ಉತ್ತರ ಕರ್ನಾಟಕದಲ್ಲಿ ಎಳ್ಳ ಅಮಾವಾಸ್ಯೆ ವಿಶಿಷ್ಟವಾಗಿ ಆಚರಣೆ: ಮಲ್ಲಿಕಾರ್ಜುನಗೌಡ ಪಾಟೀಲ್
ಮುಂಡರಗಿ 29: ಉತ್ತರ ಕರ್ನಾಟಕದಲ್ಲಿ ಎಳ್ಳ ಅಮಾವಾಸ್ಯೆ ಎಂದರೆ ಸಾಕು ರೈತರ ಪಾಲಿಗೆ ಸಂಭ್ರಮದ ಹಬ್ಬವಿದ್ದಂತೆ. ವಿವಿದೆಡೆ ಈ ಹಬ್ಬವನ್ನು ಬಹಳಷ್ಟು ವಿಶೇಷ ಹಾಗೂ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಹೀಗಾಗಿ ಡಿ.30 ಎಳ್ಳು ಅಮವಾಸೆಯಂದು ಎಳ್ಳು ಹಾಗೂ ಕಡ್ಲಿ ಹೋಳಿಗೆ, ವೈವಿಧ್ಯಮಯ ಪಲ್ಲೆ, ಬಗೆ ಬಗೆಯ ಪಲ್ಯೆ, ಅನ್ನದ ಉಂಡೆ ಹೀಗೆ ವಿವಿಧ ತರಹದ ಆಹಾರದ ತಿನಿಸುಗಳನ್ನು ತಯಾರಿಸಿಕೊಂಡು ಭೂಮಿ ತಾಯಿಗೆ ಚೆರಗ ಚೆಲ್ಲುವ ಮೂಲಕ ನೈವೈದ್ಯ ಅರ್ಿಸುವ ಪರಂಪರೆಯನ್ನು ಜೀವಂತವಾಗಿಸಿದೆ.
ಅಲ್ಲದೇ ನಾಡಿನ ಎಲ್ಲೆಡೆ ಪ್ರತಿವರ್ಷ ರೈತರಿಂದ ಚೆರಗ ಚೆಲ್ಲುವ ಸಂಭ್ರಮ ಮನೆ ಮಾಡಿರುತ್ತದೆ. ಐದು ಕಲ್ಲುಗಳನ್ನಿಟ್ಟು ಭೂತಾಯಿಯನ್ನು ಪೂಜಿಸಿ, ಎಲ್ಲರೂ ಸಹಭೋಜನ ಸವಿದು ಸಂಭ್ರಮಿಸುತ್ತಾರೆ. ಆದರೆ ಈ ವರ್ಷ ಕೆಲವು ಕಡೆ ಹಿಂಗಾರು ಹಂಗಾಮಿನ ಬಿತ್ತನೆ ಪೂರ್ವದಲ್ಲಿ ಬಿಟ್ಟು ಬಿಡದ ಮಳೆಯಿಂದ ಕಡಲೆ ಬೆಳೆಯ ಬಿತ್ತನೆಗೆ ತಡವಾದ ಕಾರಣ ಕಡಲೆ ಹಾಗೂ ಜೋಳದ ಬೆಳೆಯು ಹೇಳಿಕೊಂಡಷ್ಟು ಬೆಳೆದಿಲ್ಲ ಎಂದು ಕೆಲವು ರೈತರು ಬೇಸರ ವ್ಯಕ್ತಪಡಿಸಿದರು.
ಹೊಲಕ್ಕೆ ಹೋಗುವುದೇ ಸಂಭ್ರಮ : ಸಾಮಾನ್ಯವಾಗಿ ರೈತರು ಈ ಸಮಯದಲ್ಲಿ ಮುಖ್ಯವಾಗಿ ಜೋಳ ಹಾಗೂ ಕಡಲೆಯನ್ನು ಬೆಳೆಯುತ್ತಾರೆ. ಇದು ಅವರಿಗೆ ಕಡಿಮೆ ಖರ್ಚಿನಲ್ಲಿಯೇ ಒಳ್ಳೆಯ ಫಸಲನ್ನು ನೀಡುತ್ತದೆ. ಹೀಗಾಗಿ ವಿವಿಧ ಬಗೆಯ ಅಡುಗೆಯನ್ನು ತಯಾರಿಸಿಕೊಂಡು ನೀರಿನ ಬಾಟಲಿಯೊಂದಿಗೆ ಕೆಲವು ಕಡೆ ಗ್ರಾಮೀಣ ಪ್ರದೇಶದಲ್ಲಿ ಎತ್ತಿನ ಬಂಡಿಯನ್ನು ಅಲಂಕರಸಿಕೊಂಡು ಬಹಳ ವಿಜ್ರಂಭಣೆಯಿಂದ ಸಾಗುತ್ತಿದ್ದಾರೆ. ಆದರೆ ಇಂದಿನ ವಿದ್ಯಾಮಾನಕ್ಕೆ ತಕ್ಕಂತೆ ಎತ್ತಿನ ಬಂಡಿ ಬಳಕೆ ಕಡಿಮೆಯಾದ ಕಾರಣ ಇಂದು ದ್ವೀಚಕ್ರವಾಹನ, ಟ್ರ್ಯಾಕ್ಟರ್, ಆಟೋ ರೀಕ್ಷಾ, ಟಂಟಂ ಹೀಗೆ ಲಭ್ಯವಿರುವ ವಾಹನಗಳನ್ನು ತೆಗೆದುಕೊಂಡು ಹೊಲಕ್ಕೆ ಹೋಗುತ್ತಾರೆ.
ಚರಗ ಚೆಲ್ಲುವ ವಿಶೇಷತೆ : ಈ ಹಬ್ಬದ ಹಿಂದೆ ಮಹದಾದ ವೈಜ್ಞಾನಿಕ ಕಾರಣವಿದೆ. ಎಳ್ಳ ಅಮವಾಸ್ಯೆ ಹೊತ್ತಿಗೆ ಕಪ್ಪು ಮಣ್ಣನ್ನು ಹೊಂದಿರುವ ರೈತರ ಹೊಲದಲ್ಲಿ ಹಿಂಗಾರು ಪೈರು ಬೆಳೆದು ನಿಂತಿರುತ್ತದೆ. ಅದರಲ್ಲಿಯೂ ಜೋಳದ ಮಧ್ಯೆ ಕಡಲೆ ಬೆಳೆಗೆ ಸಿಡಿ ರೋಗ ಹಾಗೂ ಕಾಯಿಕೊರಕ ಎಂಬ ಹುಳ ಬಿದ್ದು ಹಾನಿ ಮಾಡುತ್ತದೆ. ಈ ಹೊತ್ತಲ್ಲಿ “ಹುಲ್ಲು ಹುಲ್ಲಿಗೋ ಚೆಲ್ಲ ಚೆಲ್ಲಂಬರಿಗೋ” ಎಂದು ಹೇಳುತ್ತಾ ಚರಗ ಚೆಲ್ಲುವಾಗ ಬೆಳೆಯ ಮಧ್ಯೆ ಆಹಾರ ತಿನ್ನಲು ಹಕ್ಕಿಗಳು ಇಳಿಯುತ್ತವೆ. ಆಗ ಆಹಾರದ ಜೊತೆಗೆ ಕಡಲೆಗೆ ಬಿದ್ದಿರೋ ಕಾಯಿಕೊರಕ ಹುಳವನ್ನು ಕೂಡ ತಿನ್ನುತ್ತವೆ. ಇದರಿಂದ ಈ ಹುಳುಗಳ ನಿಯಂತ್ರಣವಾಗಿ, ಬೆಳೆಯ ಹುಲುಸು ಹೆಚ್ಚಾಗುವದೇ ಇದರ ಮಹತ್ವವಾಗಿದೆ ಎನ್ನಲಾಗುತ್ತಿದೆ.
ಕೋಟ್....
ಈ ಭಾಗದ ಗ್ರಾಮೀಣ ಪ್ರದೇಶದಲ್ಲಿ ಎಳ್ಳ ಅಮವಾಸೆ ದಿನದಂದು ರೈತ ಮಹಿಳೆಯರು ವಿವಿದ ತರಹದ ಅಡುಗೆ ಮಾಡಿಕೊಂಡು ಅವರವರ ವೈಯಕ್ತಿಕ ವಾಹನದ ಮೂಲಕ ಹೊಲಕ್ಕೆ ಹೋಗಿ ವಿಜ್ರಂಭಣೆಯಿಂದ ಆಚರಣೆ ಮಾಡುತ್ತಿರುವ ಪರಂಪರೆಯಾಗಿದೆ. ಕಳೆದ ವರ್ಷ ಸರಿಯಾಗಿ ಮಳೆಯಾಗದೇ ಬರಗಾಲ ಬಂದರೂ ಸಹ ಕಡಲೆ ಬೆಳೆಯಿಂದ ಒಳ್ಳೆ ಫಸಲನ್ನು ಸಿಕ್ಕಿತ್ತು. ಹೀಗಾಗಿ ಈ ವರ್ಷದಲ್ಲಿ ಹೆಚ್ಚಾಗಿ ಕಡಲೆ ಬೆಳೆ ಬಿತ್ತನೆ ಮಾಡಲಾಗಿದೆ. ಆದರೆ ಕಳೆದ ವರ್ಷಕ್ಕಿಂತ ಈ ವರ್ಷ ಹೇಳಿಕೊಂಡಷ್ಟು ಬೆಳೆದಿಲ್ಲ. ಕೆಲವರ ಬೆಳೆಗೆ ಸಿಡಿ ರೋಗ ಬಿದ್ದಿದೆ. ಇನ್ನೂ ಕೆಲವರ ಬಿಳಿಜೋಳಕ್ಕೆ ಸುಳಿರೋಗ ಬಿದ್ದಿರುವುದು ಬೇಸರದ ಸಂಗತಿ.