ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ;
ಕಾಗವಾಡ 30: ಜುಗೂಳದಂತಹ ಗ್ರಾಮೀಣ ಭಾಗದ ಮಹಿಳೆಯರಿಗೆ ಸುಮಾರ 4 ಕೋಟಿ ಸಾಲ ನೀಡಿ, ಸ್ವಾವಲಂಬಿ ಜೀವನ ನಡೆಸಲು ಸಹಕಾರ ನೀಡುವ ಜೊತೆಗೆ ಸಾಲ ವಸೂಲಾತಿಯನ್ನು ವೇಳೆಗೆ ಮಾಡುತ್ತಿರುವ ಧರ್ಮಸ್ಥಳ ಯೋಜನೆಯ ಕಾರ್ಯ ನಿಜಕ್ಕೂ ಅನುಕರಣೀಯವಾಗಿದ್ದು, ಅವರಿಂದ ಪ್ರೇರಣೆಗೊಂಡ ನಾವು ನಮ್ಮ ಸಂಘದಿಂದಲೂ ಮಹಿಳೆಯರಿಗೆ ಸಾಲ ನೀಡುವ ಯೋಜನೆಯನ್ನು ಪ್ರಾರಂಭಿಸಿದ್ದೇವೆಂದು ಜುಗೂಳ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಅಣ್ಣಾಸಾಬ ಪಾಟೀಲ ತಿಳಿಸಿದ್ದಾರೆ.
ಅವರು, ಶನಿವಾರ ದಿ. 30 ರಂದು ತಾಲೂಕಿನ ಜುಗೂಳ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಕಾಗವಾಡ ಕಾರ್ಯಕ್ಷೇತ್ರದ ಶಿರಗುಪ್ಪಿ ವಲಯದ ವತಿಯಿಂದ ಹಮ್ಮಿಕೊಂಡ ಸಾಮುಹಿಕ ವರಮಹಾಲಕ್ಷ್ಮೀ ಪೂಜೆ, ಮಹಿಳೆಯರ ಉಡಿತುಂಬುವ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಧರ್ಮಸ್ಥಳ ಯೋಜನೆಯವರು ಜುಗೂಳ ಗ್ರಾಮದಲ್ಲಿ 98 ಮಹಿಳಾ ಸ್ವ-ಸಹಾಯ ಸಂಘಗಳಿಗೆ 4 ಕೋಟಿ ಸಾಲ ನೀಡಿ, ಸರಿಯಾಗಿ ವಸೂಲಾತಿ ಮಾಡಿಕೊಳ್ಳುತ್ತಿರುವುದು ಇತರೇ ಸಹಕಾರಿ ಸಂಘಗಳಿಗೆ ಮತ್ತು ಬ್ಯಾಂಕುಗಳಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮವನ್ನು ವರಮಹಾಲಕ್ಷ್ಮೀ ಪೂಜೆಯೊಂದಿಗೆ ಗಣ್ಯರು ದೀಪ ಬೆಳಗಿಸಿ, ಚಾಲನೆ ನೀಡಿದರು.
ಕಾಗವಾಡ ತಾಲೂಕಾ ಯೋಜನಾಧಿಕಾರಿ ಸಂಜೀವ ಮರಾಠಿ ಮಾತನಾಡಿ, ಸಂಘದ ಸಾಧನೆಯನ್ನು ತಿಳಿಸುತ್ತ, ತಾಲೂಕಿನ ಶಿರಗುಪ್ಪಿ ವಯಲದ 320 ಸಂಘಗಳಿಗೆ 20 ಕೋಟಿ ಸಾಲ ವಿತರಣೆ ಒಟ್ಟುಗೂಡಿಸಿ, ತಾಲೂಕಾ ಕ್ಷೇತ್ರದಿಂದ ಒಟ್ಟು ಸುಮಾರ 25000 ಸಾವಿರ ಮಹಿಳಾ ಸಂಘಗಳಿಗೆ 100 ಕೋಟಿ ಸಾಲ ವಿತರಿಸುವ ಮೂಲಕ ಮಹಿಳೆಯರಿಗೆ ಸಾಮಾಜಿಕ, ಆರ್ಥಿಕ, ಶಿಸ್ತು, ಗುಣಮಟ್ಟದ ನಿರ್ವಹಣೆ, ಹಾಗೂ ಸಾಮಾಜಿಕ ಕಳಕಳಿ ಜೊತೆಗೆ ಸ್ವಾವಲಂಬಿ ಜೀವನ ನಡೆಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಈ ಸಮಯದಲ್ಲಿ ಗ್ರಾ.ಪಂ. ಅಧ್ಯಕ್ಷ ಕಾಕಾಸಾಬ ಪಾಟೀಲ, ಉಪಾಧ್ಯಕ್ಷೆ ನೀತಾ ಕಾಂಬಳೆ, ಸದಸ್ಯ ಜಹಾಂಗೀರ ಕಳಾವಂತ, ಮುಖಂಡರಾದ ತಾತ್ಯಾಸಾಬ ಪಾಟೀಲ, ಸಿದಗೌಡಾ ಪಾಟೀಲ ಸೇರಿದಂತೆ ಶಿರಗುಪ್ಪಿ ವಲಯದ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಶಿರಗುಪ್ಪಿ, ಕಾಗವಾಡ, ಶೇಡಬಾಳ, ವಲಯ ಮೇಲ್ವಿಚಾರಕಿಯರು, ತಾಲೂಕಾ ವಿಚಕ್ಷಣಾಧಿಕಾರಿಗಳು, ಸೇವಾ ಪ್ರತಿನಿಧಿಗಳು, ಸಿಎಸ್‌ಸಿ ಸೇವಾದಾರರು, ಮಹಿಳೆಯರು ಉಪಸ್ಥಿತರಿದ್ದರು. ಚನ್ನಮ್ಮಾ ಸುತಗಟ್ಟಿ ಸ್ವಾಗತಿಸಿದರು. ನಾರಾಯಣ ಮಳಕ ನಿರೂಪಿಸಿ, ವಂದಿಸಿದರು.