ಕಲಬುರಗಿ, ಮೇ 2,ಹೊಟ್ಟೆ ಪಾಡಿಗಾಗಿ ಜಿಲ್ಲೆಯಿಂದ ಬೆಂಗಳೂರು ಮತ್ತು ಹುಬ್ಳಳ್ಳಿ-ಧಾರವಾಡಕ್ಕೆ ದುಡಿಯಲು ಗುಳೆ ಹೋಗಿದ್ದ ಕಾರ್ಮಿಕರು ಶನಿವಾರ ಬೆಳಿಗ್ಗೆ ಕಲಬುರಗಿಗೆ ವಾಪಸ್ಸಾಗಿದ್ದಾರೆ. ಮಾಹಾಮಾರಿ ಕೊರೊನಾ ವೈರಸ್‌ನಿಂದ ಇಡೀ ದೇಶವೇ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ನೂರಾರು ಬಡ ಕಾರ್ಮಿಕರು ತವರಿಗೆ ವಾಪಸ್ಸಾಗದೇ, ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಕಳೆದ ಒಂದುವರೆ ತಿಂಗಳಿನಿಂದ ಪರದಾಡುತ್ತಿದ್ದರು.ಶುಕ್ರವಾರ ಸರ್ಕಾರ ತಮ್ಮ ತಮ್ಮ ಊರಿಗೆ ವಾಪಸ್ಸು ತೆರಳಲು ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದರಿಂದ ಬೆಂಗಳೂರಿನಿಂದ ಮೂವತ್ತು ಕಾರ್ಮಿಕರು ಶನಿವಾರ ಕಲಬುರಗಿಗೆ ಆಗಮಿಸಿದ್ದಾರೆ.55 ಜನ ಪ್ರಯಾಣಿಸುವ ಬಸ್ಸಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಮಿಕರು ಪ್ರಯಾಣ ಬೆಳೆಸಿದ್ದರು. ಅದರಲ್ಲಿ 30 ಜನ ಕಾರ್ಮಿಕರು ಕಲಬುರಗಿಯ ಮೂಲದವರಾಗಿದ್ದರೇ, 20 ಜನ ಬೀದರ್ ಮೂಲದವರಾಗಿದ್ದು, ಅವರನ್ನ ಸಹ ಬೀದರ್‌ಗೆ ಕಳುಹಿಸಿ ಕೊಡಲಾಗಿದೆ.
ಇನ್ನು, ಧಾರವಾಡಕ್ಕೂ ಸಹ ನೂರಾರು ಜನ ಇಟ್ಟಿಗೆ ಭಟ್ಟಿಯಲ್ಲಿ ಕಾರ್ಯನಿರ್ವಹಿಸಲು ತೆರಳಿದ್ದರು. ಇದೀಗ 105 ಜನ ಕಾರ್ಮಿಕರು ವಾಯುವ್ಯ ಈಶಾನ್ಯ ಸಾರಿಗೆ ಸಂಸ್ಥೆಯ ಐದು ಬಸ್ಸುಗಳಲ್ಲಿ ಕಲಬುರಗಿಗೆ ಆಗಮಿಸಿದ್ದು, ಕಾರ್ಮಿಕರ ಮೊಗದಲ್ಲಿ ಸಂತಸ ಮೂಡಿದೆ. ಬೆಂಗಳೂರು ಹಾಗೂ ಧಾರವಾಡದಿಂದ ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಿಗೆ ವಾಪಾಸ್ಸಾಗಿರುವ ಎಲ್ಲಾ ಕಾರ್ಮಿಕರನ್ನು ಸ್ಕ್ರೀನಿಂಗ್ ಗೆ ಒಳಪಡಿಸಿ 14 ದಿನಗಳ ಕಾಲ ಹೋಮ್ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು.ಕಳೆದ ಐದು ತಿಂಗಳಿನಿಂದ ತಾನು ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದು, ಲಾಕ್ ಡೌನ್ ಜಾರಿಯಾಗಿದ್ದರಿಂದ ವಾಹನ ಇಲ್ಲದೇ ಹುಬ್ಬಳ್ಳಿ ಯಲ್ಲಿ ಸಿಲುಕಿಕೊಂಡಿದೆ. ಇದೀಗ ಸರ್ಕಾರ, ಸಾರಿಗೆ ಸಂಪರ್ಕ ಕಲ್ಪಿಸಿದ್ದರಿಂದ ಊರಿಗೆ ವಾಪಸ್ಸಾಗುತ್ತಿದ್ದೇನೆ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹುಬ್ಬಳ್ಳಿಯಿಂದ ವಾಪಾಸ್ಸಾದ ಅಣೆಪ್ಪಾ ಎಂಬ ಕಾರ್ಮಿಕ ಕೃತಜ್ಞತೆ ಸಲ್ಲಿಸಿದರು.