ದರ್ಶನ್ ಹಾಗೂ ಗ್ಯಾಂಗ್ ಮೇಲಿನ ಆರೋಪ ಸಾಬೀತಾದರೆ, ಕಠಿಣ ಶಿಕ್ಷೆ ಸಿಗುವುದಂತೂ ಗ್ಯಾರಂಟಿ

ಯುವ ನ್ಯಾಯವಾದಿ ಸಂಜು.ಎಸ್‌.ಕಟ್ಟಿಮನಿ 

ವಿಜಯಪುರ 29: ಸ್ಯಾಂಡಲ್‌ವುಡ್‌ನ ಫೇಮಸ್ ನಟ ದರ್ಶನ ಸದ್ಯ (ದರ್ಶನ ಅಭಿಮಾನಿ ಎಂದು ಹೇಳಲಾಗುತ್ತಿರುವ ಚಿತ್ರದುರ್ಗದ ರೇಣುಕಾಸ್ವಾಮಿಯ) ಡೆಡ್ಲಿ ಮರ್ಡರ್ ಕೇಸ್‌ನ ಎ-2 ಆರೋಪಿಯಾಗಿ ಅರೆಸ್ಟ್‌ ಆಗಿದ್ದಾರೆ. ಪ್ರಖ್ಯಾತ ನಟರೊಬ್ಬರು ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂಬುದು ಈಗ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಸಿನಿಮಾ, ರಾಜಕೀಯ, ಸಾರ್ವಜನಿಕ ವಲಯ ಸೇರಿದಂತೆ ಇದರ ಬಗ್ಗೆ ರಾಷ್ಟ್ರ ಮಟ್ಟದಲ್ಲಿಯೂ ಕೂಡ ಚರ್ಚೆಯಾಗುತ್ತಿದೆ. ಈ ಸುದ್ದಿ ಸದ್ಯ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲೂ ಕಿಚ್ಚು ಹಚ್ಚಿದೆ. ಈ ಪ್ರಕರಣವನ್ನು ವಿವಿಧ ರಂಗದ ಹಲವರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. 

ಇನ್ನು ದೇಶದಲ್ಲಿ ಹೊಸ ಕ್ರಿಮಿನಲ್ ಕಾನೂನು ಜಾರಿ ಮಾಡುವುದಕ್ಕೆ ಕಳೆದ ಫೆಬ್ರವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಆ ವೇಳೆ ದೇಶಾದ್ಯಂತ ಮೂರು ಹೊಸ ಕ್ರಿಮಿನಲ್ ಕಾನೂನನ್ನು 2024 ಜುಲೈ 1ರಿಂದ ಜಾರಿಗೆ ತರಲಾಗುವುದೆಂದು ಹೇಳಲಾಗಿತ್ತು. ಅದಕ್ಕೀಗ ಅಂತಿಮವಾಗಿ ಡೇಟ್ ಫಿಕ್ಸ್‌ ಆಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು 2024 ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿಯಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. 

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೂರು ಹೊಸ ಕ್ರಿಮಿನಲ್ ಕಾನೂನನ್ನು ಜಾರಿಗೆ ತರಲು ಅಂಗೀಕಾರ ಪಡೆಯಲಾಗಿತ್ತು. ಈಗಾಗಲೇ ಇರುವ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಎವಿಡೆನ್ಸ್‌ ಆಕ್ಟ್‌ ಬದಲಿಗೆ ಈ ಮೂರು ಹೊಸ ಕ್ರಿಮಿನಲ್ ಕಾನೂನನ್ನು ಜಾರಿಗೆ ತರಲಾಗುತ್ತಿದೆ.  

ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆ ಇವು ಮೂರು ಹೊಸ ಕ್ರಿಮಿನಲ್ ಕಾನೂನುಗಳಾಗಿದ್ದು, 2023 ಡಿಸೆಂಬರ್ ತಿಂಗಳಲ್ಲಿ ರಾಷ್ಟ್ರಪತಿಯಿಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಒಪ್ಪಿಗೆ ಪಡೆದಿದ್ದವು. ಆದರೆ, ಇದು ಜಾರಿಗೆ ಬಂದಿರಲಿಲ್ಲ. 2024 ಫೆಬ್ರವರಿಯಲ್ಲಿ ಜುಲೈ ಒಂದರಿಂದ ಈ ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬರುತ್ತವೆ ಎಂದು ಹೇಳಿದ್ದರು. ಅದರಂತೆ ಜುಲೈ 1 ರಿಂದ ಇವು ಜಾರಿಗೆ ಬರಲಿವೆ.  

ಒಂದು ವೇಳೆ ದರ್ಶನ್ ಮೇಲಿನ ಆರೋಪ ಸಾಬೀತಾದರೆ, ಹೊಸ ಕ್ರಿಮಿನಲ್ ಕಾನೂನುಗಳ ಪ್ರಕಾರ ಅವರು ಮತ್ತಷ್ಟು ಸಂಕಷ್ಟಕ್ಕೆ ಸಿಲುವುದು ಗ್ಯಾರಂಟಿ. ಏಕೆಂದರೆ ಹೊಸ ಕ್ರಿಮಿನಲ್ ಕಾನೂನು ಈಗಿರುವುದಕ್ಕಿಂತ ಸಾಕಷ್ಟು ಬದಲಾವಣೆಗಳನ್ನು ತರಲಾಗಿದ್ದು, ಹೊಸ ಕ್ರಿಮಿನಲ್ ಕಾನೂನಿನಲ್ಲಿ ಭಯೋತ್ಪಾದಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು, ಅತ್ಯಾಚಾರ ಮಾಡಿದವರಿಗೆ ಮರಣ ದಂಡನೆ, ದಂಗೆ, ವಿಧ್ವಂಸಕ ಕೃತ್ಯಗಳು, ಪ್ರತ್ಯೇಕತಾವಾದಿ ಚಟುವಟಿಕೆಗಳು ಸೇರಿದಂತೆ ಕೆಲವು ಕೃತ್ಯಗಳಿಗೆ ಶಿಕ್ಷೆ ಸೇರಿದಂತೆ ಗುಂಪು ಹತ್ಯೆಗೆ ಶಿಕ್ಷೆಯ ಪ್ರಮಾಣ ಬೇರೆ ಬೇರೆಯಾಗಲಿದೆ. 

ಇದರಿಂದ ದರ್ಶನ್‌ಗೆ ಯಾಕೆ ಸಂಕಷ್ಟ ಎದುರಾಗುತ್ತದೆಂದರೆ ರೇಣುಕಾಸ್ವಾಮಿ ಕೊಲೆಯಲ್ಲಿ ದರ್ಶನ್ ಹಾಗೂ ಗ್ಯಾಂಗ್ ಆರೋಪಿಗಳಾಗಿದ್ದಾರೆ. ಹೀಗಾಗಿ ಪೊಲೀಸರು ಇದನ್ನು ಗುಂಪು ಹತ್ಯೆ ಎಂದು ಪರಿಗಣಿಸಿದರೆ, ದರ್ಶನ್ ದೊಡ್ಡ ಮಟ್ಟದ ಸಂಕಷ್ಟ ಎದುರಾಗಬಹುದು. ಹೊಸ ಕ್ರಿಮಿನಲ್ ಕಾನೂನಿನಲ್ಲಿ ಗುಂಪು ಹತ್ಯೆ ಮತ್ತು ದ್ವೇಷದ ಅಪರಾಧಗಳನ್ನು ಪ್ರತ್ಯೇಕ ರೀತಿಯ ಹತ್ಯೆಯೆಂದು ವಿಭಾಗ ಮಾಡಲಾಗಿದೆ. ಈ ಕಾಯಿದೆಯ ಪ್ರಕಾರ, ಗುಂಪು ಹತ್ಯೆಯಂತಹ ಅಪರಾಧಗಳಿಗೆ ಮರಣದಂಡನೆವರೆಗೂ ಶಿಕ್ಷೆಯನ್ನು ನೀಡಬಹುದಾಗಿದೆ. 

ಮೂರು ಹೊಸ ಕಾನೂನುಗಳ ಪ್ರಕಾರ ಪೊಲೀಸರು 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಬೇಕು. ಒಂದು ವೇಳೆ ಕೇಸ್ ಗಂಭೀರವಾಗಿದ್ದರೆ, 90 ದಿನಗಳು ಹೆಚ್ಚುವರಿ ಅನುಮತಿ ನೀಡುವ ಸಾಧ್ಯತೆಯಿದೆ. ಹಾಗೇ 180 ದಿನಗಳಲ್ಲಿ ತನಿಖೆ ಮುಗಿಸಬೇಕಿದೆ. ಅಲ್ಲದೆ 90 ದಿನಗಳಲ್ಲಿ ತನಿಖೆಯ ಬಗ್ಗೆ ಸಂತ್ರಸ್ತರಿಗೆ ನೀಡಬೇಕಿದೆ. ಹೊಸ ಸಂಹಿತೆಯ ಪ್ರಕಾರ ಕ್ರಿಮಿನಲ್ ಪ್ರಕರಣಗಳಿಗೆ ತ್ವರಿತಗತಿಯಲ್ಲಿ ನ್ಯಾಯ ಒದಗಿಸುವ ಪ್ರಸ್ತಾಪವಿದೆ. 

ಕೇವಲ ಅಂಗವೈಕಲ್ಯ, ಶಾಶ್ವತವಾದ ಅಂಗವೈಕಲ್ಯಕ್ಕೆ ಕಾರಣವಾಗಿರುವ ಅಪರಾಧಕ್ಕೆ ಕಠಿಣ ದಂಡವನ್ನು ಈ ಹೊಸ ಕಾನೂನಿನಲ್ಲಿ ಪರಿಚಯಿಸಲಾಗಿದೆ. ಇನ್ನು ಶಿಕ್ಷೆ ಮನ್ನಗೊಳಿಸಲು ಹೊಸ ನಿಬಂಧನೆಗಳಿವೆ. ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿಯೂ, ಏಳು ವರ್ಷಗಳ ಒಳಗಿನ ಸೆರೆವಾಸವನ್ನು ಜೀವಾವಧಿ ಶಿಕ್ಷೆಯನ್ನಾಗಿಯೂ ಪರಿವರ್ತಿಸಬಹುದಷ್ಟೇ. ಹೀಗಾಗಿ ದರ್ಶನ್ ಹಾಗೂ ಗ್ಯಾಂಗ್‌ನ ಮೇಲಿನ ಆರೋಪ ಸಾಬೀತಾರೆ, ಕಠಿಣ ಶಿಕ್ಷೆ ಸಿಗುವುದಂತೂ ಗ್ಯಾರಂಟಿ ಎಂದೇ ಹೇಳಬಹುದು. ಕಾದು ನೋಡೋಣ..