ದೂರವಾಣಿ ಕದ್ದಾಲಿಕೆ ಪ್ರಕರಣ; ಸಿದ್ದರಾಮಯ್ಯ ಸ್ವಾಗತ; ಕೆಪಿಸಿಸಿ ಟ್ವೀಟ್ ಡಿಲೀಟ್

 ಬೆಂಗಳೂರು, ಆ 18           ರಾಜಕಾರಣಿಗಳ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೂಗತ ಪಾತಕಿಯಂತೆ ವರ್ತಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದ ಕೆಪಿಸಿಸಿ, ಕೆಲ ಗಂಟೆಗಳಲ್ಲೇ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದೆ.     ಯಡಿಯೂರಪ್ಪ ಅವರ ನಿರ್ಧಾರ ಸ್ವಾಗತಿಸಿ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ ಬೆನ್ನಲ್ಲೇ ಕೆಪಿಸಿಸಿ ತನ್ನ ಟ್ವೀಟ್ ಡಿಲೀಟ್ ಮಾಡಿದೆ.     ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವುದರ ಹಿಂದೆ ಸೇಡಿನ ರಾಜಕಾರಣವಿಲ್ಲ ಎಂದು ಆಶಿಸಿರುವ ಸಿದ್ದರಾಮಯ್ಯ, ' ಪೋನ್ ಕದ್ದಾಲಿಕೆ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ಮುಖ್ಯಮಂತ್ರಿ  ನಿರ್ಧಾರ ಸ್ವಾಗತಾರ್ಹ. ಆದರೆ ಬಿಜೆಪಿ ಸಿಬಿಐಯನ್ನು ಕೈಗೊಂಬೆ ಮಾಡಿಕೊಂಡು ರಾಜಕೀಯ ಸೇಡಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಾ ಬಂದಿರುವುದನ್ನು ದೇಶ ಕಂಡಿದೆ. ಇಂತಹ ದುಷ್ಟ ಆಲೋಚನೆ ಬಿಜೆಪಿ ನಾಯಕರಿಗಿಲ್ಲ ಎಂದು ನಂಬಿದ್ದೇನೆ' ಎಂದು ಟ್ವೀಟ್ ಮಾಡಿದ್ದರು.     ಇದಕ್ಕೂ ಮುನ್ನ ಕೆಪಿಸಿಸಿ, ತಾನು ಕಳ್ಳ, ಪರರನ್ನು ನಂಬ ಎಂಬಂತಿದೆ ಮುಖ್ಯಮಂತ್ರಿಗಳ ವರ್ತನೆ. ಆಪರೇಷನ್ ಕಮ ಮೂಲಕ ಸರ್ಕಾರ ಬೀಳಿಸಿ, ಹಿಂಬಾಗಿಲ ಮೂಲಕ ಸರ್ಕಾರ ರಚಿಸಿರುವ ತಾವು ಭೂಗತ ಪಾತಕಿಗಳ ರೀತಿ ವರ್ತಿಸುತ್ತಿದ್ದಾರೆ.  ಮೋದಿ ಆಳ್ವಿಕೆಯಲ್ಲಿ ಸಿಬಿಐ ಬಿಜೆಪಿಯ ಮುಂಚೂಣಿ ಘಟಕವಾಗಿ ಕೆಲಸ ಮಾಡುತ್ತಿದೆ. ಫೋನ್ ಕದ್ದಾಲಿಕೆ ಎಂಬುದು ಒಂದು ಸುಳ್ಳು, ದ್ವೇಷ ರಾಜಕಾರಣದ ಸಂಚು ಎಂದಿದ್ದರು.