ಬೆಂಗಳೂರು, ಏ. 24, ಪಾದರಾಯನಪರ ಕೊರೊನಾ ಸೋಂಕಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕೊಡಲಾಗಿತ್ತು. ಆದರೆ ಅವರನ್ನು ಸರ್ಕಾರ ರಾಮನಗರಕ್ಕೆ ಸ್ಥಳಾಂತರ ಮಾಡಿದ್ದು ಸರಿಯಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಜೈಲಿನಲ್ಲಿ 177 ಖೈದಿಗಳಿದ್ದರು. ಪಾದರಾಯನಪುರ ಸೋಂಕಿತರಿಗಾಗಿ ಖೈದಿಗಳನ್ನು ಜೈಲಿನಿಂದ ಸ್ಥಳಾಂತರ ಮಾಡಿಸಿದ್ದಾರೆ. ಪಾದರಾಯನಪುರ ಬಂಧಿತರನ್ನು ರಾಮನಗರದಲ್ಲಿ ಕ್ವಾರಂಟೈನ್ ಮಾಡಿದ್ದೇಕೆ? ಎಂದು ಡಿ.ಕೆ.ಸುರೇಶ್ ಸರ್ಕಾರವನ್ನು ಪ್ರಶ್ನಿಸಿದರು.
ರಾಮನಗರ ಗ್ರೀನ್ ಝೋನ್ ನಲ್ಲಿದೆ. ಆದ್ದರಿಂದ ಇಲ್ಲಿಗೆ ಸ್ಥಳಾಂತರ ಬೇಡ ಎಂದು ಹೇಳಿದ್ದೆವು. ಆದರೂ ಸಹ ಬಿಜೆಪಿಯವರು ಉದ್ದೇಶಪೂರ್ವಕವಾಗಿ ರಾಮನಗರಕ್ಕೆ ಸೋಂಕಿತರನ್ನು ತಂದು ಹಾಕುವ ಮೂಲಕ ರಾಮನಗರ ಜಿಲ್ಲೆಗೆ ಸೋಂಕು ಅಂಟಿಸುವ ಕೆಲಸ ಮಾಡುತ್ತಿದ್ದಾರೆ. ಮಲ್ಲೇಶ್ವರಂನಲ್ಲಿ ಕೆ.ಸಿ.ಜನರಲ್ ಆಸ್ಪತ್ರೆ ಇದೆ. ಅಶ್ವತ್ಥ ನಾರಾಯಣ ಈ ಆಸ್ಪತ್ರೆಯನ್ನು ಕ್ವಾರಂಟೈನ್ ಮಾಡಬಾರದು ಎಂದಿದ್ದಾರೆ. ಅದಕ್ಕಾಗಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಯಾವುದೇ ಕೇಸ್ ಇಟ್ಟುಕೊಳ್ಳುತ್ತಿಲ್ಲ. ಹೀಗಾಗಿ ಉದ್ದೇಶಪೂರ್ವಕವಾಗಿ ರಾಮನಗರಕ್ಕೆ ತಂದು ಹಾಕಿದ್ದಾರೆ. ರಾಮನಗರ ಜೈಲಿಗೆ ತಂದು ಹಾಕಿರುವವರಲ್ಲಿ ಈಗ ಪಾಸಿಟೀವ್ ಬಂದಿದೆ. ಗ್ರೀನ್ ಜೋನ್ ಅನ್ನು ರೆಡ್ ಝೋನ್ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ವಿರುದ್ಧ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು. ರಾಮನಗರದಿಂದ ಸೋಂಕಿತರನ್ನು ಬೇರೆಡೆ ಸ್ಥಳಾಂತರಿಸುವ ಬಗ್ಗೆ ಸರ್ಕಾರ ಮನವಿ ಬಂದಿದೆ ಎನ್ನುತ್ತಿದೆ. ಆರೋಪಿಗಳನ್ನು ಬರೀ ಸ್ಥಳಾಂತರ ಮಾಡಿದಷ್ಟೇ ಸಾಲದು. ಜೈಲಿನ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.