ನವದೆಹಲಿ: 70 ಸ್ಥಾನಗಳ ದೆಹಲಿ ವಿಧಾನಸಭಾ ಚುನಾವಣೆಗೆ 29 ಅಭ್ಯರ್ಥಿಗಳನ್ನೊಳಗೊಂಡ ಬಿಜೆಪಿ ಮೊದಲ ಪಟ್ಟಿ ಶನಿವಾರ ಬಿಡುಗಡೆಯಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಚುನಾವಣೆಗಳು ನಡೆಯಲಿದ್ದು, ರಾಜಕೀಯ ತಜ್ಞರು ಶೀಘ್ರದಲ್ಲೇ ಚುನಾವಣಾ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಲ್ಲಿದ್ದಾರೆ.
ಮಾಜಿ ಸಂಸದ ಪರ್ವೇಶ್ ಅವರನ್ನು ನವದೆಹಲಿ ಕ್ಷೇತ್ರದಿಂದ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಣಕ್ಕಿಳಿಸಲಾಗಿದೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಎದುರಿಸಲಿರುವ ಬಿಜೆಪಿ ಅಭ್ಯರ್ಥಿ ಯಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
ಮುಖ್ಯಮಂತ್ರಿ ಮತ್ತು ಎಎಪಿ ಅಭ್ಯರ್ಥಿ ಅತಿಶಿ ಸ್ಪರ್ಧಿಸಲಿರುವ ಕಲ್ಕಾಜಿಯಿಂದ ಮತ್ತೊಬ್ಬ ಮಾಜಿ ಸಂಸದ ರಮೇಶ್ ಬಿಧುರಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಇದೇ ಕ್ಷೇತ್ರದಿಂದ ಕಾಂಗ್ರೆಸ್ ಅಲ್ಕಾ ಲಂಬಾ ಸ್ಪರ್ಧಿಸುತ್ತಿದ್ದಾರೆ.
ಇತ್ತೀಚೆಗೆ ಎಎಪಿ ತೊರೆದು ಬಿಜೆಪಿಗೆ ಸೇರ್ಪಡೆಯಾದ ಕೈಲಾಶ್ ಗಹ್ಲೋಟ್ ಅವರು ಬ್ರಿಜ್ವಾಸನ್‌ನಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿ ಅರವಿಂದರ್ ಸಿಂಗ್ ಲವ್ಲಿ ಗಾಂಧಿ ನಗರದಿಂದ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ದುಶ್ಯಂತ್ ಕುಮಾರ್ ಗೌತಮ್ ಮತ್ತು ಆಶಿಶ್ ಸೂದ್ ಅವರನ್ನು ಕ್ರಮವಾಗಿ ಕರೋಲ್ ಬಾಗ್ ಮತ್ತು ಜನಕಪುರಿಯಿಂದ ಬಿಜೆಪಿ ಕಣಕ್ಕಿಳಿಸಿದೆ. ದೆಹಲಿ ಬಿಜೆಪಿಯ ಮಾಜಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ಮಾಳವೀಯ ನಗರದಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿಯ 29 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಇಬ್ಬರು ಮಹಿಳೆಯರು ಮಾತ್ರ ಕಾಣಿಸಿಕೊಂಡಿದ್ದಾರೆ. ಎಎಪಿ ಈಗಾಗಲೇ ತನ್ನ ಸಂಪೂರ್ಣ ಪಟ್ಟಿಯನ್ನು ಪ್ರಕಟಿಸಿದ ನಂತರ ಬಿಜೆಪಿ ಅಭ್ಯರ್ಥಿಗಳನ್ನು ಬಹಿರಂಗಪಡಿಸಿದ್ದು, ಕಾಂಗ್ರೆಸ್ ಸಹ ಅನೇಕ ಹೆಸರುಗಳನ್ನು ಬಿಡುಗಡೆ ಮಾಡಿದೆ.