ಲೋಕದರ್ಶನ ವರದಿ
ವಿಜಯಪುರ 27: ದೆಹಲಿಯ ತೊಗಲಕಬಾದನಲ್ಲಿ ಮೊದಲಿದ್ದ ಜಾಗದಲ್ಲಿಯೇ ಸಂತ ರವಿದಾಸರ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಬಸವೇಶ್ವರ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಸಮಗಾರ ಮಹಾಶಿವಶರಣ ಹರಳಯ್ಯ ಯುವ ಮೋರ್ಚ ವೇದಿಕೆ ವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಡಾ.ಬಿ.ಆರ್. ಅಂಬೇಡ್ಕರ ವೃತ್ತದಿಂದ ಆರಂಭಗೊಂಡ ರ್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು.
ನೇತೃತ್ವ ವಹಿಸಿದ್ದ ಶಿವಾಜಿ ಸತ್ತಾಳಕರ ಮಾತನಾಡಿ, ದೇಶದಲ್ಲಿ ಹೆಸರುವಾಸಿಯಾದ ಸಂತ ರವಿದಾಸರ ದೇವಸ್ಥಾನವನ್ನು ನೆಲಸಮ ಮಾಡಿರುವ ಕ್ರಮ ಖಂಡನೀಯ, ದೇವಾಲಯ ಬೀಳಿಸಿರುವುದು ಸಮಸ್ತ ಚಮ್ಮಾರ ಸಮಾಜದ ಜನರಿಗೆ ನೋವಂಟು ಮಾಡಿದೆ. ಚಮ್ಮಾರ, ಸಿಖ್ ಸಮುದಾಯಗಳ ಆತ್ಮ ಗೌರವಕ್ಕೆ ಧಕ್ಕೆ ಬರದ ಹಾಗೆ ಈ ವಿಷಯವನ್ನು ಸೂಕ್ಷ್ಮವಾಗಿ ಹಾಗೂ ಗಂಭೀರವಾಗಿ ಪರಿಗಣಿಸಿ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಉತ್ತರ ಪ್ರದೇಶ ಮತ್ತು ನವದೆಹಲಿ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಸಂತ ರವಿದಾಸರ ದೇವಸ್ಥಾನವನ್ನು ಮೊದಲ ಇದ್ದ ಜಾಗದಲ್ಲಿಯೇ ಅದನ್ನು ಪುನರ್ ನಿಮರ್ಾಣ ಮಾಡಬೇಕು ಎಂದು ಒತ್ತಾಯಿಸಿದರು.
1947ರಿಂದ 1948ರ ಸದರಿ ಜಾಗವನ್ನು ಸಂತ ರವಿದಾಸ ಮಂದಿರದ ಹೆಸರಲ್ಲಿ ಖಾತೆ ನಂ. 7/12 ನೋಂದಣಿಯಾಗಿದೆ. ಕಾರಣ ಈ ದೇವಸ್ಥಾನವನ್ನು ಪುನರ ನಿರ್ಮಾಣವಾಗದಿದ್ದಲ್ಲಿ ಭಾರತ ಬಂದ್ಗೆ ಕರೆನೀಡಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಸಂತ ಹೊನಮೋರೆ, ಡಿ.ಕೆ. ಹೊಸಮನಿ, ಬಸವರಾಜ ಕಾಂಬಳೆ, ಸಂತೋಷ ಹಂಜಿ, ಗಣೇಶ ಕಬಾಡೆ, ಲಕ್ಷ್ಮಣ ಇಲಕಲ್, ಸಂತೋಷ ಬೆಳಗಾವಿ, ರಮೇಶ ಹೊನಮೋರೆ, ಬಿ.ಎಚ್.ಪವಾರ, ಯಲ್ಲಪ್ಪ ಕಾಂಬಳೆ, ಸಂತೋಷ ಬಾಲಗಾವಿ, ಪಿ.ಡಿ. ಮಾನೆ, ಎಮ್.ಆರ್.ಕಾಂಬಳೆ, ಎಸ್.ಕೆ. ಕಾಂಬಳೆ, ಪಾಂಡು ಕಾಂದೇನವರ, ಸಿದ್ಧೇಶ್ವರ ಕಾಂಬಳೆ, ತಿಪ್ಪಣ್ಣ ಶಹಾಪುರ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.