ರಾಮನಗರ, ಏ 19, ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ನಷ್ಟ ಅನುಭವಿಸುತ್ತಿದ್ದರೆ ಅಂಥವರಿಗೆ ಸೂಕ್ತ ಬೆಳೆನಷ್ಟ ಪರಿಹಾರ ನೀಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅಭಯ ನೀಡಿದ್ದಾರೆ. ರಾಮನಗರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಭಾನುವಾರ ಮುಂಜಾನೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು,ಈ ಬಗ್ಗೆ ಮುಖ್ಯಮಂತ್ರಿಗಳೆ ಹೇಳಿದ್ದು, ಹೀಗಾಗಿ ಕೃಷಿ ಇಲಾಖೆ ಅಧಿಕಾರಿಗಳು ಜಮೀನಿಗೆ ತೆರಳಿ ನಷ್ಟದ ಅಂದಾಜು ಮಾಡಿ ವರದಿ ಸಲ್ಲಿಸುತ್ತಾರೆ. ಬಳಿಕ ರೈತರಿಗೆ ಪರಿಹಾರ ಸಿಗಲಿದೆ ಎಂದರು. ರೈತರಿಗೆ ಬೆಳೆದಂತಹ ಬೆಳೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.ಪ್ರತಿ ಜಿಲ್ಲೆಯ ಎಪಿಎಂಸಿಗಳಿಗೆ ಭೇಟಿ ನೀಡಿ ಪರಿಸ್ಥತಿ ಅಧ್ಯಯನ ಮಾಡಲಾಗುತ್ತಿದೆ ಮಾರುಕಟ್ಟೆ ಸೇರಿದಂತೆ ಇನ್ನಿತರ ಕಡೆ ಬೆಳೆ ಸಾಗಾಟ ಮಾಡುವಾಗ ಚೆಕ್ ಪೋಸ್ಟ್, ಪೊಲೀಸರಿಂದ ಇಲ್ಲವೇ ಎಪಿಎಂಸಿಯಲ್ಲಿ ಏನಾದರೂ ಸಮಸ್ಯೆಗಳಿವೆಯೇ ಎಂದು ವಿಚಾರಣೆ ಮಾಡಲಾಗುತ್ತಿದೆ . ಇಲ್ಲೂ ವಿಚಾರಣೆ ಮಾಡಲಾಗಿದೆ ಆದರೆ ಯಾವುದೇ ರೀತಿಯ ಸಮಸ್ಯೆ ಕಂಡುಬಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಇಲ್ಲಿ ಬೆಳಗಿನ ಜಾವ 3 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಇಲ್ಲಿ ದೊಡ್ಡ ಮೆಣಸಿಕಾಯಿ ಮಾರಾಟ ಆಗದಿರುವ ವಿಷಯ ನನ್ನ ಗಮನಕ್ಕೆ
ಬಂದಿದೆ ಎಂದರು. ರಾಮನಗರ ಎಪಿಎಂಸಿಯಲ್ಲಿ ಸ್ಯಾನಿಟೈಸರ್, ಮಾಸ್ಕ್ ವಿತರಣೆ ನಿರ್ವಹಣೆ
ಅತ್ಯುತ್ತಮವಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮೈಕ್ ಮೂಲಕ ಪ್ರಚಾರ
ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಚಿವರು ತಿಳಿಸಿದರು.ನಾನು ಎಲ್ಲ
ಕಡೆ ಭೇಟಿ ಕೊಟ್ಟ ಸಂದರ್ಭದಲ್ಲಿ ದಪ್ಪಮೆಣಸು ಹಾಗೂ ನಿಂಬೆಹಣ್ಣು ಮಾರಾಟದ ಬಗ್ಗೆ ಮಾತ್ರ
ಸಮಸ್ಯೆಗಳು ಕೇಳಿಬಂದಿದ್ದು ಅದೂ ಸಹ ಈಗ ಪರಿಹಾರವಾಗುತ್ತಿದೆ ಎಂದರು.
ಇನ್ನು ರೈತರ
ಸಾಲದ ವಿಷಯವಾಗಿ ಈಗಾಗಲೇ ಹೇಳಿದಂತೆ ಕಳೆದ ಬಾರಿ ನೀಡಲಾಗಿದ್ದ 13 ಸಾವಿರ ಕೋಟಿ ರೂಪಾಯಿ
ಮೊತ್ತವನ್ನು ಈ ಬಾರಿಯೂ ನೀಡುವಂತೆ ಅಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು,
ಮಂಗಳವಾರದೊಳಗೆ ಈ ಬಗ್ಗೆ ಅಧಿಕೃತ ಆದೇಶ ಹೊರಬೀಳಲಿದೆ ಎಂದರು. ಲಾಕ್ ಡೌನ್ ಸಡಿಲಿಕೆ
ಬಗ್ಗೆ ನಾಳಿನ ಸಂಪುಟ ಸಭೆಯಲ್ಲಿ ಕೆಲವು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಈಗಾಗಲೇ ಕೃಷಿ ಕ್ಷೇತ್ರದ ವಹಿವಾಟುಗಳಿಗೆ ಬಹುತೇಕ ವಿನಾಯ್ತಿ ನೀಡಲಾಗಿದೆ ಎಂದರು.ಈಗ ರೈತರಿಗೆ ಯಾವುದೇ ಅಡೆತಡೆಗಳು ಇಲ್ಲದಿರುವುದರಿಂದ ತಮ್ಮ ಉತ್ಪನ್ನಗಳನ್ನು ಎಲ್ಲಿ ಯಾದರೂ ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದೂ ಸಚಿವರು ತಿಳಿಸಿದರು.