ಲೋಕದರ್ಶನ ವರದಿ
ವಿಜಯಪುರ 13: ರಾಜ್ಯದ 22 ಜಿಲ್ಲೆಗಳಲ್ಲಿ ಬೀಕರ ಪ್ರವಾಹಕ್ಕೆ ತುತ್ತಾಗಿರುವ ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡದೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ನಗರದ ಡಾ. ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಘಂಟೆಯವರೆಗೆ ವಿಜಯಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ, ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ, ಜಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗು ಜಿಲ್ಲಾ ಅಂಗ ಘಟಕಗಳ ವತಿಯಿಂದ ಬೃಹತ್ ಪ್ರಮಾಣದಲ್ಲಿ "ಧರಣಿ ಸತ್ಯಾಗ್ರಹ ನಡೆಸಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ಘೋಷನೆಗಳನ್ನು ಕೂಗಿದರು.
ನಂತರ ಪ್ರತಿಭಟನಾಕಾರರು ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಾಜಿ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಕೇಂದ್ರ ಸರಕಾರದ ಗೃಹ ಸಚಿವ ಅಮೀತ್ ಷಾ ಹಾಗು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ರವರ ಕೇಂದ್ರ ತಂಡ ಪ್ರವಾಹ ಸ್ಥಿತಿಯನ್ನು ವೀಕ್ಷಣೆ ಮಾಡಿ ಹೋಗಿ ಸುಮಾರು ಒಂದು ತಿಂಗಳು ಗತಿಸಿದರು ಈ ವರೆಗೂ ಯಾವುದೇ ಪರಿಹಾರವನ್ನು ಘೋಷಣೆ/ಬಿಡುಗಡೆ ಮಾಡದೇ ವಿಳಂಬ ನೀತಿ ಅನುಸರಿಸುತ್ತಿದ್ದು. ಜನತೆ ಬಿಜೆಪಿ ಸರಕಾರಕ್ಕೆ ಶಾಪ ಹಾಕುವಂತಾಗಿದೆ. ಅಚ್ಚೇ ದಿನ್ ಬರುತ್ತವೆ ಎಂದು ನಂಬಿಸಿ ಮತ ಪಡೆದ ಬಿಜೆಪಿ ಸರಕಾರ ತನ್ನದೇ ಸ್ವಂತ ಅಚ್ಚೇ ದಿನ್ಗಳು ಮಾಡಿಕೊಳ್ಳುತ್ತಿವೆ. ಇದನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಎರಡೂ ಸರಕಾರಗಳು ಈಗಲಾದರೂ ಎಚ್ಚೆತ್ತು ಸಂತ್ರಸ್ತರ ನೆರವಿಗೆ ಬರದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಆಗ್ರಹಿಸಿದರು.
ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ್ಅಹ್ಮದ್ ಬಕ್ಷೀ, ಜಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆರತಿ ಶಹಾಪೂರ, ಜಿಲ್ಲಾ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ರಾಜ್ಯ ಅಲ್ಪ ಸಂಖ್ಯಾತರ ಉಪಾಧ್ಯಕ್ಷ ಮಹ್ಮದ್ರಫೀಕ ಟಪಾಲ, ಜಿಲ್ಲಾ ಸೇವಾದಳದ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ರಾಜ್ಯ ಕಿಸಾನ್ ಘಟಕದ ಕಾರ್ಯದಶರ್ಿ ಸುಭಾಷ ತಳಕೇರಿ, ಬಿ.ಎಸ್.ಬ್ಯಾಳಿ, ಶರಣ್ಣಪ್ಪ ಯಕ್ಕುಂಡಿ, ಹೈದರ್ಅಲಿ ನಧಾಪ್, ಸುನೀಲ ಪತ್ತಾರ, ಆಯೂಬ ನಧಾಪ್, ರಾಕೇಶ ಬಜಂತ್ರಿ, ಅಶ್ಪಾಕ ಮನಗುಳಿ, ಅಲ್ಲಾಬಕ್ಷ ಮುಲ್ಲಾ ಮುಂತಾದವರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.