ಹೊರರಾಜ್ಯಕ್ಕೆ ಹುಣಸೆ ಮತ್ತು ಕೊಬ್ಬರಿ: ಸಚಿವ ಜೆ.ಸಿ. ಮಾಧುಸ್ವಾಮಿ

ತುಮಕೂರು, ಏ.22, ಜಿಲ್ಲೆಯಿಂದ  ಹುಣಸೆ ಹಣ್ಣು ಮತ್ತು ಕೊಬ್ಬರಿಯನ್ನು ಕೆಲವು ನಿಬಂಧನೆಗೊಳಪಟ್ಟು ಹೊರ  ರಾಜ್ಯಗಳಿಗೆ ಕಳುಹಿಸಲು ಏಪ್ರಿಲ್ 24ರಿಂದ ಅವಕಾಶ ಕಲ್ಪಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ  ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಸೂಚಿಸಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಶಾಸಕರು ಮತ್ತು ಅಧಿಕಾರಿಗಳ  ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೋವಿಡ್-19 ಸೋಂಕು ಹರಡದಂತೆ ತಡೆಗಟ್ಟುವ  ಸಲುವಾಗಿ ಹೊರ ರಾಜ್ಯಗಳಿಗೆ ಹುಣಸೆ ಹಣ್ಣು ಮತ್ತು ಕೊಬ್ಬರಿ ತೆಗೆದುಕೊಂಡು ಹೋಗಿ  ವಾಪಸ್  ಬರುವ ಲಾರಿ ಡ್ರೈವರ್‌ಗಳನ್ನು  14 ದಿನಗಳವರೆಗೆ ಕಡ್ಡಾಯವಾಗಿ ಕ್ವಾರೆಂಟೈನ್  ಮಾಡಲಾಗುವುದು ಎಂದರು.
 ಕೋವಿಡ್-19ರ ಹಿನ್ನೆಲೆಯಲ್ಲಿ  ಈಗಾಗಲೇ ಜಿಲ್ಲೆಯಲ್ಲಿ ರೈಸ್‌ಮಿಲ್‌ಗಳಲ್ಲಿ ಹೊರ ರಾಜ್ಯಗಳಿಂದ ಭತ್ತ ತರಿಸುತ್ತಿರುವುದು  ಹಾಗೂ ರೈಸ್ ಸರಬರಾಜು ಮಾಡುತ್ತಿದ್ದು, ವ್ಯವಸ್ಥಿತವಾಗಿ ನಿರ್ವಹಣೆ ಮಾಡುತ್ತಿದ್ದಾರೆ.   ಅದೇ ರೀತಿ ಕೊಬ್ಬರಿ ಹಾಗೂ ಹುಣಸೆ ಹಣ್ಣಿನ ವರ್ತಕರು/ಎಪಿಎಂಸಿಗಳು ನಿರ್ವಹಣೆ ಮಾಡಬೇಕು  ಎಂದರು.
 ಜಿಲ್ಲಾಧಿಕಾರಿ ಡಾ. ರಾಕೇಶ್‌ಕುಮಾರ್ ಮಾತನಾಡಿ,   ಹೊರ ರಾಜ್ಯಗಳಿಗೆ ಹೋಗುವ ಲಾರಿ ಚಾಲಕರನ್ನು ಆರೋಗ್ಯ ತಪಾಸಣೆಗೊಳಪಡಿಸಬೇಕು.  ಸಾರ್ವಜನಿಕರ ಆರೋಗ್ಯದ ಸುರಕ್ಷತೆಯಿಂದ ಅವರನ್ನು ಕ್ವಾರೆಂಟೈನ್ ಮಾಡುವ ಷರತ್ತುಗೊಳಪಟ್ಟು  ವಹಿವಾಟಿಗೆ ಅನುಮತಿ ನೀಡಲಾಗುತ್ತಿದೆ. ಅಲ್ಲದೇ ವಾಹನ ಚಾಲಕನಿಗೆ ಮಾಸ್ಕ್,  ಸ್ಯಾನಿಟೈಸರ್‌ಗಳನ್ನು ಒದಗಿಸಿ, ಊಟವನ್ನು ಪಾರ್ಸಲ್ ತಂದು ಲಾರಿಯಲ್ಲಿಯೇ ತಿನ್ನಬೇಕು  ಮತ್ತು ಜಿಲ್ಲೆಯಿಂದ ಹೋಗುವ ಚಾಲಕರಿಗಾಗಿ ಸಹಾಯವಾಣಿ ತೆರೆಯಲಾಗುವುದು. ಯಾವುದೇ ರೀತಿಯ  ಸಮಸ್ಯೆಯಾದಲ್ಲಿ ಅವರು ಸಂಪರ್ಕಿಸಬಹುದು ಎಂದರು.
ಹೊರರಾಜ್ಯಗಳಿಗೆ  ಹುಣಸೆ ಹಣ್ಣು ಹಾಗೂ ಕೊಬ್ಬರಿ ಮಾರಾಟ ಮಾಡಲು ಎಸ್‌ಓಪಿ (ಸ್ಟಾಂಡರ್ಡ್ ಆಫ್‌ರೆಟಿಂಗ್  ಪ್ರೊಸಿಜರ್ಸ್‌)ಗಳನ್ನು ಜಿಲ್ಲಾಡಳಿತ ರೂಪಿಸಿ ಆದೇಶ ಹೊರಡಿಸಲಿದೆ.  ಅದರಂತೆ  ಎಪಿಎಂಸಿ/ವರ್ತಕರು ಈ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ.  ಚಾಲಕರು ಆರೋಗ್ಯವನ್ನು  ಪರಿಶೀಲಿಸಲು ಆರೋಗ್ಯ ಇಲಾಖೆಯಿಂದ ಸಿಬ್ಬಂದಿಗಳನ್ನು ಎಪಿಎಂಸಿಯಲ್ಲಿ ನಿಯೋಜಿಸಲಾಗುವುದು  ಎಂದು ಅವರು ತಿಳಿಸಿದರು. ತಮಿಳುನಾಡು, ಮಹಾರಾಷ್ಟ್ರ,  ಆಂಧ್ರಪ್ರದೇಶ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು, ಲಾರಿ ಚಾಲಕರು ಸೂಚಿಸಿರುವ  ಸ್ಥಳವನ್ನು ಹೊರತುಪಡಿಸಿ ಬೇರೆ ಕಡೆ ಓಡಾಡಬಾರದು. ರಾಜ್ಯ ಹಾಗೂ ಜಿಲ್ಲೆಯಲ್ಲಿ  ಕೋವಿಡ್- 19ರ ನಿಯಂತ್ರಣವನ್ನು ಯಶಸ್ವಿಯಾಗಿ ಮಾಡುತ್ತಿದ್ದೇವೆ ಎಂದರು. ಶಾಸಕ  ಬಿ.ಸಿ ನಾಗೇಶ್ ಮಾತನಾಡಿ, ತುರುವೇಕೆರೆ, ದಂಡಿನಶಿವರಗಳಲ್ಲಿ ಹೆಚ್ಚಾಗಿ ಕೊಬ್ಬರಿ ಲೋಡ್  ಆಗುತ್ತಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ರೈತರು ಸಂಕಷ್ಟದಲ್ಲಿದ್ದು, ರೈತರಿಂದ  ಕೊಬ್ಬರಿಯನ್ನು ಕಡಿಮೆಬೆಲೆಗೆ ಖರೀದಿಸುತ್ತಿದ್ದು, ಇದರಿಂದ ರೈತರಿಗೆ ನಷ್ಟವಾಗುತ್ತಿದೆ  ಎಂದರು.
ಲಾಕ್‌ಡೌನ್ ಅವಧಿಯಲ್ಲಿ ನೀರಾವರಿ ಯೋಜನೆಗಳ  ಕಾಮಗಾರಿಗಳು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು, ಲೋಕೋಪಯೋಗಿ ಇಲಾಖೆಯ ಮುಂದುವರೆದ  ಕಾಮಗಾರಿಗಳು, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ  ಅವಕಾಶ ನೀಡಿದೆ ಎಂದು ಸಚಿವರು ತಿಳಿಸಿದರು.   
ಕೋವಿಡ್-19  ನಿಯಂತ್ರಣ ಸಂಬಂಧ ಜಿಲ್ಲೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು, ನಾಳೆಯಿಂದ(ಇಂದಿನಿಂದ)  ಮನೆಮನೆ ಸಮೀಕ್ಷೆ ನಡೆಸಿ ಹೈರಿಸ್ಕ್ ಇರುವ ರೋಗಿಗಳ ಮಾಹಿತಿ ಪಡೆಯಲಾಗುವುದು.  ಹೊರ  ಜಿಲ್ಲೆಯಿಂದ ಅದರಲ್ಲೂ ಹಾಟ್‌ಸ್ಪಾಟ್ ಸ್ಥಳಗಳಿಂದ ಆಗಮಿಸುವವರ ಮೇಲೆ ನಿಗಾವಹಿಸಲು 53  ಮೊಬೈಲ್ ಸ್ಕ್ವಾಡ್‌ಗಳನ್ನು ರಚಿಸಲಾಗಿದೆ ಹಾಗೂ ಗ್ರಾಮ ಕಾರ್ಯಪಡೆಗಳು ಈ ದಿಸೆಯಲ್ಲಿ  ಕಾರ್ಯೋನ್ಮುಖವಾಗಿವೆ.  ಹೊರಗಡೆಯಿಂದ ಬರುವವರನ್ನು ಪರೀಕ್ಷಿಸಿ 14 ದಿನಗಳ ಹೋಂ  ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು. ಸಭೆಯಲ್ಲಿ  ಮಾತನಾಡಿದ ಡಿಹೆಚ್‌ಓ ಡಾ. ಚಂದ್ರಿಕಾ ಅವರು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ  ಪ್ರಯೋಗಾಲಯ ಸ್ಥಾಪಿಸಲು ಕ್ರಮ ಕೈಗೊಂಡಿದ್ದು, ಈ ತಿಂಗಳ ಅಂತ್ಯದೊಳಗೆ  ಸ್ಥಾಪನೆಯಾಗಲಿದೆ.  ಈಗಾಗಲೇ 2 ತಂಡಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ  ಕಳುಹಿಸಿ ತರಬೇತಿ ಕೊಡಿಸಲಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ  ಸಂಸದರಾದ ಜಿ.ಎಸ್.ಬಸವರಾಜು, ಶಾಸಕರುಗಳಾದ ಜ್ಯೋತಿಗಣೇಶ್, ವೀರಭದ್ರಯ್ಯ, ಸತ್ಯನಾರಾಯಣ,  ಜಯರಾಂ, ರಂಗನಾಥ್, ವಿಧಾನಪರಿಷತ್ ಶಾಸಕರಾದ ತಿಪ್ಪೇಸ್ವಾಮಿ, ಬೆಮೆಲ್ ಕಾಂತರಾಜ್,  ಚೌಡರೆಡ್ಡಿ, ಜಿ.ಪಂ. ಸಿಇಓ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೊನ  ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಎಪಿಎಂಸಿ ಕಾರ್ಯದರ್ಶಿ ಪುಷ್ಪ,  ವರ್ತಕರ ಸಂಘದ ಪ್ರತಿನಿಧಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು  ಹಾಜರಿದ್ದರು.