ಬೆಂಗಳೂರು 08: ಸಮಾಜದ ಮುಖ್ಯ ವಾಹಿನಿಗೆ ಬರಲು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ 6 ನಕ್ಸಲರ ಶರಣಾಗತಿಯಲ್ಲಿ ದಿಢೀರ್ ಬದಲಾವಣೆ ಆಗಿದ್ದು, ಬೆಂಗಳೂರಿನಲ್ಲಿ ಸಿಎಂ ಹಾಗೂ ಗೃಹ ಸಚಿವರ ಮುಂದೆ ಮಂಗಳವಾರ ಶರಣಾಗತಿಯಾಗಲಿದ್ದಾರೆಂದು ತಿಳಿದುಬಂದಿದೆ.
ಆರು ಮಂದಿ ನಕ್ಸಲರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಅವರ ಮುಂದೆ ಶರಣಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಕರ್ನಾಟಕದ ಮರೆಪ್ಪ ಅರೋಲಿ, ತಮಿಳುನಾಡಿನ ಕೆ ವಸಂತ್ ಮತ್ತು ಕೇರಳದ ಜೀಶಾ ಶರಣಾಗತಿಯಾಗಲಿದ್ದಾರೆಂದು ಮೂಲಗಳು ತಿಳಿಸಿವೆ.
ಈ ಕುರಿತು ಗೃಹ ಸಚಿವರಾದ ಪರಮೇಶ್ವರ್ ಅವರು ಮಾಹಿತಿ ನೀಡಿದ್ದು, ನಕ್ಸಲರು ಶರಣಾಗುತ್ತಿದ್ದಾರೆ ಎಂಬುದನ್ನು ಮಾತ್ರ ಹೇಳಬಲ್ಲೆ. ಶರಣಾಗುತ್ತಿರುವವರ ಬೇಡಿಕೆ ಹಾಗೂ ಇತರೆ ಮಾಹಿತಿಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಅನೇಕ ಪ್ರಸ್ತುತ ಶರಣಾಗುತ್ತಿರುವ ನಕ್ಸಲರ ವಿರುದ್ಧ ಅನೇಕ ಪ್ರಕರಣಗಳಿರುವುದು ನಿಜ. ಶರಣಾದ ನಂತರ ಯಾವ ರೀತಿ ಚರ್ಚೆ ಮಾಡಬೇಕು, ಕಾನೂನಿನಲ್ಲಿ ಏನು ಅವಕಾಶವಿದೆ ಎಂಬುದನ್ನು ನೋಡುತ್ತೇವೆ ಎಂದು ಹೇಳಿದರು. ನಕ್ಸಲರಿಗಾಗಿ ಸರ್ಕಾರ ಈಗಾಗಲೇ ಶರಣಾಗತಿ ನೀತಿಯನ್ನು ರೂಪಿಸಿದ್ದು, ಈ ನೀತಿಯನ್ನು ಸರಳೀಕರಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದ್ದರು.
ನವೆಂಬರ್ 18, 2024 ರಂದು ಉಡುಪಿ ಜಿಲ್ಲೆಯ ಹೆಬ್ರಿಯ ಪೀತಬೈಲು ಗ್ರಾಮದಲ್ಲಿ ನಕ್ಸಲ್ ನಿಗ್ರಹ ಪಡೆ ಎನ್ಕೌಂಟರ್ನಲ್ಲಿ ಮಾವೋವಾದಿ ನಾಯಕ ವಿಕ್ರಮ್ ಗೌಡನನ್ನು ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ನಕ್ಸಲರ ಶರಣಾಗತಿ ಕುರಿತು ಚರ್ಚೆಗಳು ನಡೆಯುತ್ತಿವೆ.
ಆರು ನಕ್ಸಲರು ಮುಖ್ಯವಾಹಿನಿಗೆ ಸೇರುವ ಕಾರ್ಯಕ್ರಮ ದಿಢೀರ್ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ವರ್ಗಾವಣೆಗೊಂಡಿದೆ.