ನವದೆಹಲಿ 28: ರಾಷ್ಟ್ರ ರಾಜಧಾನಿ ದೆಹಲಿಯ ನಜಾಫ್ಗಢ ಪ್ರದೇಶದಲ್ಲಿ ಕುರುಕಲು ತಿನಿಸು ತಯಾರಿಕಾ ಕಾರ್ಖಾನೆಯೊಂದರಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸಂಭವಿಸಿದ ಸ್ಫೋಟದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ 8.16ರ ಸುಮಾರಿಗೆ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ಕರೆ ಬಂದಿತ್ತು. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೆಂಕಿ ಹೊತ್ತಿಕೊಂಡ ಪರಿಣಾಮ ಉಂಟಾದ ಸ್ಫೋಟದಿಂದ ಕಾರ್ಖಾನೆಯ ಒಳಗಿದ್ದ ಆರು ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಅವರನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕಾರ್ಮಿಕರು ನೆಲಮಹಡಿಯಲ್ಲಿ ಬಿಸ್ಕೆಟ್ ತಯಾರಿಸುತ್ತಿದ್ದು, ಗ್ಯಾಸ್ ಸಿಲಿಂಡರ್‌ಗೆ ಅಳವಡಿಸಿದ್ದ ಪೈಪ್ ಸಿಡಿದ ಕಾರಣ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿರಬಹುದು ಎಂದು ಅಧಿಕಾರಿ ಹೇಳಿದ್ದಾರೆ.
ಅವಘಡದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.