ಜನವಸತಿ ಪ್ರದೇಶಗಳಿಗೆ ವನ್ಯ ಜೀವಿಗಳ ದಾಳಿ ಭೀತಿ

ಬೆಂಗಳೂರು, ಮೇ 3,ಕೋವಿಡ್ 19 ಸೋಂಕು ನಿಯಂತ್ರಣ ಉದ್ದೇಶದಿಂದ ಜಾರಿಗೊಳಿಸಿರುವ ಲಾಕ್ ಡೌನ್ ನಂತರ ವನ್ಯ ಜೀವಿಗಳು ಸ್ವಚ್ಚಂದವಾಗಿ ವಿಹರಿಸುತ್ತಿದ್ದು, ಗ್ರಾಮಗಳಲ್ಲಿ ವನ್ಯಜೀವಿಗಳ ದಾಳಿಯ ಆತಂಕ ಎದುರಾಗಿದೆ. ಮತ್ತೊಂದೆಡೆ ನಗರ ಪ್ರದೇಶಗಳಲ್ಲಿ ಪಕ್ಷಿಗಳ ಕಲರವ ಹೆಚ್ಚಾಗಿದ್ದು, ಪಕ್ಷಿ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಪ್ರಮುಖ ಅಭಯಾರಣ್ಯಗಳು, ಸಾಮಾಜಿಕ ಅರಣ್ಯಗಳಿಂದ ವನ್ಯ ಜೀವಿಗಳು ಜನವಸತಿ ಪ್ರದೇಶಗಳತ್ತ ದೌಡಾಯಿಸುತ್ತಿವೆ. ಇದರಿಂದಾಗಿ ಅರಣ್ಯದಂಚಿನ ಗ್ರಾಮಗಳಲ್ಲಿ  ಭೀತಿ ಕಾಣಿಸಿಕೊಂಡಿದೆ. ಅರಣ್ಯ ಪ್ರದೇಶಗಳಿಗೆ ತೆರಳುವ ಮಾರ್ಗಗಳನ್ನು ಬಂದ್ ಮಾಡಲಾಗಿದ್ದು, ಜನ ಮತ್ತು ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ. ಇದರಿಂದಾಗಿ ವನ್ಯ ಜೀವಿಗಳಿಗೆ ಗಡಿ ಇಲ್ಲದಂತಾಗಿದ್ದು, ಪ್ರಮುಖವಾಗಿ ರಾತ್ರಿ ವೇಳೆಯಲ್ಲಿ ಜನ ವಸತಿ ಪ್ರದೇಶಗಳಲ್ಲೂ ಇವು ಸಂಚರಿಸುತ್ತಿವೆ. ಕೊಡಗು ಜಿಲ್ಲೆಯಲ್ಲಿ ಲಾಕ್ ಡೌನ್ ಸಂಕಷ್ಟದ ನಡುವೆಯೇ ಗ್ರಾಮಸ್ಥರಿಗೆ ವನ್ಯಜೀವಿಗಳ ದಾಳಿಯ ಆತಂಕ ಎದುರಾಗಿದೆ. ಗೋಣಿಕೊಪ್ಪ ಬಳಿಯ ಬಾಳೆಲೆ  ಗ್ರಾಮದಲ್ಲಿ ಹುಲಿಯ ಸಂಚಾರ ಕಂಡು ಬಂದಿದ್ದು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.  ಗ್ರಾಮದ ಕಾಫಿ ತೋಟದಲ್ಲಿ ಹುಲಿ ರಾಜ ಗಾಂಭೀರ್ಯದಿಂದ ಸಂಚರಿಸುತ್ತಿರುವ ದೃಶ್ಯ ಸೆರೆಯಾಗಿದೆ.  ಕೊಡಗಿನ ವಿರಾಜಪೇಟೆ ತಾಲೂಕಿನಲ್ಲಿ ಈಗಾಗಲೇ ಹುಲಿ ಅನೇಕ ಜಾನುವಾರುಗಳನ್ನು ಬಲಿ ಪಡೆದಿದ್ದು,  ಹುಲಿಯ ಸೆರೆಗಾಗಿ ಅರಣ್ಯ ಇಲಾಖೆ ನಾಲ್ಕುದಿನಗಳಿಂದ ಸಾಕಾನೆಗಳ ಸಹಾಯದಿಂದ ಕಾರ್ಯಾಚರಣೆ ಕೈಗೊಂಡಿದೆ.

ಹುಲಿಯ ಜಾಡು ಪತ್ತೆಯಾಗಿದ್ದರು ಕಾರ್ಯಾಚರಣೆಯ ಕೊನೆಯ ಕ್ಷಣದಲ್ಲಿ ಹುಲಿ ತಪ್ಪಿಸಿಕೊಳ್ಳುತ್ತಿರುವುದು ಕಳವಳ ಹೆಚ್ಚಾಗುವಂತೆ ಮಾಡಿದೆ.ಇನ್ನು ಬಂಡಿಪುರ, ನಾಗರಹೊಳೆ ಅಭಯಾರಣ್ಯ ಪ್ರದೇಶಗಳಲ್ಲೂ ವನ್ಯ ಜೀವಿಗಳು ಸಂಚರಿಸುತ್ತಿರುವುದು ಕಂಡು ಬಂದಿದ್ದು, ಎಚ್ಚರಿಕೆಯಿಂದ ಇರುವಂತೆ ಅರಣ್ಯ ಅಧಿಕಾರಿಗಳು ಗ್ರಾಮಸ್ಥರಿಗೆ ಸಲಹೆ ಮಾಡಿದ್ದಾರೆ. ನಗರ ಪ್ರದೇಶಗಳಲ್ಲಿ ಹಾವು ಮತ್ತಿತರ ಜೀವ ಸಂಕುಲಗಳು ಜನ ವಸತಿ ಪ್ರದೇಶಗಳಿಗೆ ಹೆಚ್ಚಾಗಿ ಬರುತ್ತಿವೆ. ಜ್ಞಾನಭಾರತಿಯ ಬೆಂಗಳೂರು ವಿಶ್ವವಿದ್ಯಾಲಯದ  ಆವರಣದಿಂದ ಹೆಚ್ಚಿನ ಪ್ರಮಾಣದಲ್ಲಿ ಹಾವುಗಳು ಹೊರ ಬರುತ್ತಿವೆ. ಈ ಭಾಗದಲ್ಲಿ ಜನತೆ ಎಚ್ಚರಿಕೆಯಿಂದ ಓಡಾಡುವ ಪರಿಸ್ಥಿತಿ ಎದುರಾಗಿದೆ.  ಲಾಕ್ ಡೌನ್ ನಿಂದ ವಾಹನಗಳ ಸಂಚಾರ ಕಡಿಮೆಯಾಗಿರುವುದರಿಂದ ಪಕ್ಷಿಗಳ ಸಂಚಾರ ತೀವ್ರಗೊಂಡಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ ಪಕ್ಷಧಾಮಗಳಷ್ಟೇ ಅಲ್ಲದೇ  ವಾಹನ ಸಂಚಾರ ಹೆಚ್ಚಾಗಿದ್ದ ಸ್ಥಳಗಳಲ್ಲೂ ಪಕ್ಷಿಗಳ ಇಂಚರ ಹೆಚ್ಚಾಗಿದೆ. ಪಕ್ಷಿಗಳ ಕಲರವದ ಈ ಬೆಳವಣಿಗೆ ಪರಿಸರಕ್ಕೆ ಪೂರಕ ಎನ್ನುತ್ತಾರೆ. ಲಾಕ್ ಡೌನ್ ಸಂದರ್ಭದಲ್ಲಿ ಮನುಷ್ಯ ಮನೆಯಲ್ಲಿ ಬಂಧಿಯಾಗಿದ್ದರೆ ಪ್ರಾಣಿ ಪಕ್ಷಿಗಳು ಮುಕ್ತ ಸ್ವಾತಂತ್ರ್ಯ ಅನುಭವಿಸುತ್ತಿವೆ. ಮನುಷ್ಯನಿರುವ ಸ್ಥಳದಲ್ಲಿ ಪ್ರಾಣಿ ಪಕ್ಷಿಗಳು ವಾಸಿಸುರುವುದಿಲ್ಲ ಎನ್ನುವ ತಜ್ಞರ ಅಭಿಮತವನ್ನು ಈ ಬೆಳವಣಿಗೆ ಸಾಬೀತುಪಡಿಸಿದೆ.