ಬೀದರ್ 17: ಎಟಿಎಂಗೆ ಜಮಾ ಮಾಡಲು ಬ್ಯಾಂಕಿನಿಂದ ಹಣ ಸಾಗಿಸುತ್ತಿದ್ದ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ ಇಬ್ಬರು ಅಪರಿಚಿತರು, ₹92 ಲಕ್ಷ ನಗದು ದರೋಡೆ ಮಾಡಿ ಬೈಕ್‌ನಲ್ಲಿ ಪರಾರಿಯಾಗಿರುವ ಘಟನೆ ನಗರದ ಹೃದಯ ಭಾಗದಲ್ಲಿ ಗುರುವಾರ ನಡೆದಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.
‘ಗಿರಿ ವೆಂಕಟೇಶ ಹಾಗೂ ಶಿವಕುಮಾರ ಅವರು ನಗರದ ಎಸ್‌ಬಿಐ ಮುಖ್ಯ ಕಚೇರಿಗೆ ಬಂದು, ನೋಟಿನ ಕಂತೆಗಳಿರುವ ಟ್ರಂಕ್ ಅನ್ನು ಜೀಪಿನಲ್ಲಿ ಇರಿಸುತ್ತಿದ್ದರು. ಈ ವೇಳೆ ಇಬ್ಬರು ಅಪರಿಚಿತರು ಬಂದು, ಅವರ ಮೇಲೆ ಹಲ್ಲೆ ನಡೆಸಿ, ಟ್ರಂಕ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಬಳಿಕ ಕಣ್ಣಿಗೆ ಕಾರದ ಪುಡಿ ಎರಚಿ, ಗಿರಿ ವೆಂಕಟೇಶ ಹಾಗೂ ಶಿವಕುಮಾರ ಮೇಲೆ ಗುಂಡಿನ ದಾಳಿ ನಡೆಸಿ, ಟ್ರಂಕ್‌ನೊಂದಿಗೆ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಚಿದ್ರಿ ನಿವಾಸಿ ಗಿರಿ ವೆಂಕಟೇಶ ಮಲ್ಲಪ್ಪ (37) ಮೃತ ವ್ಯಕ್ತಿ. ನಗರದ ಲಾಡಗೇರಿ ನಿವಾಸಿ ಶಿವಕುಮಾರ (35) ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಸಿಎಂಎಸ್ ಖಾಸಗಿ ಸಂಸ್ಥೆಯ ‘ಕ್ಯಾಶ್ ಕಸ್ಟೋಡಿಯನ್’ಗಳಾಗಿದ್ದರು. ನಿತ್ಯ ಬ್ಯಾಂಕಿನಿಂದ ಹಣ ಸಂಗ್ರಹಿಸಿ, ಅದನ್ನು ನಗರದ ವಿವಿಧ ಎಟಿಎಂಗಳಲ್ಲಿ ಜಮೆ ಮಾಡುವ ಕೆಲಸ ಮಾಡುತ್ತಿದ್ದರು.
‘ಗುರುವಾರ ಬೆಳಿಗ್ಗೆ 10.30ರಿಂದ 11ರ ನಡುವೆ ಘಟನೆ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಹಣದೊಂದಿಗೆ ಪರಾರಿಯಾಗುತ್ತಿದ್ದ ಅಪರಿಚಿತರ ಮೇಲೆ ಸ್ಥಳದಲ್ಲಿದ್ದ ಕೆಲವರು ಕಲ್ಲು ತೂರಿ ತಡೆಯಲು ಯತ್ನಿಸಿದ್ದಾರೆ. ಆದರೆ, ಅವರು ಗಾಳಿಯಲ್ಲಿ ಗುಂಡು ಹಾರಿಸಿ, ಹೆದರಿಸಿ ಓಡಿ ಹೋಗಿದ್ದಾರೆ. ಎಟಿಎಂಗಳಿಗೆ ಹಣ ಕೊಂಡೊಯ್ಯುವಾಗ ಸಿಎಂಎಸ್ ಕಂಪನಿ ಗನ್‌ಮ್ಯಾನ್ ಕೂಡ ಜೊತೆಗಿರುತ್ತಿದ್ದರು. ಆದರೆ, ಗುರುವಾರ ಅವರು ರಜೆ ಮೇಲಿದ್ದರು ಎಂದು ತಿಳಿದು ಬಂದಿದೆ.