ಬಂಧಗಳನ್ನು ಬೆಸೆಯುವ ಹಬ್ಬ ಯುಗಾದಿ: ಸಿದ್ದಪ್ಪ ಬಿದರಿ

Ugadi is a festival that forges bonds: Siddappa Bidari

ಬಂಧಗಳನ್ನು ಬೆಸೆಯುವ ಹಬ್ಬ ಯುಗಾದಿ: ಸಿದ್ದಪ್ಪ ಬಿದರಿ 

ಬಾಗಲಕೋಟ 04: ಒಂದು ಕಡೆ ಮಿನುಗುವ ಸೀರೆ, ಲಂಗಾ ದಾವಣಿಯಲ್ಲಿ ಮಿಂಚುತ್ತಿರುವ ನಾರಿಯರು, ಮತ್ತೊಂದೆಡೆ ಪಂಚೆ ಶರ್ಟು ತೊಟ್ಟು, ಧೋತಿ ಉಟ್ಟು ಮೀಸೆ ತಿರುವುತ್ತಿರುವ ಗಂಡು ಹೈಕ್ಳು, ಹೂ ಮಾವಿನೆಲೆಯಲ್ಲಿ ಶೃಂಗಾರಗೊಂಡ ಕಟ್ಟಡ, ಬಿಸಿಲಿನ ಧಗೆಯನ್ನು ಗಮನಿಸದೆ ಹಾಡುಗಳಿಗೆ ಹೆಜ್ಜೆ ಹಾಕುತ್ತಿರುವ ಸ್ನೇಹಿತರ ಗುಂಪು ಒಟ್ಟಿನಲ್ಲಿ ನೋಡಿದವರೆಗೆ ಯುಗಾದಿ ಸೊಬಗನ್ನು ಮತ್ತೊಮ್ಮೆ ಮರುಕಳಿಸಿದಂತಹ ವಾತಾವರಣ ಸೃಷ್ಟಿಯಾಗಿದ್ದು  ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ. ಏ.3 ಮತ್ತು 4ರಂದು ಎರಡು ದಿನಗಳ ಕಾಲ ಯುಗಾದಿ ಹಬ್ಬದ ನಿಮಿತ್ಯ ವಸಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. 

ಕಲಾ ಮಹಾವಿದ್ಯಾಲಯವನ್ನು ಮದುವನಗಿತ್ತಿಯಂತೆ ಶೃಂಗರಿಸಿ ವಿದ್ಯಾರ್ಥಿಗಳು ದೇಸಿ ಉಡುಗೆ ತೊಡುಗೆಯ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಂಭ್ರಮಾಚರಿಸಿದರು. ಉತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಆಶುಕವಿ ಸಿದ್ದಪ್ಪ ಬಿದರಿ ಮಾತನಾಡಿ ವರ್ಷವೀಡೀ ಬದುಕಿನಲ್ಲಿ  ಬರುವ ಎಲ್ಲ ಸಿಹಿ-ಕಹಿ ಘಟನೆಗಳನ್ನು ಸಮನಾಗಿ ನಿಭಾಯಿಸಬೇಕು. ಯುಗಾದಿಯು ಸಂಬಂಧಗಳನ್ನು ಬೆಸೆಯುವ ಹಬ್ಬವಾಗಿದೆ. ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ ಆಚರಿಸುವರು ಬಣ್ಣದ ಕನಸು ಕಟ್ಟಿದವರು. ಯುಗಾದಿಯಂದು ಸಂಭ್ರಮಿಸುವರು ಹಿರಿಯರು.   ಹೊಲದಲ್ಲಿನ ಸುಗ್ಗಿಮಾಡಿ ರಾಶಿ ಮಾಡುವುದರೊಳಗೆ ಯುಗಾದಿ. ವಸಂತ ಋತುವಿನ ಸೊಗಸನ್ನು ಹಾಗೂ ಹೊಸ ಎಲೆಗಳು ಚಿಗುರುಗಳ ಸಂತಸವನ್ನು ಯುಗಾದಿ ಮೂಲಕ ಸಂಭ್ರಮಿಸುತ್ತೇವೆ ಎಂದರು.  

ಹೆತ್ತ ತಂದೆ-ತಾಯಿ, ಕಲಿಸಿದ ಗುರುವಿಗೆ ಋಣಿಯಾಗಿರುವುದು ವಿದ್ಯಾರ್ಥಿಗಳ ಕರ್ತವ್ಯ. ಅವರ ಶ್ರಮಕ್ಕೆ ಪ್ರತಿಫಲ ಕೊಡುವ ಕೆಲಸ ಮಾಡಬೇಕು. ಅವರ ಶ್ರಮಕ್ಕೆ ಭಂಗ ತರದಂತೆ ಬದುಕಬೇಕು. ಹೆಣ್ಣು ಸಮಾಜದ ಕಣ್ಣಿದ್ದಂತೆ. ಕುಟುಂಬ ಮತ್ತು ಸಮಾಜದ ಕೀರ್ತಿ ಮಹಿಳೆಯರ ಮೇಲಿದೆ ಶಿಕ್ಷಣದ ಜೊತೆ ಸಂಸ್ಕಾರವನ್ನು ಬೆಳಸಿಕೊಳ್ಳಿ. ಧರ್ಮ, ದೇವರುಗಳ ಹೆಸರಲ್ಲಿ ಹೊಡೆದಾಟಗಳು ಹೆಚ್ಚುತ್ತಿವೆ. ಇದರಿಂದ ಹೊರಬಂದು ಸರ್ವಧರ್ಮ ಒಂದೇ ಎಂಬ ಸಂದೇಶ ಸಾರುವ ಕೆಲಸ ಯುವ ಪೀಳಿಗೆ ಮಾಡಬೇಕು ಎಂದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ಅಧ್ಯಕ್ಷಸ್ಥಾನ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್‌.ಆರ್‌. ಮುಗನೂರಮಠ ಮಾತನಾಡಿ ಭಾವನೆಗಳಿಗೆ ಬೆಲೆ ಕೊಡುವವರು ನಮ್ಮ ಕನ್ನಡಿಗರು. ಕವಿಗಳಿಗೆ ಕವಿತ್ವವೇ ಕಣ್ಣಿದ್ದಂತೆ. ಜನಪದ ಕವಿಗಳು ಆಶುಕವಿಗಳು. ಸಮಚಿತ್ತದಿಂದ ಜನರು ಜೀವಿಸಲು ಕಾರಣಿಕರ್ತರು ಜನಪದರು. ಸುಗ್ಗಿ ಸಂಭ್ರಮದಿಂದ ಹೊಸತನಕ್ಕೆ ಕಾಲಿಡುವ, ಪ್ರಕೃತಿ ಹೊಸ ಚಿಗುರು, ಕೋಗಿಲೆ ಹಾಡುವ ಕಾಲ ಯುಗಾದಿ. ವಿದ್ಯಾರ್ಥಿಗಳು ಮನಸ್ಸನ್ನು ಯೌವ್ವನದಲ್ಲಿ ಇಟ್ಟುಕೊಳ್ಳುವುದು ಅಗತ್ಯ ಎಂದರು.  


ಸಾಂಸ್ಕೃತಿಕ ಚಟುವಟಿಕೆ ಸಂಯೋಜಕ ಡಾ. ಕೆ.ವಿ. ಮಠ, ಐಕ್ಯೂಎಸಿ ಸಂಯೋಜಕ ಡಾ. ಎ.ಯು. ರಾಠೋಡ್, ಮಹಿಳಾ ಸಬಲೀಕರಣದ ಸಂಯೋಜಕ ಡಾ. ಎಲ್‌.ಎಸ್‌.ಚವಡಿ,  ವಿದ್ಯಾರ್ಥಿಗಳ ಕಲ್ಯಾಣಾಧಿಕಾರಿ  ಸುರೇಶ. ಆರ್ , ವಿದ್ಯಾರ್ಥಿ ಪ್ರತಿನಿಧಿಗಳಾದ ವಾರೇಶ್‌. ಯಂಕಂಚಿ,  ಪಾರ್ವತಿ. ಹಿರೇಮಠ ಹಾಗೂ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.  

ಭುವನೇಶ್ವರಿ ದೇವಿ ಭಾವಚಿತ್ರ ಮೆರವಣಿಗೆ: ಏ.3 ಮತ್ತು 4ರಂದು ನಡೆದ ವಸಂತೋತ್ಸವ ಕಾರ್ಯಕ್ರಮಕ್ಕೆ ಮದುವನಗಿತ್ತಿಯಂತೆ ಶೃಂಗಾರಗೊಂಡ ಬಸವೇಶ್ವರ ಕಲಾ ಮಹಾವಿದ್ಯಾಲಯದ ಮುಂದೆ ಬ್ಯಾನರ್ ಬಿಡುವುದರ ಮೂಲಕ ಚಾಲನೆ ನೀಡಲಾಯಿತು. ಬಳಿಕ ಭುವನೇಶ್ವರಿ ದೇವಿ ಮತ್ತು ಶ್ರೀ ಬೀಳೂರು ಗುರುಬಸವ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಕಲಾ ಮಹಾವಿದ್ಯಾಲಯದಿಂದ ಪ್ರಾರಂಭವಾದ ಮೆರವಣಿಗೆ ವಿಜ್ಞಾನ, ಆಯುರ್ವೇದ, ಕಾಮರ್ಸ್‌ ಮಹಾವಿದ್ಯಾಲಯದ ಮಾರ್ಗವಾಗಿ ಸಾಗಿ ಕಲಾ ಮಹಾವಿದ್ಯಾಲಯಕ್ಕೆ ಪೂರ್ಣಗೊಂಡಿತು. ದೇಶಿ ತೊಡುಗೆಯಲ್ಲಿ ಬಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಪ್ರಾಧ್ಯಾಪಕರು ಮೆರವಣಿಗೆಯಲ್ಲಿ ದೇಶಭಕ್ತಿ ಗೀತೆ, ಸಿನೇಮಾ ಮತ್ತು ಜಾನಪದ ಗೀತೆಗಳಿಗೆ  ಹೆಜ್ಜೆ ಹಾಕಿ ಸಂಭ್ರಮಿಸಿದರು. 

ಮೆರಗು ತಂದ ಯಾಂರ​‍್್ ವಾಕ್ ಮತ್ತು ನೃತ್ಯ: ವಿದ್ಯಾರ್ಥಿ ವಿದ್ಯಾರ್ಥಿನಿಯರ ಜೋಡಿ ಯಾಂರ​‍್್ ವಾಕ್ ಕಾರ್ಯಕ್ರಮಕ್ಕೆ ಮೆರಗು ತಂದಿತು ಒಟ್ಟು 8 ಜೋಡಿಗಳು ವೇದಿಕೆಯ ಮೇಲೆ ಹೆಜ್ಜೆ ಹಾಕಿ ಉತ್ತರ ಕರ್ನಾಟಕ, ಕೊಡುಗು ಉಡುಗೆ ಸೇರಿದಂತೆ ಕೇರಳ, ಗುಜರಾತ, ಜಮ್ಮು ಮತ್ತು ಕಾಶ್ಮೀರ,  ರಾಜ್ಯಗಳ ಸಂಸ್ಕೃತಿ, ಬಂಜಾರಾ ಸಂಸ್ಕೃತಿ ತೊಡುಗೆಗಳು ಕಣ್ಣಿಗೆ ಕಟ್ಟುವಂತೆ ಮಾಡಿದವು. ಬಳಿಕ ಜರುಗಿದ ವಿದ್ಯಾರ್ಥಿಗಳ ನೃತ್ಯ ನೋಡುಗರ ಹುಬ್ಬೇರುವಂತೆ ಮಾಡಿತು. ಜಾನಪದ, ಕೋಲಾಟ, ಏಕಾಭಿನಯ ಪಾತ್ರ, ನಾಟಕಗಳು ಸೇರಿದಂತೆ ಹಲವಾರು ನೃತ್ಯಗಳಿಗೆ ಹೆಜ್ಜೆ ಹಾಕಿ ಮೆರಗು ತಂದರು.