ಲೋಕದರ್ಶನ ವರದಿ
ವಿಜಯಪುರ 10: ಬಿ.ಎಲ್.ಡಿ.ಇ. ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯದಲ್ಲಿ ಸ್ವಸ್ಥವೃತ್ತ, ಶಾಲಾಕ್ಯ ತಂತ್ರ, ಎನ್.ಎಸ್.ಎಸ್. ಘಟಕ ಹಾಗೂ ರೋಟರಿ ಕ್ಲಬ್ ವಿಜಯಪುರ (ಉತ್ತರ) ಇವರ ಸಹಯೋಗದಲ್ಲಿ "ವಿಶ್ವ ಆರೋಗ್ಯ ದಿನಾಚರಣೆ 2019" ಅಂಗವಾಗಿ ಇಂದು ಅತಿಥಿ ಉಪನ್ಯಾಸ ಹಾಗೂ ಉಚಿತ ದಂತರೋಗ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್, ಬಿಜಾಪುರ(ಉತ್ತರ) ಅಧ್ಯಕ್ಷ ಡಾ. ಅಶೋಕ ಎಂ. ವಾಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ವಿಶ್ವದ ಜನಸಂಖ್ಯೆ ಸುಮಾರು ಅರ್ಧದಷ್ಟು ಜನರು ತುರ್ತು ಸಂದರ್ಭದಲ್ಲಿ ತಮಗೆ ಬೇಕಾದ ಆರೋಗ್ಯ ಸೇವೆಯನ್ನು ಪಡೆಯುವಲ್ಲಿ ತಮ್ಮ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ವಿಫಲರಾಗಿದ್ದು, 2019ರ ವಿಶ್ವ ಆರೋಗ್ಯ ದಿನಾಚರಣೆಯ ಘೋಷವಾಕ್ಯ "ಎಲ್ಲರಿಗೂ ಎಲ್ಲೆಡೆಯೂ ಆರೋಗ್ಯ ವಾಗಿರುವುದು ಸ್ವಾಗತಾರ್ಹ, ಪ್ರಸ್ತುತ ಭಾರತದಲ್ಲಿ ದಂತರೋಗಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಅವುಗಳನ್ನು ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಖ್ಯಾತ ದಂತವೈದ್ಯರಾದ ಡಾ. ಐ.ಎಂ. ಕೋತ್ವಾಲ್ ಹಾಗೂ ಡಾ. ರೂಪಶ್ರೀ ಇವರು ದಂತರೋಗಗಳನ್ನು ತಡೆಗಟ್ಟುವ ವಿಧಾನ ಹಾಗೂ ಚಿಕಿತ್ಸೆಯ ಬಗ್ಗೆ ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ವಿಶ್ವ ಆರೋಗ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದಕ್ಕಾಗಿ ಇಂತಹ ಆರೋಗ್ಯ ಶಿಬಿರಗಳು ಅತ್ಯವಶ್ಯಕ ಎಂದರು.
ಈ ಸಂದರ್ಭದಲ್ಲಿ ಸುಮಾರು 200 ಕ್ಕೂ ಹೆಚ್ಚು ಜನ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು. ಶಾಲಾಕ್ಯ ವಿಭಾಗದ ಮುಖ್ಯಸ್ಥರಾದ ಡಾ. ಗಂಗಾಧರ ತಿಮ್ಮಾಪೂರ, ರೋಟರಿಯನ್ ಡಾ.ರಾಮರಾವ್, ಶ್ರೀಹರ್ಷ ಶಾಹ ಮತ್ತಿತರರು ಉಪಸ್ಥಿತರಿದ್ದರು.
ಡಾ. ಸತೀಶ ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಡಿ.ಎನ್. ಧರಿ ಸ್ವಾಗತಿಸಿದರು. ಡಾ. ವಿಜಯಲಕ್ಷ್ಮೀ ಹಾದಿಮನಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಅಶ್ವಿನಿ ನಿಂಬಾಳ ವಂದಿಸಿದರು.