ಲೋಕದರ್ಶನ ವರದಿ
ವಿಜಯಪುರ 10: ಅತೀವೃಷ್ಠಿ, ನೆರೆ ಹಾವಳಿ ಪೀಡಿತ ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ವಿಜಯಪುರ ಬಿ.ಎಲ್.ಡಿ.ಇ ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು, ಆಸ್ಪತ್ರೆ ವೈದ್ಯರ ಮೂರು ತಂಡಗಳು ಸಂಚರಿಸಿ, ಅಗತ್ಯವಿದ್ದವರಿಗೆ ವೈದ್ಯಕೀಯ ನೆರವು, ಚಿಕಿತ್ಸೆ ನೀಡುತ್ತಿದ್ದಾರೆ.
ಬಿ.ಎಲ್.ಡಿ.ಇ ಆಸ್ಪತ್ರೆಯ ಅಸಿಸ್ಟಂಟ್ ಸುಪರಿಟೆಂಡೆಂಟ್ ಡಾ.ವಿಜಯಕುಮಾರ ವಾರದ ನೇತೃತ್ವದ ತಂಡ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ, ಜುಂಜರವಾಡ, ನಂದಗಾಂವ, ಕಡಗನೂರ, ಕೊಕಟನೂರ ಗ್ರಾಮಗಳಲ್ಲಿ, ಡಾ.ರಾಜೇಶ ಹೊನ್ನುಟಗಿ ತಂಡ ನಾಗನೂರ ಪಿ.ಕೆ, ಸತ್ತಿ, ನಂದೀಶ್ವರ, ಮಹಿಷವಾಡಗಿ, ಜನವಾಡ ಗ್ರಾಮಗಳಲ್ಲಿ, ಖ್ಯಾತ ಸರ್ಜನ್ ಡಾ.ಮಂಜುನಾಥ ಕೊಟೆಣ್ಣನವರ ನೇತೃತ್ವದಲ್ಲಿ ಹಾರೊಗೇರಿ ಸುತ್ತಲಿನ ಶೇಗುಣಶಿ, ಕಾವತಕೊಪ್ಪ, ನದಿ ಇಂಗಳಗಾಂವ, ದರೂರ ಗ್ರಾಮಗಳಿಗೆ ಭೇಟಿ ನೀಡಿ, ಚಿಕಿತ್ಸೆ ನೀಡಿದರು.
ಡಾ.ವಿಜಯಕುಮಾರ ವಾರದ ನೇತೃತ್ವದ ತಂಡ ಜುಂಜರವಾಡ ಗ್ರಾಮಕ್ಕೆ ಬೋಟ್ ಮುಖಾಂತರ ತೆರಳಿ, ಚಿಕಿತ್ಸೆ ನೀಡಿರುವದು ವಿಶೇಷವಾಗಿತ್ತು.
ಇಂದು ಒಟ್ಟು 600ಜನರಿಗೆ ತಪಾಸಣೆ ಮಾಡಿ, ಔಷಧ ವಿತರಣೆ ಮಾಡಲಾಗಿದ್ದು, ಮುಂದಿನ ಒಂದು ವಾರ ಈ ರೀತಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಚರಿಸಿ, ಚಿಕಿತ್ಸೆ ನೀಡುವಂತೆ ಸಂಸ್ಥೆ ಅಧ್ಯಕ್ಷ, ಶಾಸಕ ಎಂ.ಬಿ.ಪಾಟೀಲ್ ಸೂಚನೆ ನೀಡಿದ್ದಾರೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿವಿ ಉಪಕುಲಪತಿ ಡಾ.ಎಂ.ಎಸ್.ಬಿರಾದಾರ ತಿಳಿಸಿದ್ದಾರೆ.
ನೆರೆ ಹಾವಳಿ ಪೀಡಿತ ಪ್ರದೇಶಗಳಲ್ಲಿ ಬಿ.ಎಲ್.ಡಿ.ಇ ವೈದ್ಯರು ನೀಡುತ್ತಿರುವ ಚಿಕಿತ್ಸೆಯಿಂದ ಸಾರ್ವಜನಿಕರಿಗೆ ಹೆಚ್ಚಿನ ಅನಕೂಲವಾಗಿದೆ. ಮತ್ತು ಸ್ಥಳದಲ್ಲಿಯೇ ಜನರಿಗೆ ಎಲ್ಲ ತಜ್ಞವೈದ್ಯರ ಸಲಹೆ ಲಭ್ಯವಾಗಿದೆ ಎಂದು ಅಥಣಿಯ ಯುವ ಉದ್ಯಮಿ ವಿನೋದ ಸಾವಡಕರ್ ತಿಳಿಸಿದರು.