ಅನೇಕ ಶರಣರು, ಕೀರ್ತನಕಾರರು, ದಾರ್ಶನಿಕರು ಮತ್ತು ಕವಿಗಳು ಉತ್ತಮ ಸಾಮಾಜಿಕ ಸಂದೇಶಗಳನ್ನು ನೀಡಿ ವ್ಯಕ್ತಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿದ್ದಾರೆ. ನಡೆ-ನುಡಿ ಒಂದಾದ ತತ್ವಗಳನ್ನು ಅಳವಡಿಸಿಕೊಂಡು ಅಜರಾಮರರಾಗಿದ್ದಾರೆ. ಅವರಲ್ಲಿ ಮುಖ್ಯವಾಗಿ ಬಸವಣ್ಣನವರು ವಚನಗಳ ಮೂಲಕ ಸಾಮಾಜಿಕ ಕ್ರಾಂತಿಯಿಂದ ಜಾಗೃತಿಯನ್ನುಂಟುಮಾಡಿ ಅಸ್ಪೃಶ್ಯತೆ ನಿವಾರಣೆ, ಸ್ತ್ರೀ ಸಮಾನತೆ, ಅಹಿಂಸೆ, ಸ್ವಾತಂತ್ರ್ಯ, ಶಾಂತಿ, ಪ್ರಜಾಪ್ರಭುತ್ವ ಮುಂತಾದ ಪ್ರಗತಿ ಪರ ತತ್ವಗಳನ್ನು ಜಾರಿಗೆ ತರಲು ಪ್ರಯತ್ನಿಸಿದ್ದಾರೆ.
ಮಾನವೀಯ ಮೌಲ್ಯ : ಮನುಷ್ಯನಲ್ಲಿ ಮನುಷ್ಯತ್ವವವನ್ನು ಬೆಳೆಸುವ ಕಳಕಳಿ, ಸಾರ್ವಕಾಲಿಕ ಮಾನವೀಯ ಮೌಲ್ಯ, ಪರಿಶುದ್ದತೆಯ ವ್ಯಕ್ತಿ ಬದುಕು, ಆರೋಗ್ಯ ಪೂರ್ಣ ಸಮಾಜ ನಿರ್ಮಾಣ, ಹೃದಯ ವೈಶಲ್ಯ, ಭಾವುಕತೆಗಳಿಂದ ಕೂಡಿವೆ. ಡಾಂಬಿಕ ಭಕ್ತಿ, ಅಜ್ಞಾನ, ಕಂದಾಚಾರ, ಜಾತಿಯ ಸಂಕಗಳನ್ನು ಹೊಗಲಾಡಿಸುವುದನ್ನು ಕುರಿತು ಚಿಂತಿಸಿವೆ.
ಅಂತರ್ಜಾತಿ ವಿವಾಹ : ಹುಟ್ಟಿನಿಂದ ಯಾರೂ ಮೇಲಲ್ಲ ಕೀಳಲ್ಲ ಎಂದು ಸಾರಿದ ಬಸವಣ್ಣ, ಜನ್ಮತ ಬ್ರಾಹ್ಮಣರಾಗಿ, ಸಂಸ್ಕಾರದಿಂದ ಶರಣರಾದ ಮಧುವರಸರ ಮಗಳನ್ನು ಹುಟ್ಟಿನಿಂದ ಸಮಗಾರರಾಗಿ ಸಂಸ್ಕಾರದಿಂದ ಶರಣರಾದ ಹರಳಯ್ಯನ ಮಗನಿಗೆ ಕೊಟ್ಟು ಅಂತರ್ಜಾತಿ ವಿವಾಹ ಮಾಡಲು ಪ್ರೇರಣೆ ನೀಡಿ, ಸಮಾಜದಲ್ಲಿ ಜಾತಿಯ ವಿಷ ಬೀಜ ಹೋಗಲಾಡಿಸಲು ಪ್ರಯತ್ನಿಸಿದರು.
ಸ್ತ್ರೀ ಸಮಾನತೆ : ಬಸವಣ್ಣನವರು ಎಂಟನೇ ವಯಸ್ಸಿನಲ್ಲಿದ್ದಾಗ ಅವರಿಗೆ ಜನಿವಾರ ಕಟ್ಟಲು ಹೋದಾಗ ತಮಗಿಂತ ದೊಡ್ಡವಳಾದ ಸಹೋದರಿ ನಾಗಮ್ಮನಿಗೆ ಕಟ್ಟಲು ಹೇಳುತ್ತಾರೆ. ಆಗ ಹಿರಿಯರು ಇದು ಪುರುಷರಿಗೆ ಮಾತ್ರ ಕಟ್ಟಬೇಕು ಮಹಿಳೆಯರಿಗೆ ಕಟ್ಟುವಂತಿಲ್ಲ ಎಂದು ಹೇಳಿದಾಗ ಪುರುಷ ಮತ್ತು ಮಹಿಳೆಯ ಮಧ್ಯ ಸಮಾನತೆ ಇರಬೇಕು ಭೇದ, ಭಾವ ಇರಬಾರದು ಎಂದು ಹೇಳಿ ಮನೆ ಬಿಟ್ಟು ಹೊರಟು ಹೋಗುತ್ತಾರೆ. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸ ಮತ್ತು ತನ್ನ ಜೀವನ ರೂಪಿಸಿಕೊಳ್ಳುವ ಹಕ್ಕಿದೆ ಎಂದು ಸಮಾನತೆಯ ಪ್ರತಿಪಾದಕರಾದರು. ವಿವಿಧ ಕಾಯಕಗಳ ಶೂದ್ರರಿಗೆ, ಮಹಿಳೆಯರಿಗೆ ಮೊದಲ ಬಾರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದರು.
ವಿಶ್ವದ ಪ್ರಥಮ ಸಂಸತ್ತು : ಅನುಭವ ಮಂಟಪದ ಮೂಲಕ ವಿಶ್ವದ ಪ್ರಥಮ ಸಂಸತ್ತು ಸ್ಥಾಪಿಸಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನೀಡಿ, ಶರಣ ಸಮಾಜದಲ್ಲಿ ನಡೆಯುತ್ತಿದ್ದ ವಾದ ಸಂವಾದಗಳಿಂದಾಗಿ ವಿವಿಧ ಕಾಯಕ ಮೂಲಗಳಿಂದ ಬಂದಂತ ಶರಣರು ವರ್ಣ, ವರ್ಗ, ಲಿಂಗ ಭೇದವಿಲ್ಲದೆ ಮುಕ್ತ ಚರ್ಚೆಯ ವೇದಿಕೆಯಾಗಿದ್ದ ಅನುಭವ ಮಂಟಪದಲ್ಲಿ ಸರ್ವರು ಸಮಾನರಾಗಿದ್ದರು.
ಮೌಡ್ಯತೆ ನಿವಾರಣೆ : ಪಂಚಾಂಗ ಜಾತಕಗಳ ಹೆಸರಿನಲ್ಲಿ ಜನರನ್ನು ಬೆದರಿಸಿ ಸುಲಿಯುವ ಪ್ರವೃತ್ತಿಯನ್ನು ಖಂಡಿಸಿದ್ದಾರೆ. ಬಸವಣ್ಣನವರಿಗೆ ಅರ್ಥಹೀನವಾದ ನಂಬಿಕೆಗಳೆಂದರೆ ಆಗದು. ಕಲ್ಲಿನ ನಾಗರಕ್ಕೆ ಹಾಲು ಸುರಿಯುವುದು, ಲಿಂಗದ ಮುಂದೆ ನೈವೇದವಿಡುವುದು, ಆಡಂಬರದ ದೇವಾಲಯಗಳ ನಿರ್ಮಾಣ, ಕಟ್ಟು ಕಥೆಗಳ ಮೂಲಕ ಬಹುದೇವೋಪಾಸನೆಗೆ ಪ್ರಚೋದನೆ ಇದಕ್ಕೆ ಹೊರತಾದ ಸಾಮಾನ್ಯರ ಜೀವನವಿಧಾನವೇ ಆಗಬಹುದಾದ ‘ವೀರಶೈವ ಧರ್ಮವನ್ನು ಅವರು ಹುಟ್ಟು ಹಾಕಿದರು. 16 ರ ಹುಡುಗ ಆಗಿನಕಾಲದ ಕಟ್ಟು ಪಾಡುಗಳನ್ನು ದಿಕ್ಕರಿಸಿ, ಧಾರ್ಮಿಕಾಚರಣೆಗಳ ತನ್ನ ಜನಿವಾರ ಕಿತ್ತೆಸೆದು ನಿಂತ ಕೆಚ್ಚೆದೆ ಅವರದು.
ಪ್ರಪಂಚದಲ್ಲಿ ಮೊದಲ ಬಾರಿಗೆ ದುಡಿವ ವರ್ಗಕ್ಕೆ ಫನತೆ ತಂದು ಕೊಟ್ಟ ಬಸವಣ್ಣನವರು ಲಿಂಗ ತಾರತಮ್ಯ ಹೋಗಲಾಡಿಸಿ ಸಮಾನತೆ ತಂದುಕೊಟ್ಟ ವಿಚಾರವಂತ, ಸಮಾಜವಾದಿ, ಸಮತಾವಾದಿ, ಆರ್ಥಿಕ ತಜ್ಞ, ಅಭಿವೃದ್ದಿ ಚಿಂತಕ ಕಾಯಕ ಯೋಗಿ. ಕ್ರಿಯಾಶೀಲ ನಮ್ಮ ಜೀವನಕ್ಕೆ ಮಾರ್ಗದರ್ಶಿ ಮಹಾಗುರು. “ದಯವೇ ಧರ್ಮದ ಮೂಲವಯ್ಯ” “ಅರಿತರೆ ಶರಣ ಮರೆತಡೆ ಮಾನವ” ಎನ್ನುವ ಸಂದೇಶಗಳನ್ನು ಸಾರುವ ಮೂಲಕ ಮಾನವತಾವಾದಕ್ಕೆ ಮಾದರಿಯಾಗಿದ್ದಾರೆ. ಮೇಲು ಕೀಳು ಎಂಬ ಭೇದ ತೊಡೆದು ಹಾಕಲು ಶ್ರಮಿಸಿದ ಮಹಾ ಪುರುಷ ಬಸವಣ್ಣ. ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಸಿಕೊಂಡು ಅಂತರಂಗ-ಬಹಿರಂಗ ಶುದ್ಧಿ ಸಾಧಿಸಬೇಕೆನ್ನುವ ಬಸವಣ್ಣನವರ ವಚನಗಳಲ್ಲಿ ವಿಶ್ವಮಾನವ ಸಂದೇಶವಿದೆ.
ಹೆಚ್.ಮಲ್ಲಿಕಾರ್ಜುನ,
ಕನ್ನಡ ಉಪನ್ಯಾಸಕರು,
ಹರಪನಹಳ್ಳಿ ದೂ. 9448188281