ವಿಜಯಪುರ: ಸೆ.20 ರಿಂದ ಲಿಂ.ಸಿದ್ಧಲಿಂಗರ ಪುಣ್ಯಾರಾಧನೆ

ವಿಜಯಪುರ 13: ಇಂಡಿ ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದಲ್ಲಿ ಲಿಂಗೈಕ್ಯ ಸಿದ್ಧಲಿಂಗ ಮಹಾರಾಜರ 92ನೇ ಪುಣ್ಯಾರಾಧನೆಯ ಅಂಗವಾಗಿ ಇದೇ ದಿ. 20 ಹಾಗೂ 21 ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾಯ್ಕ್ರಮಗಳನ್ನು ಆಯೋಜಿಸಲಾಗಿದೆ.

ದಿ.20 ರಂದು ಬೆಳಿಗ್ಗೆ 5 ಕ್ಕೆ  ಶಂಕರಲಿಂಗ ಮಹಾಶಿವಯೋಗಿಗಳ ಹಾಗೂ ಶ್ರೀ ಸಿದ್ಧಲಿಂಗ ಮಹಾರಾಜರ ಶಿಲಾ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಲಿದೆ. ಸಂಜೆ 5 ಗಂಟೆಗೆ ಪ್ರವಚನಕಾರರಾದ ಪ್ರಭುಲಿಂಗ ಶರಣರು ಕಳೆದ ಸೆ.6 ರಿಂದ ನಡೆಸಿಕೊಂಡು ಬಂದ "ಪ್ರವಚನದ ಮಹಾಮಂಗಲೋತ್ಸವ" ನಡೆಯಲಿದೆ. ಬಳಿಕ ಸಂಜೆ 7 ಗಂಟೆಗೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಜನಾ ತಂಡದವರಿಂದ "ನಿರಂತರ ಸಪ್ತಾಹ ಭಜನೆ" ನಡೆಯಲಿದೆ. ದಿ.21 ರಂದು ಬೆಳಿಗ್ಗೆ 11 ಕ್ಕೆ ಬಂಥನಾಳ ಹಾಗೂ ಲಚ್ಯಾಣ ಮಠದ  ಪೀಠಾಧೀಶರಾದ ಪೂಜ್ಯ ಶ್ರೀ ವೃಷಭಲಿಂಗ ಮಹಾಶಿವಯೋಗಿಗಳ ಪಾದ ಪೂಜಾ ಸಮಾರಂಭ ಜರುಗಲಿದೆ. ಸೋಲಾಪುರದ ಬಸವರಾಜ ಸಿದ್ರಾಮಪ್ಪ ಕರಜಗಿಕರ್ ದಂಪತಿಗಳು ಈ ಸೇವೆ ನೆರವೇರಿಸಲಿದ್ದಾರೆ. ಸಂಜೆ 5 ಗಂಟೆಗೆ ಬಂಥನಾಳದ ಸಂಗನಬಸವ ಮಹಾಶಿವಯೋಗಿಗಳ ಭಾವಚಿತ್ರದೊಂದಿಗೆ ಅಡ್ಡ ಪಲ್ಲಕ್ಕಿ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ವೈಭವದಿಂದ ನಡೆಯಲಿದೆ.