಸ್ನೇಹಿತರು ವೈದ್ಯಕೀಯ  ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ನಮ್ಮನ್ನೆಲ್ಲ ರಕ್ಷಣೆ ಮಾಡುತ್ತಿರುವ  ಪೊಲೀಸರಂತೆಯೇ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಾ ಜನರಿಗೆ ಅರಿವು  ಮೂಡಿಸುತ್ತಿದ್ದಾರೆ. ಇದು ಬೆಲೆಕಟ್ಟಲಾಗದ ಸೇವೆ. ನನ್ನೆಲ್ಲ ಪತ್ರಿಕಾ ಸ್ನೇಹಿತರಿಗೆ  ಕೋಟಿ ಕೋಟಿ ನಮನಗಳು ಎಂದು ತಿಳಿಸಿದ್ದಾರೆ.
ಪತ್ರಕರ್ತರ  ವೃತ್ತಿಪರತೆಯನ್ನೂ ನಾವು ಶ್ಲಾಘಿಸಬೇಕಾಗುತ್ತದೆ. ಕರ್ಫ್ಯೂ, ದೊಂಬಿ, ಗಲಾಟೆಗಳಂತಹ  ಸನ್ನಿವೇಶಗಳಿದ್ದರೂ ಸೇವೆ ಮಾತ್ರ ನಿಂತಿಲ್ಲ. ಮರುದಿನ ಎಲ್ಲ ಆಯಾಮಗಳಲ್ಲೂ  ಪತ್ರಿಕೆಗಳಲ್ಲಿ ಸುದ್ದಿ ರಾರಾಜಿಸುತ್ತಿರುತ್ತದೆ. ಇನ್ವೆಸ್ಟಿಗೇಶನ್ ಜರ್ನಲಿಸಂ  ನಡೆಸುವಂತಹ ಸಂದರ್ಭದಲ್ಲಿ ಅನೇಕ ಪತ್ರಕರ್ತರು ಪ್ರಾಣಗಳನ್ನು ಕಳೆದುಕೊಂಡಿದ್ದಾರೆ.  ಇಷ್ಟಾದರೂ ಜಗ್ಗದೆ ನಿರ್ಭೀತಿಯಿಂದ ಕಾರ್ಯನಿರ್ವಹಿಸುವ ಮೂಲಕ ಪ್ರಜಾಪ್ರಭುತ್ವದ ಹಿತ  ಕಾಯುತ್ತಿದ್ದಾರೆ. ನಿಮಗಿದೋ ನನ್ನ ಸಲಾಂ ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಶುಭಾಶಯ ಕೋರಿದ್ದು, ಸಮಾಜದ  ಸ್ವಾಸ್ಥ್ಯ ಕಾಪಾಡುವ ಗುರುತರ ಜವಾಬ್ದಾರಿ ಹೊತ್ತವರು ಪತ್ರಕರ್ತರು. ಪ್ರಜಾಪ್ರಭುತ್ವದ  ನಾಲ್ಕನೇ ‌ಆಧಾರಸ್ತಂಭವಾದ ಮಾಧ್ಯಮ ಕ್ಷೇತ್ರಕ್ಕೆ ಇರುವ ಸಾಮಾಜಿಕ ಬದ್ಧತೆ ಪ್ರಶ್ನಾತೀತ.  ಈ ಬದ್ಧತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ 2020 ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ವಿಶೇಷ ಸಂದರ್ಭದಲ್ಲಿ ಬಂದಿದೆ. ಇಡೀ  ಜಗತ್ತು ಕೊರೋನಾ ಅಟ್ಟಹಾಸಕ್ಕೆ ತಲ್ಲಣಿಸಿದೆ. ಕೋವಿಡ್19 ಸೋಂಕಿನ ಅಪಾಯಕರ ಸಂದರ್ಭದಲ್ಲಿ  ಸವಾಲುಗಳ ಬೆನ್ನು ಹತ್ತಿ ಪತ್ರಕರ್ತರು ಕೆಲಸ ಮಾಡುತ್ತಿರುವುದನ್ನು ನಾವೆಲ್ಲಾ  ನೋಡುತ್ತಿದ್ದೇವೆ. ಈ ಲಾಕ್ ಡೌನ್ ನಂತಹಾ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅಪಾಯಗಳನ್ನು  ಎದುರಿಸುತ್ತಾ ವಾಸ್ತವ ಮತ್ತು ನೈಜ ಸುದ್ದಿಗಳನ್ನು ನೀಡುತ್ತಾ ಸಾಮಾಜಿಕ ಕಳಕಳಿಯಿಂದ  ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.
ನೆಚ್ಚಿನ  ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಳಿಸಿದಂತೆ *ಕೋವಿಡ್19 ವಿರುದ್ಧ  ಸೆಣಸುತ್ತಿರುವ ಫ್ರಂಟ್ ಲೈನ್ ವಾರಿಯರ್ಸ್‌ ಗಳಲ್ಲಿ ಮಾಧ್ಯಮ ಕ್ಷೇತ್ರದ ಪತ್ರಕರ್ತರೂ  ಯೋಧ ರಂತೆಯೇ ಕಾಯಕದಲ್ಲಿ ತೊಡಗಿದ್ದಾರೆ. ಎಲ್ಲರೂ  ಸೇರಿ ಈ ಸಾಂಕ್ರಾಮಿಕ ಕೊರೋನಾ ಸೋಂಕಿನ ನಿರ್ಮೂಲನೆ ಮಾಡೋಣ. ಆರೋಗ್ಯವಂತ, ಬಲಿಷ್ಠ ಸಮಾಜ  ಕಟ್ಟೋಣ. ಈ ದಿಸೆಯಲ್ಲಿ ಕೈ ಜೋಡಿಸಿರುವ ಎಲ್ಲಾ ಮಾಧ್ಯಮ ಸ್ನೇಹಿತರಿಗೆ ಈ ವಿಶ್ವ  ಪತ್ರಿಕಾ ಸ್ವಾತಂತ್ರ್ಯ ದಿನದ ಶುಭಾಶಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.