ರಾಜ್ಯದಲ್ಲಿ 28 ಹೊಸ ಕೊರೋನಾ ಪ್ರಕರಣಗಳು, ಸೋಂಕಿತರ ಸಂಖ್ಯೆ 642ಕ್ಕೇರಿಕೆ

ಬೆಂಗಳೂರು, ಮೇ 4,ದಾವಣಗೆರೆಯ 21 ಕೊರೋನಾ ಸೋಂಕಿತ ಪ್ರಕರಣಗಳು ಸೇರಿ ರಾಜ್ಯದಲ್ಲಿ ಭಾನುವಾರ ಸಂಜೆಯಿಂದ ಸೋಮವಾರ ಮಧ್ಯಾಹ್ನದವರೆಗೆ 28 ಪ್ರಕರಣಗಳು ಪತ್ತೆಯಾಗಿವೆ. ದಾವಣಗೆರೆಯ 533ನೇ ರೋಗಿಯ ಸಂಪರ್ಕ ಪಡೆದ 21 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಜೊತೆಗೆ, ಚಿಕ್ಕಬಳ್ಳಾಪುರದ 30 ವರ್ಷದ ವ್ಯಕ್ತಿ, ಮಂಡ್ಯ ಜಿಲ್ಲೆಯ 20 ಹಾಗೂ 19 ವರ್ಷದ ಯುವತಿಯರಲ್ಲಿ ಸೋಂಕು ದೃಢಪಟ್ಟಿದೆ. ಹಾವೇರಿಯ ಸವಣೂರಿನಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿದ ಇತಿಹಾಸವಿರುವ 32 ವರ್ದ ವ್ಯಕ್ತಿ, ವಿಜಯಪುರದ 288ನೇ ರೋಗಿಯ ದ್ವಿತೀಯ ಸಂಪರ್ಕದ 62 ವರ್ಷದ ವೃದ್ಧೆ, ಕಲಬುರಗಿಯ 36 ವರ್ಷದ ಮಹಿಳೆ ಮತ್ತು ಚಿಂಚೋಳಿಯ 37 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.ಈ ನಡುವೆ, ಕಲಬುರಗಿ ನಿವಾಸಿ 56 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ಕೆಮ್ಮು ಹಾಗೂ ಜ್ವರದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 642ಕ್ಕೇರಿಕೆಯಾಗಿದ್ದು, 27 ಜನರು ಮೃತಪಟ್ಟಿದ್ದಾರೆ. 304 ಜನರು ಗುಣಮುಖರಾಗಿದ್ದಾರೆ.