ವಿಜಯಪುರ: ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ತಪ್ಪದೇ ಮತ ಚಲಾಯಿಸಿ: ಮಾಸ್ಟರ್ ಟ್ರೈನರ್ ಪ್ರೊ. ಎಂ.ಬಿ.ರಜಪೂತ ಕರೆ

ಲೋಕದರ್ಶನ ವರದಿ

ವಿಜಯಪುರ 04: ನಿಮ್ಮ ಮತ, ನಿಮ್ಮ ಹಕ್ಕು. ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ತಪ್ಪದೇ ಮತ ಚಲಾಯಿಸಿ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಹಬ್ಬವನ್ನು ಯಶಶ್ವಿಗೊಳಿಸಿ ಎಂದು ನಾಗಠಾಣ ಮತಕ್ಷೇತ್ರದ ಮಾಸ್ಟರ್ ಟ್ರೈನರ್ ಪ್ರೊ. ಎಂ.ಬಿ.ರಜಪೂತ ಕರೆ ನೀಡಿದರು. 

ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ನಡೆದ ನಾಗಠಾಣ ಗ್ರಾಮದ ಸೆಕ್ಟರ್ ನಂ 15 ರ ಅಡಿಯಲ್ಲಿ ಬರುವ 159,160,161,164 ಸಂಖ್ಯೆಯ ಮತಗಟ್ಟೆಗಳಲ್ಲಿ ಮತದಾರರ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಮತದಾರರಿಗೆ ಇ.ವಿ.ಎಂ ಹಾಗೂ ವಿ.ವಿ.ಪ್ಯಾಟ್ ಯಂತ್ರಗಳ ಅರಿವು ಹಾಗೂ ಮತಯಂತ್ರಗಳ ನಿಖರತೆಯ ಕಲ್ಪನೆ ಮಾಡಿಕೊಡುವ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಜಾಪ್ರಭುತ್ವ ಯಶಶ್ವಿಯಾಗಬೇಕಾದರೆ ಪ್ರತಿಯೊಬ್ಬರೂ ತಮ್ಮ ರಾಜಕೀಯ ಹಕ್ಕು ಹಾಗೂ ಕರ್ತವ್ಯವಾದ ಮತ ಚಲಾಯಿಸಲೇಬೇಕು. ಕರ್ತವ್ಯ ವಿಮುಖರಾಗಿ ಕೇವಲ ರಾಜಕೀಯವನ್ನು ಟೀಕಿಸುವ ಪೃವೃತ್ತಿ ಕೈ ಬಿಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

ಸೆಕ್ಟರ್ ನಂ.15ರ ಅಧಿಕಾರಿಯಾದ ಎಸ್.ಎಸ್. ದೇಸಾಯಿ ಮಾತನಾಡಿ ಮತದಾನ ತುಂಬಾ ಪವಿತ್ರವಾದುದು ಕಾರಣ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ಪ್ರಾಮಾಣಿಕವಾಗಿ ಮತ ಚಲಾಯಿಸಿ ಉತ್ತಮ ಸರಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು. ನಾಗಠಾಣ ಗ್ರಾಮದ ಬಿ.ಎಲ್.ಓ ಗಳು ಹಾಗೂ ಅಪಾರ ಪ್ರಮಾಣದಲ್ಲಿ ಮತದಾರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಶ್ವಿಗೊಳಿಸಿದರು.