ಬೆಳಗಾವಿ 17: ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಜಟಾಪಟಿ ಜೋರಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಶುಕ್ರವಾರ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಬಹಿರಂಗ ಆಗ್ರಹ ಕೇಳಿ ಬರುತ್ತಿರುವ ಬಗ್ಗೆ ಇಂದು ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಖರ್ಗೆ, ನಿಮಗೆ ಕೊಟ್ಟ ಕೆಲಸ ಮೊದಲು ಮಾಡಿ, ಯಾವಾಗ ಏನು ಮಾಡಬೇಕು ಎಂಬುದು ಹೈಕಮಾಂಡ್ಗೆ ಗೊತ್ತಿದೆ ಎಂದರು.
ನೀವು ಹೇಳಿದಾಗ ಬದಲಾವಣೆ ಮಾಡಲು ಆಗಲ್ಲ, ಹೈಕಮಾಂಡ್ ಯಾವಾಗ ನಿರ್ಣಯ ತೆಗೆದುಕೊಳ್ಳಬೇಕು ಆಗ ತೆಗೆದುಕೊಳ್ಳುತ್ತದೆ. ಈ ರೀತಿ ಹೇಳಿಕೆ ನೀಡಬೇಡಿ. ಇದರಿಂದ ಪಕ್ಷಕ್ಕೆ ದೊಡ್ಡ ಹಾನಿಯಾಗುತ್ತದೆ, ದಯವಿಟ್ಟು ಕಾಂಟ್ರವರ್ಸಿ ರಾಜ್ಯದಲ್ಲಿ ನಡೆಯಬಾರದು ಎಂದು ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದರು.
ಆಗ ಸಿಎಂ ಚೇಂಜ್ ಆಗ್ತಾರೆ, ಈಗ ಡಿಸಿಎಂ ಚೇಂಜ್ ಆಗ್ತಾರೆ ಅದೆಲ್ಲ ಹೇಳಬೇಡಿ. ನಾನಿದ್ದೇನೆ, ರಾಹುಲ್ ಗಾಂಧಿ ಇದ್ದಾರೆ. ಯಾವಾಗ ಏನು ಮಾಡಬೇಕು ಅಂತ ನಮಗೆ ಟಾರ್ಗೆಟ್ ಇರುತ್ತದೆ. ಅದನ್ನು ನೋಡಿಕೊಂಡು ನಾವೇ ನಿರ್ಣಯ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.