ನೈಜ ಪ್ರೇಮಕಥೆಯಲ್ಲಿ ಹಿಂದೂ-ಮುಸ್ಲಿಂ ಧರ್ಮ ಸಂಘರ್ಷ ‘ತಾಜ್' ಚಿತ್ರದ ಟ್ರೇಲರ್ ಬಿಡುಗಡೆ

ಹೊಸ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸಿರುವ ಸಿನಿಮಾ ‘ತಾಜ್'. ಕೆಲವು ದಿನಗಳ ಹಿಂದೆಯಷ್ಟೇ ಟೀಸರ್‌ನಿಂದ ಸುದ್ದಿಯಾಗಿದ್ದ 'ತಾಜ್' ಈಗ ಟ್ರೇಲರ್ ಮುಖೇನ ಗಮನ ಸೆಳೆಯುತ್ತಿದೆ. ಹೌದು ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಜಾಲತಾಣದಲ್ಲಿ ಒಳ್ಳೆಯ ರೆಸ್ಪಾನ್ಸ್‌ ಪಡೆಯುತ್ತಿದೆ. ಚಿತ್ರವನ್ನು ಯುವ ಪ್ರತಿಭೆ ಬಿ. ರಾಜರತ್ನ ನಿರ್ದೇಶನ ಮಾಡಿದ್ದಾರೆ. ಕಳೆದ 15 ವರ್ಷಗಳಿಂದ ನಿರ್ದೇಶನ, ಬರವಣಿಗೆ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ರಾಜರತ್ನ ಈಗ 'ತಾಜ್' ಚಿತ್ರದಿಂದ ನಿರ್ದೇಶಕರಾಗಿದ್ದಾರೆ. ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅವರು ‘ಮಾದ್ಯಮಗಳ ಸಹಕಾರದಿಂದ ನಮ್ಮ ಚಿತ್ರದ ಟೀಸರ್‌ಗೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ತುಂಬಾ ರಿಸ್ಕ್‌ ತೆಗೆದುಕೊಂಡು ಈ ಸಿನಿಮಾ ಮಾಡಿದ್ದು, ಎಲ್ಲರು ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಸಾಂಗ್, ಆರು ಫೈಟ್ ಇವೆ. ರಿಯಾಲಿಸ್ಟಿಕ್ ಆಗಿ ಸಿನಿಮಾ ಬಂದಿದೆ. ತುಮಕೂರು, ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ನನ್ನ ಸ್ನೇಹಿತನ ಜೀವನದಲ್ಲಿ ನಡೆದ ಘಟನೆಯನ್ನು ಇಟ್ಟುಕೊಂಡು ಪ್ಯೂರ್ ಲವ್ ಸ್ಟೋರಿ ಸಿನಿಮಾ ಮಾಡಿದ್ದು, ಫ್ಯಾಮಿಲಿ ಸಮೇತ ನೋಡಬಹುದು. ಸದ್ಯದಲ್ಲೇ ಸಿನಿಮಾ ರೀಲೀಸ್ ಮಾಡುವ ಪ್ಲ್ಯಾನ್ ಇದೆ' ಎಂದು ಹೇಳಿದರು.  

ಮೂಲತಃ ಬಳ್ಳಾರಿಯವರಾದ ಶಣ್ಮುಖ ಜೈ ಈ ಚಿತ್ರದ ನಾಯಕ ಕಮ್ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ‘ನಾನು ಹತ್ತಾರು ಕಥೆ ಕೇಳಿ ಈ ಕಥೆ ಸಿನಿಮಾ ಮಾಡಲು ಒಪ್ಪಿಕೊಂಡೆ. ಹಿಂದೂ ಮುಸ್ಲಿಂ ಪ್ರೇಮ ಕಥೆ ಜೊತೆಗೆ ಸಂಘರ್ಷದ ಕಥೆ ಇದರಲ್ಲಿ ಇದೆ. ಬಹಳ ಚನ್ನಾಗಿ ಸಿನಿಮಾ ಮೂಡಿ ಬಂದಿದೆ. ತಂಡದ ಸಪೋರ್ಟ್‌ ತುಂಬಾ ಇತ್ತು' ಎನ್ನುವರು ಶಣ್ಮುಖ. ಇದೇ ಸಂದರ್ಭದಲ್ಲಿ ವಿಲನ್ ಪಾತ್ರ ಮಾಡಿರುವ ವರ್ಧನ್ ಮಾತನಾಡಿ, ‘ನಾನು ಇದರಲ್ಲಿ ಮುಸ್ಲಿಂ ಯುವಕನ ಪಾತ್ರ ಮಾಡಿದ್ದೇನೆ. ಇಲ್ಲಿ ಜಾತಿ, ಧರ್ಮ ಮಿರಿದ್ದು ಪ್ರೀತಿ ಎಂಬುದನ್ನು ಹೇಳಲಾಗಿದೆ' ಎನ್ನುವರು. ಶೇಖಡ 80ಅ ರಷ್ಟು ನೈಜ ಕಥೆ ಒಳಗೊಂಡ ಈ ಚಿತ್ರವನ್ನು ಶ್ರೀಪಾವನಿ ಲಕ್ಷ್ಮೀ ಕಂಬೈನ್ಸ್‌ ಬ್ಯಾನರ್‌ನಲ್ಲಿ ಶ್ರೀಮತಿ ಲಕ್ಷ್ಮೀ ಶಣ್ಮುಖ ನಿರ್ಮಾಣ ಮಾಡಿದ್ದಾರೆ. ದೀಪಕ್ ಕುಮಾರ್ ಛಾಯಾಗ್ರಹಣವಿದ್ದು, ಚಿತ್ರದ ನಾಲ್ಕು ಹಾಡುಗಳಿಗೆ ಜೆಸ್ಸಿ ಗಿಫ್ಟ್‌ ಹಾಗೂ ಹಿತನ್ ಹಾಸನ್ ಬ್ಯಾಗರೌಂಡ ಸಂಗೀತವಿದೆ. ನ್ಯಾಚುರಲ್ ಆಗಿ ಶೂಟ್ ಮಾಡಲಾಗಿರು ಈ ಚಿತ್ರದ ನಾಯಕಿಯಾಗಿ ಅಪ್ಸರಾ ಅಭಿನಯ ಮಾಡಿದ್ದಾರೆ. ನಾಯಕಿ ತಂದೆಯಾಗಿ ಬಾಲ ರಾಜವಾಡಿ ನಟಿಸಿದ್ದು, ಉಳಿದ ತಾರಾಗಣದಲ್ಲಿ ಕಡ್ಡಿ ವಿಶ್ವ, ದಕ್ಷಿಣ ಆಫ್ರಿಕಾದ ನಟ ರೋಬೋ, ಶೋಭರಾಜ್, ಪದ್ಮಾವಾಸಂತಿ, ಪಟ್ರೆ ನಾಗರಾಜ್, ಸೂರಜ್ ಮುಂತಾದವರಿದ್ದಾರೆ. ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ್ದ ನಿರ್ಮಾಪಕ ರವಿ ತಂಡಕ್ಕೆ ಶುಭ ಹಾರೈಸಿದರು. ಈಗಾಗಲೇ ಸೆನ್ಸಾರ್ ಪಾಸ್ ಆಗಿರುವ ‘ತಾಜ್‌’ ಜುಲೈನಲ್ಲಿ ರಾಜ್ಯಾದ್ಯಂತ ತೆರೆಗೆ ಬರಲಿದೆ.