ವಿದ್ಯಾಭ್ಯಾಸದೊಟ್ಟಿಗೆ ವಿದ್ಯಾರ್ಥಿಗಳು ಸವಾಂರ್ಗೀಣ ಬೆಳವಣಿಗೆ ಹೊಂದಬೇಕು :ಮಹೇಶ ಪೋತದಾರ

ವಿದ್ಯಾಭ್ಯಾಸದೊಟ್ಟಿಗೆ ವಿದ್ಯಾರ್ಥಿಗಳು ಸವಾಂರ್ಗೀಣ ಬೆಳವಣಿಗೆ ಹೊಂದಬೇಕು :ಮಹೇಶ ಪೋತದಾರ Students should develop independently along with their education: Mahesh Potadara

        ವಿಜಯಪುರ,ಮಾ.9: ಕಲೆ ಎನ್ನುವುದು ದೊಡ್ಡ ಶಕ್ತಿ. ವಸತಿ ನಿಲಯದ ಮುದ್ದು ವಿದ್ಯಾರ್ಥಿಗಳು ಕೇವಲ ವಿದ್ಯಾಭ್ಯಾಸದಲ್ಲಿ ಮಾತ್ರವಲ್ಲ ಕಲೆ, ಸಂಸ್ಕೃತಿ, ಕ್ರೀಡೆ ಸೇರಿದಂತೆ  ಸವಾಂರ್ಗೀಣವಾಗಿ ಬೆಳವಣಿಗೆಯಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಹೇಳಿದರು.  

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಡಾ. ಬಿ.ಆರ್‌. ಅಂಬೇಡ್ಕರ್ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಹಮ್ಮಿಕೊಂಡಿರುವ ಕಲಾ ತರಬೇತಿ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.ವಸತಿ ನಿಲಯದ ವಿದ್ಯಾರ್ಥಿಗಳಿಗೆ ನೃತ್ಯ ಕಲೆಯನ್ನು ಕಲಿಯಲು ಅವಕಾಶ ಮಾಡಿಕೊಟ್ಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಅವರಿಗೆ ಧನ್ಯದಗಳನ್ನು ತಿಳಿಸಿದರು.ಸಮಾಜ ಕಲ್ಯಾಣ ಇಲಾಖೆಯ ಬಿ.ಜೆ. ಇಂಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 6 ತಿಂಗಳವರೆಗೆ ಮಕ್ಕಳಿಗೆ ನೃತ್ಯ ತರಬೇತಿಗೆ ಅವಕಾಶ ನೀಡಿದಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು. 

ಕರ್ನಾಟಕ ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿ ಸದಸ್ಯ ಆರ್‌.ಬಿ.ನಾಯ್ಕ ಮಾತನಾಡಿ, ನೃತ್ಯ ಕಲೆಗೆ ಜಗತ್ತಿನ ಎಲ್ಲ ಕಡೆಗೆ ಸ್ಥಾನಮಾನವಿದೆ ಎಂದು ಹೇಳಿದರು. ತಾವು ಸಹ ಲಂಬಾಣಿ ನೃತ್ಯದ ತರಬೇತಿ ನೀಡಿ ಬೆಂಗಳೂರಿನ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಲಂಬಾಣಿ ನೃತ್ಯದ ತರಬೇತಿ ನೀಡಿದ್ದು ಆ ತಂಡವು ಅಮೇರಿಕದಲ್ಲಿ ನಡೆದ 'ಅಕ್ಕಬಳಗ' ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಆಯ್ಕೆಯಾಗಿರುವ ವಿಷಯವನ್ನು ತಿಳಿಸಿದರು.  ತಮ್ಮ ಕಲಾ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರವು ತಮಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿರುವುದನ್ನು ಸ್ಮರಿಸಿದರು.  

ಕರ್ನಾಟಕ ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿ ಸದಸ್ಯ ಸುರೇಖಾ ಲಮಾಣಿ ಮಾತನಾಡಿ,  ದೇವನೂರು ಮಹಾದೇವಪ್ಪ ಅವರು ಹೇಳಿದಂತೆ ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಯಾವತ್ತಿಗೂ ಫಲ ಕೊಡುತ್ತದೆ' ಎನ್ನುವಂತೆ ಅಕ್ಷರದ ಜೊತೆ ಜೊತೆಗೆ ಮಕ್ಕಳಿಗೆ ನೃತ್ಯದ ತರಬೇತಿಯನ್ನು ನೀಡಿದ್ದು, ಈ ತರಬೇತಿಯನ್ನು ಜೀವನದಲ್ಲಿ ಮುಂದುವರೆಸಿಕೊಂಡು ಉನ್ನತ ಮಟ್ಟದಲ್ಲಿ ಬೆಳೆಯುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಸ್ವಾಗತಿಸಿದರು.ಮೋಹನ ಕಟ್ಟಿಮನಿ ನಿರೂಪಿಸಿದರು. 

ಈ ಕಾರ್ಯಕ್ರಮದಲ್ಲಿ ಶೀರೀನ್ ಕೌಸರ, ಮೀನಾಕ್ಷಿ ಮಠಪತಿ, ವಸತಿ ನಿಲಯದ ಮೇಲ್ವಿಚಾರಕರು, ವಿಜಯಪುರ, ನೃತ್ಯ ತರಬೇತಿದಾರರಾದ ರಂಗನಾಥ ಬತ್ತಾಸಿ ಹಾಗೂ ಕು.ರೋಹಿಣಿ ತಳವಾರ, ಕು.ಪೂರ್ವಿ ತಳವಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿಗಳು ಹಾಗೂ ವಸತಿ ನಿಲಯದ ಸಿಬ್ಬಂದಿಗಳು ಉಪಸ್ಥಿತ್ತರಿದ್ದರು.