ಬೆಂಗಳೂರು, ಏ.23, ಲಾಕ್‍ಡೌನ್ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಅಕ್ರಮ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಎರಡು ತಲೆಯ ಹಾವನ್ನು ಆಹಾರ ಸಾಗಿಸುವ ಬ್ಯಾಗ್ ನಲ್ಲಿಟ್ಟು ಮಾರಾಟ ಮಾಡಲು ಯತ್ನಿಸುತ್ತಿದ್ದ ಡಂಜೋ ಸಂಸ್ಥೆಯ ಡೆಲಿವರಿ ಬಾಯ್ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹೊಸ ಗುರಪ್ಪನಪಾಳ್ಯದ ಮಹಮ್ಮದ್ ರಿಜ್ವಾನ್ (26) ಹಾಗೂ ಅಜರ್ ಖಾನ್ (27) ಬಂಧಿತ ಆರೋಪಿಗಳಾಗಿದ್ದು ಬಂಧಿತ ರಿಂದ ಒಂದು ಎರಡು ತಲೆ ಹಾವು, ದ್ವಿಚಕ್ರ ವಾಹನ, ಮೂರು ಮೊಬೈಲ್ ಗಳನ್ನು ವಶಪಡಿಸಿ ಕೊಳ್ಳಲಾಗಿದೆ.
ಆರೋಪಿಗಳು ಸಾರಕ್ಕಿ ಸರ್ಕಲ್‍ನ ಬಸಪ್ಪ ಗಾರ್ಡನ್‍ನಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ಎರಡು ತಲೆ ಹಾವನ್ನು ಇಟ್ಟುಕೊಂಡು ನಿಂತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿಗಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತರನ್ನು ವಿಚಾರಣೆಗೊಳಪಡಿಸಿದಾಗ ಮಹಮ್ಮದ್ ರಿಜ್ವಾನ್ ಡಂಜೋ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಲಾಕ್‍ಡೌನ್ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಅಕ್ರಮ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಎರಡು ತಲೆ ಹಾವು ಮಾರಾಟಕ್ಕೆ ಇಳಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 50 ರಿಂದ 60 ಲಕ್ಷ ಬೆಲೆ ಇರುವ ಎರಡು ತಲೆ ಹಾವುಗಳನ್ನು ಡಂಜೋ ಕಂಪೆನಿಯ ಬ್ಯಾಗ್‍ನಲ್ಲಿಟ್ಟುಕೊಂಡು ಮಾರಾಟ ಮಾಡಲು ಆರೋಪಿಗಳು ಯತ್ನಿಸುತ್ತಿದ್ದರು.ಬಂಧಿತರ ವಿರುದ್ಧ ಕಗ್ಗಲಿಪುರದ ವಲಯ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.