ವಿಜಯಪುರ: ತಾಂಬಾ ಗ್ರಾಮದ ಬ್ಯಾರೇಜ್ಗಳಿಗೆ ನೀರು ತುಂಬಿಸಲು ಮನವಿ

ಲೋಕದರ್ಶನ ವರದಿ

ವಿಜಯಪುರ 18: ತಾಂಬಾ ಗ್ರಾಮದ ದೊಡ್ಡ ಹಳ್ಳದ 5 ಬ್ಯಾರೇಜ್ಗಳಿಗೆ ನೀರು ತುಂಬಿಸುವಂತೆ ಮಾಜಿ ಸಚಿವರಾದ ಶಾಸಕ ಎಂ.ಸಿ.ಮನಗೂಳಿ ಅವರು ಕೃಷ್ಣಾ ಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಸಿಂದಗಿ ಮತಕ್ಷೇತ್ರದ ತಾಂಬಾ ಗ್ರಾಮದ ದೊಡ್ಡ ಹಳ್ಳಗಳಾದ ಬೆನಕನಹಳ್ಳಿ, ಶಿವಪುರ ತಾಂಬಾ, ತಾಂಬಾ ಎಲ್.ಟಿ., ಬನ್ನಿಹಟ್ಟಿ, ಗೊರನಾಳ  ಈ 5 ಗ್ರಾಮಗಳಲ್ಲಿ ಬ್ಯಾರೇಜ್ಗಳು ನಿರ್ಮಾಣವಾಗಿದ್ದು, 2 ವರ್ಷಗಳಿಂದ ಭೀಕರ ಬರಗಾಲದಿಂದ ನೀರು ಇಲ್ಲದ ಕಾರಣ ದನಕರುಗಳಿಗೆ ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. 

ಈಗಾಗಲೇ ನಾರಾಯಣಪೂರ ಡ್ಯಾಮ್ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಿದ್ದು, ಅದನ್ನು ಗುತ್ತಿಬಸವಣ್ಣ ಏತ ನೀರಾವರಿ ಮೂಲಕ ತಾಂಬಾ ಗ್ರಾಮದ ದೊಡ್ಡ ಹಳ್ಳದ ಎಸ್ಕೆಪ್ 110 ಕಿ.ಮೀ. ಮತ್ತು ಸಂಬಂಧಪಟ್ಟ ಉಪಕಾಲುವೆ ಮುಖಾಂತರ ನೀರು ಹರಿಸಿ ಎಲ್ಲ ಬ್ಯಾರೇಜ್ಗಳಿಗೆ ನೀರು ತುಂಬಿಸುವುದರಿಂದ ನೀರಿನ ಸಮಸ್ಯೆ ನಿವಾರಣೆಯಾಗುವುದರಿಂದ ತಾಂಬಾ ಗ್ರಾಮದ ದೊಡ್ಡ ಹಳ್ಳದ 5 ಬ್ಯಾರೇಜ್ಗಳಿಗೆ ನೀರು ತುಂಬಿಸುವಂತೆ ಕೋರಿದ್ದಾರೆ.