ಮುಂದಿನ ವರ್ಷದಿಂದ ಬಿತ್ತನೆ ಬೀಜಕ್ಕೆ ಏಕರೂಪ ಬೆಲೆ: ಕೃಷಿ ಸಚಿವ ಬಿ.ಸಿ.ಪಾಟೀಲ್

ಕಾರವಾರ, ಮೇ 4, ಮುಂದಿನ ವರ್ಷದಿಂದ ರೈತರಿಗೆ ಬೇಕಾದ ಬಿತ್ತನೆ ಬೀಜಕ್ಕೆ ಸರ್ಕಾರವೇ ಬೆಲೆ‌  ನಿಗದಿಪಡಿಸಲಿದ್ದು, ಏಕರೂಪ ಬೆಲೆ ಜಾರಿಯಾಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್  ಹೇಳಿದ್ದಾರೆ.ಶಿರಸಿಯ ಅಂಬೇಡ್ಕರ್ ಭವನದಲ್ಲಿ ನಡೆದ ಕೋವಿಡ್-19 ಸಾಂಕ್ರಾಮಿಕ  ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು  ಜನಪ್ರತಿನಿಧಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಅವರು  ಮಾತ‌ನಾಡಿದರು.ಫಸಲ್ ಭೀಮಾ ಯೋಜನೆಯದ್ದು ಸಮಸ್ಯೆಯಾಗಿದೆ. ಇದಕ್ಕಾಗಿ ಹೊಸ ತಂತ್ರಾಂಶ  ಅಳವಡಿಕೆ ಜಾರಿಯಲ್ಲಿದ್ದು, ಕಂತುಕಟ್ಟಿದ ರೈತರಿಗೆ ಯಾವುದೇ ರೀತಿಯ ಅನ್ಯಾಯ ಆಗದಂತೆ  ವಿಮೆ ಬರಲು ಸೂಕ್ತ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅವರು ಭರವಸೆ ನೀಡಿದರು.
ಯಾವುದೇ ಕಂಪೆನಿಯ ಬಿತ್ತನೆ ಬೀಜ ಐಸಿಸಿಎಯಲ್ಲಿ  ರಿಜಿಸ್ಟರ್ ಆದ ಬಿತ್ತನೆಬೀಜ ರಸಗೊಬ್ಬರವನ್ನು ಮಾತ್ರವೇ ಮಾರಾಟ ಮಾಡಬೇಕು. ಅಕ್ರಮ ಕಳಪೆ  ಗುಣಮಟ್ಟರಹಿತ ಬೀಜ ಪತ್ತೆ ಮಾಡಿ ರೈತರ ಸಹಾಯಕ್ಕೆ ಬರುವುದು ನಮ್ಮ ಕರ್ತವ್ಯ  ಎಂದರು.ಲಾಕ್‌ ಡೌನ್ ಸಮಯದಲ್ಲಿ ಜನಪ್ರತಿನಿಧಿಗಳು ಇನ್ನಷ್ಟು ಸಮರ್ಪಕವಾಗಿ  ಜನರಿಗಾಗಿ ದುಡಿಯಬೇಕು. ಕೊರೊನಾ ಜಗತ್ತಿಗೆ ಬಂದಂತಹ ಸಂಕಟ. ಈಗಿನ ಸಂದರ್ಭ ಬದುಕು ಮತ್ತು  ಜೀವನದ ಪ್ರಶ್ನೆಯಾಗಿದೆ‌‌. ಲಾಕ್‌ ಡೌನ್‌ ಸಂದರ್ಭದಲ್ಲಿ ಯಾವುದೇ ಚಟುವಟಿಕೆ  ಸ್ಥಗಿತಗೊಂಡಿದ್ದರೂ ಕೃಷಿ ಚಟುವಟಿಕೆ ಸ್ಥಗಿತಗೊಂಡಿಲ್ಲ. ಯಾವುದೇ ಕಾರಣಕ್ಕೂ ರೈತರಿಗೆ ಬೀಜ  ಗೊಬ್ಬರದ ಬಿತ್ತನೆ ಬೀಜ ರಸಗೊಬ್ಬರ ನಮ್ಮಲ್ಲಿ ದಾಸ್ತಾನು ಇದೆ. ಯಾವುದೇ ಕೊರತೆಯಿಲ್ಲ. ಅವಶ್ಯಕತೆಗೆ ತಕ್ಕಂತೆ ಗೊಬ್ಬರ ಬಿತ್ತನೆ ಬೀಜ ಪೂರೈಸಲಾಗುವುದು ಎಂದರು.
ಕಾರವಾರ ಜಿಲ್ಲೆಯ ತೋಟಗಾರಿಕಾ,  ಕೃಷಿ ಇಲಾಖೆಗಳ ಕಾರ್ಯವೈಖರಿ ಬಗ್ಗೆ ತಿಳಿಯಲು ತಾವು ಭೇಟಿ ನೀಡಿದ್ದೇನೆ. ತಾವು  ಚಿಕ್ಕವರಿದ್ದಾಗ ಅಡಿಕೆ ಮಾರಲು ಶಿರಸಿಗೆ ಬರುತ್ತಿದ್ದ ನೆನಪನ್ನು  ಸ್ಮರಿಸಿದ್ದೇನೆ. ಅಡಿಕೆ ಮಾರುಕಟ್ಟೆ ಬಹಳ ದೊಡ್ಡದು. ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ  ಹೆಗಡೆಯವರ ಕ್ಷೇತ್ರವಿದು. ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ತಮ್ಮೊಂದಿಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಸಹ ದುಡಿಯುತ್ತಿದ್ದಾರೆ ಎಂದರು.ಕೋವಿಡ್-19  ಲಾಕ್ ಡೌನ್ ಘೋಷಣೆ ಬಳಿಕ ಕೃಷಿ ಚಟುವಟಿಕೆ ನಿಂತುಹೋಗಿತ್ತು‌. ವಿಶೇಷವಾಗಿ  ಹಣ್ಣುಹಂಪಲು, ತರಕಾರಿ ಕೊಳೆತು ಹೋಗುತ್ತಿತ್ತು. ಇದನ್ನು ಗಮನಿಸಿದ ಮುಖ್ಯಮಂತ್ರಿಗಳು ರೈತರ  ಚಟುವಟಿಕೆಗೆ ಹಸಿರು ನಿಶಾನೆ ತೋರಿದರು. ಏಪ್ರಿಲ್ 6ರಿಂದ ಜಿಲ್ಲಾ ಪ್ರವಾಸ  ಆರಂಭಿಸಿದ್ದು, ಕಾರವಾರ 27ನೇ ಜಿಲ್ಲೆಯಾಗಿದೆ. ಕೃಷಿ ಜಂಟಿ ನಿರ್ದೇಶಕರು ಬಿತ್ತನೆ  ಬೀಜ,ಗೊಬ್ಬರ, ಪೂರೈಕೆ ದಾಸ್ತಾನು ಬಗ್ಗೆ ಹಾಗೂ ಮುಂಗಾರು ಬಿತ್ತನೆಗೆ ಇಲಾಖೆ ಹೇಗೆ  ಸಜ್ಜಾಗಿದೆ ಎಂದು ಮಾಹಿತಿ ನೀಡುವಂತೆ ಸಭೆಯಲ್ಲಿ ಸೂಚಿಸಿದರು.
ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್  ಮಾತನಾಡಿ, ಮಂತ್ರಿಮಂಡಲದಲ್ಲಿ ಕೋವಿಡ್ ಸಮಯದಲ್ಲಿ ರಾಜ್ಯಾದ್ಯಂತ ಅತಿ ಹೆಚ್ಚು ಜಿಲ್ಲಾ  ಪ್ರವಾಸ ಮಾಡಿದ ಸಚಿವರೆಂದರೆ ಅದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತ್ರ. ಇದಕ್ಕಾಗಿ ಕೃಷಿ  ಸಚಿವರು ಶ್ಲಾಘನೆಗೆ ಅರ್ಹರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕೃಷಿ ಕ್ಷೇತ್ರದಲ್ಲಿ  ಅದರಲ್ಲಿಯೂ ಉತ್ತರ ಕರ್ನಾಟಕ ಜಿಲ್ಲೆ ಹಲವಾರು ಯೋಜನೆಗಳಿಗೆ ತ್ಯಾಗ ಮಾಡಿದ  ಜಿಲ್ಲೆ. ಜಿಲ್ಲೆಗೆ ಕೃಷಿಯಲ್ಲಿ ವಿಶೇಷ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.
ರಾಜ್ಯದಿಂದ  ಮಂತ್ರಿಗಳು ಬಂದಿದ್ದಾರೆ. ನಮ್ಮಲ್ಲಿರುವ ಸಮಸ್ಯೆ ಏನು ನಮಗೇನು ಬೇಕು ಎಂಬುದನ್ನು ಸಚಿವರ  ಗಮನಕ್ಕೆ ತರಬೇಕು. ಯಾವುದು ಹಾನಿಯಾಗಿದೆ ಕೊರತೆಯೇನಿದೆ ಎನ್ನುವುದನ್ನು  ವಿವರಿಸಬೇಕು. ಸರ್ಕಾರದ ಆದ್ಯತೆಗಳ ಬಗ್ಗೆ ಅಧಿಕಾರಿಗಳು ಆದ್ಯತೆ ಕೊಡಬೇಕು. ಉತ್ತರಕನ್ನಡ  ಅರೆಮಲೆನಾಡು ಕರಾವಳಿ ಈ ಭಾಗದಲ್ಲಿದೆ‌. ಈ ಮೂರನ್ನು ಹೊಂದಿರುವ ವಿಶಿಷ್ಟ ಜಿಲ್ಲೆ  ಕಾರವಾರ. ಹಳಿಯಾಳ ಬನವಾಸಿ ಮುಂಡಗೋಡದಲ್ಲಿನ‌ ಹಾನಿ ಬಗ್ಗೆ ಅಧಿಕಾರಿಗಳು ಸಚಿವರ ಗಮನಕ್ಕೆ  ಸರಿಯಾಗಿ ತಂದಲ್ಲಿ ಅವರು ಸರ್ಕಾರದ ಜೊತೆ ಚರ್ಚಿಸಲು ಸಹಾಯಕವಾಗುತ್ತದೆ ಎಂದು  ಸೂಚಿಸಿದರು.
ಶಾಸಕರಾದ ರೂಪಾಲಿ ನಾಯಕ್, ಸುನೀಲ್ ನಾಯಕ್,‌ ಆಶಿಸರ ಹೆಗಡೆ, ಜಿಲ್ಲಾಧಿಕಾರಿ ಹರೀಶ್ ಕುಮಾರ್,‌ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ರೋಷನ್, ರೈತ ಪ್ರತಿನಿಧಿಗಳು ಉಪಸ್ಥಿತರಿದ್ದರು.