ರಾಜ್ಯೋತ್ಸವ ಪ್ರಶಸ್ತಿ ಅಷ್ಟೇನೂ ಸಮಾಧಾನ ತಂದು ಕೊಟ್ಟಿಲ್ಲ : ಡಾ. ಬಾಳಾಸಾಹೇಬ ಲೋಕಾಪುರ

The Rajyotsava award has not brought much relief: Dr. Balasaheb Lokapura

ಬೆಳಗಾವಿ 05: ನಗರದ ನಮ್ಮೂರ ಬಾನುಲಿ ಕೇಂದ್ರದಲ್ಲಿ ಕಾದಂಬರಿಕಾರರು, ಸಾಹಿತಿಗಳು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಬಾಳಾಸಾಹೇಬ ಲೋಕಾಪುರ ಅವರ "ಸಾಹಿತ್ಯ ಹಾಗೂ ಬಾಳ ಪಯಣ" ಎಂಬ ವಿಷಯದ ಮೇಲೆ ಸಂದರ್ಶನ ಕಾರ್ಯಕ್ರಮ ಜರುಗಿತು. ನಮ್ಮೂರ ಬಾನುಲಿ 90.8 ಸಮುದಾಯ ರೇಡಿಯೋ ಕೇಂದ್ರದಲ್ಲಿ ತಮ್ಮ ಸಂದರ್ಶನವನ್ನು ಹಂಚಿಕೊಂಡ ಡಾ. ಬಾಳಾಸಾಹೇಬ ಲೋಕಾಪುರ ಅವರು, ತಮ್ಮ ಬಾಳ ಪಯಣ ಹಾಗೂ ಅವರು ನಡೆದು ಬಂದ ದಾರಿಯ ಕುರಿತು ಸವಿವರವಾಗಿ ಸಂದರ್ಶನದಲ್ಲಿ ತಿಳಿಸಿದರು. ಪಿಯುಸಿ ಓದುತ್ತಿದ್ದಾಗ ಫೇಲ್ ಆದ ನಾನ್ನನ್ನು ನನ್ನ ಅಪ್ಪ ಧೈರ್ಯ ತುಂಬಿ ಅಪ್ಪಿಕೊಂಡಾಗ, ಅಲ್ಲಿಂದ ಮನವರಿಕೆ ಆಗಿ ಮುಂದೆ  ಎಲ್ಲದರಲ್ಲೂ ಉತ್ತಮ ಅಂಕ ಪಡೆದು ಉತ್ತೀರ್ಣನಾಗುವ ಹಠ ಬಂತು.   

ಈಗಿನ ಮಕ್ಕಳಿಗೆ ನಾವು ಇಂತಿಷ್ಟೇ ಚೌಕಟ್ಟನ್ನ ಹಾಕುತ್ತಿದ್ದೇವೆ. ಹುಟ್ಟುತ್ತಲೇ ಮೇಲು-ಕೀಳರಿಮೆಯಿಂದ ಪರಿಚಯ ಮಾಡಿಸುತ್ತಿದ್ದೇವೆ. ಇದು ತಪ್ಪು. ಅವರು ಕೇವಲ ನಮ್ಮ ನಿಮಿತ್ಯ ಭೂಮಿಗೆ ಬಂದವರು. ಅವರ ಜೀವನದ ಸ್ವಾತಂತ್ರ್ಯ ಅವರಿಗೆ ಬಿಡಬೇಕು ಎಂದರು. ಇದಾದಮೇಲೆ, ತಮ್ಮ ರಾಜ್ಯೋತ್ಸವ ಪ್ರಶಸ್ತಿ ಕುರಿತು ಮಾತನಾಡಿದ ಅವರು, ಈ ಪ್ರಶಸ್ತಿ ನನಗೆ ಸಮಾಧಾನ ನೀಡಿಲ್ಲ. ಯಾಕೆಂದರೆ ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಭೆಗಳಿಗೆ, ಸಾಹಿತಿಗಳಿಗೆ ಹಾಗೂ ಕಲಾವಿದರ ಕೊರತೆಯೇನಿಲ್ಲ. ಆದರೆ, ಕೇವಲ ನನಗೊಬ್ಬನಿಗೆ ಈ ಪ್ರಶಸ್ತಿ ಲಭಿಸಿರುವುದು ಅಷ್ಟೇನು ಸಂತಸ ನೀಡಿಲ್ಲ. ಕೇಳದೆಯೇ ಕರ್ನಾಟಕ ಸರ್ಕಾರ ನೀಡಿದೆ ಎಂಬುದೇ ಖುಷಿ. ಹಾಗೆಯೇ ಬೆಳಗಾವಿ ಜಿಲ್ಲೆಯ ಇನ್ನೂ ಅಷ್ಟು ಜನರಿಗೆ ಸಿಕ್ಕಿದ್ದರೆ ಈ ಖುಷಿ ದುಪ್ಪಟ್ಟಾಗುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಈ ಕಾರ್ಯಕ್ರಮದ ನಿರೂಪಣೆಯನ್ನು ರೇಡಿಯೋ ಜಾಕಿ ಚೇತನ ಕುಲಕರ್ಣಿ ಅವರು ನಡೆಸಿ ಕೊಟ್ಟರು. ಅವರ ಈ ನಿರೂಪಣೆಯನ್ನು ಡಾ. ಬಾಳಾಸಾಹೇಬ ಲೋಕಾಪುರ ಅವರು ಮೆಚ್ಚಿ, ಶ್ಲಾಘಿಸಿ ನಾಲ್ಕು ಮುಖ್ಯ ತಮ್ಮ ಕಾದಂಬರಿಗಳನ್ನು ನೀಡಿ ಅಭಿನಂದಿಸಿದರು.