ಕುಖ್ಯಾತ ರೌಡಿ ಬಜ್ಜು ಭೀಕರ ಕೊಲೆ

ಬೆಂಗಳೂರು, ಮೇ 3, ಕುಖ್ಯಾತ ರೌಡಿ ಬಜ್ಜು ಎಂಬಾತನನ್ನು ದುಷ್ಕರ್ಮಿಗಳ ತಂಡವೊಂದು ಭೀಕರವಾಗಿ ಹತ್ಯೆ ಮಾಡಿದ ಘಟನೆ ನಗರದ ಬಾಗಲೂರು ಬಡಾವಣೆಯಲ್ಲಿ ಕಳೆದ ರಾತ್ರಿ ನಡೆದಿದೆ. ನಿಮ್ಮೊಂದಿಗೆ ಮಾತನಾಡಬೇಕಿದೆ ಎಂದು ಆತನ ಮನೆಯಿಂದ ಆತನನ್ನು ಕರೆಸಿಕೊಂಡು  ಚಾಕುವಿನಿಂದ ಇರಿದು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಲಾಗಿದೆ.ಹಳೆ  ಬಾಗಲೂರು ಲೇಔಟ್ ನ ಬಜ್ಜು(39) ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದ. ಕಳೆದ ರಾತ್ರಿ 7.30ರ ಸುಮಾರಿಗೆ ಆತನ  ಪರಿಚಯಸ್ಥರಾದ ಐವರು ಯುವಕರು ಮನೆಗೆ ಬಂದು ಮಾತನಾಡುವ ನೆಪದಲ್ಲಿ ಹೊರಗೆ  ಕರೆದುಕೊಂಡು ಹೋಗಿದ್ದಾರೆ.
ಕಾಡುಗೊಂಡನಹಳ್ಳಿಯ ಹಳೆ ಬಾಗಲೂರು ಲೇಔಟ್‌ನ ನಿರ್ಜಲ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ  ಜಗಳ ತೆಗೆದು ಚಾಕುವಿನಿಂದ ಇರಿದು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಹೊರ ಹೋಗಿದ್ದ ಬಜ್ಜು ಒಂದು ಗಂಟೆ ಕಳೆದರೂ‌ ಮನೆಗೆ ಬರದಿದ್ದರಿಂದ ಆತಂಕ ಗೊಂಡ ಮನೆಯವರು ಹುಡುಕಾಟ ನಡೆಸಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.ಸುದ್ದಿ  ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕಾಡುಗೊಂಡನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ  ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಕೃತ್ಯ ದ ಪ್ರಮುಖ ಆರೋಪಿಯ ತಂದೆಯನ್ನು ಬಜ್ಜು ಕೊಲೆ ಮಾಡಿದ್ದ. ಅದೇ ದ್ವೇಷದಿಂದ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.ಕಾಡುಗೊಂಡನಹಳ್ಳಿಯ ಠಾಣೆ ಯ ರೌಡಿ ಪಟ್ಟಿಯಲ್ಲಿ ದ್ದ ಬಜ್ಜು ಕೊಲೆ ಇನ್ನಿತರ ಅಪರಾಧ ಕೃತ್ಯ ಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.ರೌಡಿ ಡ್ಯಾನಿಯಲ್ ಸಂಬಂಧಿ ಸ್ಟಾಲಿನ್ ಹತ್ಯೆಯಲ್ಲಿ ಬುಜ್ಜು ಭಾಗಿಯಾಗಿದ್ದು, ಸ್ಟಾಲಿನ್  ಹತ್ಯೆ ಬಳಿಕ ಆತನ ಸಹಚರರು ಬುಜ್ಜು ಸಹೋದರ ವಿನೋದ್​​ನನ್ನು ಹತ್ಯೆಗೈದಿದ್ದರು. ಬಳಿಕ  ಎರಡು ಕಡೆ ಒಂದೊಂದು ಹತ್ಯೆಯಾಗಿದೆ. ಹೀಗಾಗಿ ಇಬ್ಬರೂ ಸಂಧಾನ  ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಈಗ ರೌಡಿ ಶೀಟರ್ ಬುಜ್ಜು ಹತ್ಯೆಯಾಗಿದೆ ಎಂದು ಮೂಲಗಳು ತಿಳಿಸಿವೆ.