ಬಳ್ಳಾರಿ ಜಿಲ್ಲೆ ವಿಭಜಿಸಿ ಪ್ರತ್ಯೇಕ ಜಿಲ್ಲೆ ರಚನೆ ಪ್ರಕ್ರಿಯೆ; ಶಾಸಕ ಆನಂದ್ ಸಿಂಗ್ ಮೇಲುಗೈ

ಬಳ್ಳಾರಿ, ಜ ೨೪ :      ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ   ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಸಿರಗುಪ್ಪ ಹಾಗೂ ಹಡಗಲಿ ತಾಲ್ಲೊಕುಗಳನ್ನು ಒಳಗೊಂಡ  ವಿಜಯನಗರ  ಹೊಸ ಜಿಲ್ಲೆ ರಚನೆ ಸಂಬಂಧ   ಬಳ್ಳಾರಿ ಜಿಲ್ಲಾಧಿಕಾರಿ  ರಾಜ್ಯ ಸರ್ಕಾರಕ್ಕೆ   ಪ್ರಸ್ತಾವನೆ ರವಾನಿಸಿದ್ದಾರೆ.

ಬಳ್ಳಾರಿ ಜಿಲ್ಲಾಧಿಕಾರಿ  ಎಸ್ .ಎಸ್. ನಕುಲ್  ಈ ಸಂಬಂಧ  ರಾಜ್ಯ ಸರ್ಕಾರಕ್ಕೆ  ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು   ಉನ್ನತ ಮೂಲಗಳು ತಿಳಿಸಿವೆ.

ಬಳ್ಳಾರಿ ಜಿಲ್ಲೆಯನ್ನು  ವಿಭಜಿಸಿ   ಹೊಸಪೇಟೆಯನ್ನು ಕೇಂದ್ರ ಸ್ಥಾನವನ್ನಾಗಿಸಿ     ವಿಜಯ ನಗರ ಜಿಲ್ಲೆಯನ್ನು ರಚಿಸುವಂತೆ  ಬಿಜೆಪಿ ಶಾಸಕ ಆನಂದ್ ಸಿಂಗ್  ಮೊದಲಿನಿಂದಲೂ  ಒತ್ತಾಯಿಸಿಕೊಂಡು ಬರುತ್ತಿದ್ದಾರೆ.

ಆದರೆ, ಬಳ್ಳಾರಿ  ಜಿಲ್ಲೆಯ ವಿಭಜನೆಯನ್ನು    ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರ ಒಂದು ವರ್ಗ     ತೀವ್ರವಾಗಿ  ವಿರೋಧಿಸುತ್ತಿದೆ.   ಪ್ರಸ್ತಾವನೆ  ವಿರೋಧಿಸಲು ತಾವು ಯಾವ ಮಟ್ಟದ ಹೋರಾಟಕ್ಕೂ ಸಿದ್ದ  ಎಂದು  ಬಿಜೆಪಿ ಶಾಸಕ  ಸೋಮಶೇಖರರೆಡ್ಡಿ ಈಗಾಗಲೇ  ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ   ಕಂದಾಯ ಸಚಿವ  ಆರ್ . ಅಶೋಕ,  ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,   ಬಳ್ಳಾರಿ ಜಿಲ್ಲೆ  ವಿಭಜನೆ ಸಂಬಂಧ  ಜಿಲ್ಲಾಧಿಕಾರಿ ಸಲ್ಲಿಸಿರುವ ಪ್ರಸ್ತಾವನೆ ಕುರಿತು  ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿದ ನಂತರ  ಸಂಪುಟದಲ್ಲಿ ಅಂತಿಮ  ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

೨೦೧೯ರ ಅಕ್ಟೋಬರ್ ನಲ್ಲಿ   ಬಳ್ಳಾರಿ ಜಿಲ್ಲೆಯ ಚುನಾಯಿತ    ಜನಪ್ರತಿನಿಧಿಗಳ ತೀವ್ರ ವಿರೋಧದ   ಕಾರಣ   ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ನೇತೃತ್ವದ  ಈಸಂಬಂಧ  ಕರೆದಿದ್ದ   ಸಭೆಯಲ್ಲಿ ಯಾವುದೇ   ನಿರ್ಧಾರ ಕೈಗೊಳ್ಳದೆ ಮುಂದೂಡಿದ್ದರು.

ಕಳೆದ ಡಿಸೆಂಬರ್  ೫ರಂದು ನಡೆದ ವಿಜಯನಗರ  ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆನಂದ್ ಸಿಂಗ್  ಬಿಜೆಪಿಯಿಂದ ಮರು ಆಯ್ಕೆಗೊಂಡಿದ್ದಾರೆ. 

ಇತ್ತೀಚಿಗೆ ನಡೆದ  ಹಂಪಿ ಉತ್ಸವದಲ್ಲಿ  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಎದುರೇ  ಪ್ರತ್ಯೇಕ ವಿಜಯ ನಗರ ಜಿಲ್ಲೆ ರಚನೆಯ ಬೇಡಿಕೆಯನ್ನು  ಮರು  ಪ್ರಸ್ತಾಪಿಸಿದ  ಶಾಸಕ ಆನಂದ್ ಸಿಂಗ್,  ತಮಗೆ  ಸಚಿವ ಸ್ಥಾನಕ್ಕಿಂತ  ಪ್ರತ್ಯೇಕ  ವಿಜಯನಗರ ಜಿಲ್ಲೆ ರಚನೆಯೇ ಆದ್ಯತೆಯಾಗಿದ್ದು, ಈ ಸಂಬಂಧ  ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.