ಒಟ್ಟಾವ 08: ಸೋಮವಾರ ಪ್ರಧಾನಿ ಹುದ್ದೆಗೆ ಟ್ರೂಡೊ ರಾಜೀನಾಮೆ ನೀಡಿರುವುದರಿಂದ ಹೊಸ ನಾಯಕನ ಆಯ್ಕೆ ಅನಿವಾರ್ಯವಾಗಿದೆ. ಕೆನಡಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಜಸ್ಟಿನ್ ಟ್ರೂಡೊ ಅವರ ಸ್ಥಾನಕ್ಕೆ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ, ಭಾರತೀಯ ಮೂಲದ ಅನಿತಾ ಆನಂದ್ ಹೆಸರು ಬಲವಾಗಿ ಕೇಳಿಬರುತ್ತಿದೆ.
2019ರಿಂದ ಸಂಸದರಾಗಿರುವ ಅನಿತಾ ಆನಂದ್ ಕೆನಡಾದ ಲಿಬರಲ್ ಪಾರ್ಟಿಯ ಹಿರಿಯ ಸದಸ್ಯೆ. ಸಾರ್ವಜನಿಕ ಸೇವೆ ಮತ್ತು ನೇಮಕಾತಿ, ರಾಷ್ಟ್ರೀಯ ರಕ್ಷಣೆ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅವರು ಖಜಾನೆ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2024ರಿಂದ ಅವರು ಸಾರಿಗೆ ಮತ್ತು ಆಂತರಿಕ ವ್ಯಾಪಾರ ಖಾತೆ ಸಚಿವರಾಗಿದ್ದಾರೆ.
ಮಾರ್ಚ್ 24ರಂದು ಹೊಸ ಪ್ರಧಾನಿ ಆಯ್ಕೆಯಾಗಲಿದ್ದಾರೆ. ಸಾರಿಗೆ ಮತ್ತು ಆಂತರಿಕ ವ್ಯವಹಾರಗಳ ಖಾತೆ ಸಚಿವರಾಗಿರುವ ಅನಿತಾ ಆನಂದ್, ಜೊತೆಗೆ, ಡೊಮಿನಿಕ್ ಲೆಬ್ಲಾಂಕ್, ಕ್ರಿಸ್ಟಿನಾ ಫ್ರೀಲ್ಯಾಂಡ್, ಮೆಲೈನ್ ಜೋಲಿ, ಫ್ರಾಂಕೋಯಿಸ್ ಫಿಲಿಪ್ ಚಾಂಪೇನ್ ಮತ್ತು ಮಾಕ್ ಕೆರ್ನಿ ಹೆಸರು ಕೂಡಾ ಚಾಲ್ತಿಯಲ್ಲಿದೆ.
ಬರೋಬ್ಬರಿ ಹತ್ತು ವರ್ಷಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದ ಟ್ರುಡೋ ರಾಜೀನಾಮೆಗೆ ಒತ್ತಾಯಿಸಿ ಸ್ವಪಕ್ಷದಲ್ಲೇ ಭಿನ್ನಮತ ಸೃಷ್ಟಿಯಾಗಿದ್ದರಿಂದ ಈ ಬೆಳವಣಿಗೆ ನಡೆದಿದೆ. ಆದರೆ ಲಿಬರಲ್ ಪಕ್ಷ ನೂತನ ಪ್ರಧಾನಿ ಆಯ್ಕೆ ಮಾಡುವವರೆಗೆ ತಾನೇ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವುದಾಗಿ ಘೋಷಿಸಿದ್ದಾರೆ.