‘ಓ ಅನಾಹಿತ ...’ ಸಾಂಗ್‌ಗೆ ಉತ್ತಮ ಪ್ರತಿಕ್ರಿಯೆ

‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಮೊದಲ ಗೀತೆಗೆ ಅಭಿಮಾನಿಗಳು ಫಿದಾ!  

‘ಪರಂವಃ ಸ್ಟುಡಿಯೋಸ್‌’ ಲಾಂಛನದಲ್ಲಿ ಜಿ.ಎಸ್ ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಿಸುತ್ತಿರುವ ಬಹು ನೀರೀಕ್ಷಿತ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಮೊದಲ ಗೀತೆ ‘ಓ ಅನಾಹಿತ ...’ ಕಳೆದವಾರ ಪರಂವಃ ಮ್ಯೂಸಿಕ್ ಯುಟ್ಯೂಬ್ ಚಾನೆಲ್‌ನಲ್ಲಿ ರೀಲೀಸ್ ಆಗಿತ್ತು. ಈ ಗೀತೆಗೆ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಅಭಿಮಾನಿಗಳು ಗೀತೆಯನ್ನು ಮೆಚ್ಚಿಕೊಂಡಿದ್ದಾರೆ. ರೀಲೀಸ್ ಆದ ಒಂದು ವಾರದಲ್ಲಿ 1.4 ಮಿಲಿಯನ್‌ಗೂ ಹೆಚ್ಚುಬಾರಿ ವೀಕ್ಷಣೆಯಾಗಿದೆ. ಈ ಗೀತೆಯನ್ನು ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ ಅವರೆ ಬರೆದಿದ್ದು, ‘ಮಾನ್ಸೂನ್ ರಾಗ’ದ ಖ್ಯಾತಿಯ ದೀಕ್ಷಿತ್ ನೃತ್ಯ ಸಂಯೋಜನೆ ಮಾಡಿದ್ದಾರೆ. ‘ಸಪ್ತ ಸಾಗರ’ ಖ್ಯಾತಿಯ ಕಪಿಲ್ ಕಪಿಲನ್ ಈ ಹಾಡನ್ನು ಹಾಡಿದ್ದಾರೆ. ಸುಮಧುರ ಪ್ರೇಮಕಾವ್ಯದ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಸಂಯೋಜಿಸಿದ್ದು, ಆರು ಅದ್ಭುತ ಹಾಡುಗಳು ಮೂಡಿಬಂದಿವೆ.  

ಸುಂದರ ಶೀರ್ಷಿಕೆಯಿಂದಲೇ ಎಲ್ಲರ ಗಮನ ಸೆಳೆದಿರುವ ಈ ಚಿತ್ರವನ್ನು ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನ ಮಾಡಿದ್ದಾರೆ. ‘ಕಿರಿಕ್ ಪಾರ್ಟಿ’ ಹಾಗೂ ‘ಅವನ್ನೇ ಶ್ರೀ ಮನ್ನಾರಾಯಣ’ ಚಿತ್ರಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದ ಚಂದ್ರಜಿತ್, ರಕ್ಷಿತ್ ಅವರ ‘ಸೆವೆನ್ ಓಡ್ಸ್‌’ ಬರಹಗಾರರ ತಂಡದ ಪ್ರಮುಖ ಸದಸ್ಯ ಹಾಗು ‘ಕಥಾ ಸಂಗಮ’ ಚಿತ್ರದ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಈಗ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್‌ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ. ‘ಪಂಚತಂತ್ರ’ದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ವಿಹಾನ್ ಈ ಚಿತ್ರದ ನಾಯಕ. ಐದು ವರ್ಷಗಳ ನಂತರ ವಿಹಾನ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಕಿರುತೆರೆಯ ಮೂಲಕ. ಜನಮನಸೂರೆಗೊಂಡಿರುವ ಅಂಕಿತ ಅಮರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಸೂಪರ್ ಹಿಟ್ ‘ಗೀತಾಂಜಲಿ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಗಿರಿಜಾ ಶೆಟ್ಟರ್ ಬಹಳ ವರ್ಷಗಳ ನಂತರ ಅಭಿನಯಕ್ಕೆ ಮರಳಿ ಬಂದಿದ್ದಾರೆ. ಮಯೂರಿ ನಟರಾಜ್ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.  

ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ (ನ್ಯೂಯಾರ್ಕ್‌ ಫಿಲಂ ಅಕಾಡೆಮಿ ಹಾಗು ಆಸ್ಕರ್ ಗೋಲ್ಡ್‌ ರೈಸಿಂಗ್ ಪ್ರೋಗ್ರಾಮ್ ನಿಂದ ತರಬೇತಿ) ಹಾಗೂ ರಕ್ಷಿತ್ ಕಾಪ್ ಅವರ ಸಂಕಲನವಿರುವ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕೆ ಗಿಈಘಿ ಪಿನಾಕ ಸ್ಟುಡಿಯೋದಲ್ಲಿ ನಡೆದಿದೆ. ಶಶಿಕುಮಾರ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪರಂವಃ ಸ್ಟುಡಿಯೋಸ್ ಸಿ.ಯಿ.ಓ ಆಗಿ ಶ್ರೀನೀಶ್ ಶೆಟ್ಟಿ ಇದ್ದಾರೆ.