ಶಾಲೆಯಲ್ಲಿದೆ ಶಿಕ್ಷಣ ಜೊತೆ ರಕ್ಷಣೆಯ ಕುರಿತು ಕಾರ್ಯಾಗಾರ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಜೊತೆಗೆ ರಕ್ಷಣೆ ಭರವಸೆ ಸಿಗಬೇಕು
ಹಾವೇರಿ 17: ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ರಕ್ಷಣೆಯ ಭರವಸೆ ಸಿಗಬೇಕು. ತಮ್ಮ ಕರ್ತವ್ಯದ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಲ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ರಾಮತ್ನಾಳ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಶಾಲೆಯಲ್ಲಿದೆ ಶಿಕ್ಷಣದ ಜೊತೆ ರಕ್ಷಣೆಯ ಕುರಿತು ಕಾರ್ಯಾಗಾರ
ಉದ್ಘಾಟಿಸಿ ಅವರು ಮಾತನಾಡಿದರು.
ಬೇರೆ ಬೇರೆ ಸ್ಥಳಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಹಾಗೂ ದೌರ್ಜನ್ಯ ನಡೆಯುವುದು ಕಾಣಬಹುದು. ಆದರೆ ಶಾಲೆಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆಯುವುದು ವಿಷಾಧಕರ ಸಂಗತಿಯಾಗಿದೆ. ಮಕ್ಕಳ ರಕ್ಷಣಾ ನೀತಿ-2016ನ್ನು ಎಷ್ಟು ಶಾಲೆಗಳಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಆತ್ಮಾವಲೋನ ಮಾಡಿಕೊಳ್ಳಬೇಕಾಗಿದೆ. ಶಿಕ್ಷಣ ಕ್ಷೇತ್ರ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಮಕ್ಕಳ ಹಕ್ಕುಗಳ ರಕ್ಷಣೆಗೆ ಜೊತೆಗೆ ದೌರ್ಜನ್ಯಗಳನ್ನು ತಡೆಯಬಹುದು ಎಂದು ಹೇಳಿದರು.
ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ 1098, ಮಕ್ಕಳ ಹಕ್ಕುಗಳು, ಸಲಹಾ ಪೆಟ್ಟಿಗೆ ಮಾಹಿತಿ ನೀಡಬೇಕು ಹಾಗೂ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು. ಮಕ್ಕಳನ್ನು ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಶಾಲೆಯಿಂದ ಹೊರಗುಳಿದ ಮಕ್ಕಳು ವಿವಿಧ ಕಾನೂನುಬಾಹೀರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಶಿಕ್ಷಕರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ದಾಖಲಿಸುವ ಕೆಲಸವಾಗಬೇಕು. ಮಕ್ಕಳ ಹಕ್ಕುಗಳಿಗೆ ಚ್ಯುತಿಬಾರದಂತೆ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಮಕ್ಕಳ ಕ್ಷೇತ್ರದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಕಾರ್ಯನಿರ್ವಹಿಸುವ ಎಲ್ಲರೂ ಮಕ್ಕಳ ಬಗೆಗಿನ ಕಾನೂನುಗಳ ಅರಿವು ಹೊಂದಿರಬೇಕು. ಬಾಲನ್ಯಾಯ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆ ಕುರಿತು ತಿಳಿದುಕೊಳ್ಳಬೇಕು. ಕಾನೂನುಗಳನ್ನು ತಿಳಿದುಕೊಂಡಾಗ ಮಾತ್ರ ಅವುಗಳ ಉಲ್ಲಂಘನೆ ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಅವರು ಮಾತನಾಡಿ, ಶಿಕ್ಷಣ ಸಾಮಾನ್ಯ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ದಿ.ಮನ್ಮೋಹನ್ ಸಿಂಗ್ ಅವರ ಆರ್ಥಿಕ ನೀತಿ ಜಗತ್ತಿಗೆ ಮಾದರಿಯಾಗಿದೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ ಅವರು ಶೈಕ್ಷಣಿಕ ನಾಯಕರಾದರು. ಸಾಮಾನ್ಯ ಕುಟುಂಬದಲ್ಲಿ ಜನಿಸಿ ಶಿಕ್ಷಣದಿಂದ ಉನ್ನತ ಸ್ಥಾನ ಅಲಂಕರಿಸಿದ ಅನೇಕ ಮಹನೀಯರನ್ನು ನಾವು ಕಾಣಬಹುದು. ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ಕರೆತಂದು ಅವರಿಗೆ ಉತ್ತಮ ಭವಿಷ್ಯ ರೂಪಿಸಬೇಕು. ಈ ನಿಟ್ಟಿನಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಗುರುಕುಲ ಪದ್ಧತಿ ಇತ್ತು. ಗುರುಕುಲದಲ್ಲಿ ವ್ಯಾಸಂಗ ಮಾಡುವ ಶಿಷ್ಯರನ್ನು ಗುರುವನ್ನು ಮೀರಿಸುವ ಶಿಷ್ಯರಾಗಿದ್ದರು. ಇಂದು ಕಾಲಬದಲಾಗಿದೆ, ಮಾಹಿತಿ ತಂತ್ರಜ್ಞಾನದ ಭರಾಟೆಯಲ್ಲಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಸಂಬಂಧ ಕಡಿಮೆಯಾಗುತ್ತಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯ ಹೊಂದಬೇಕು. ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ ಅವರು ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಕರ್ತವ್ಯವಾಗಿದೆ. ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದರಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಆದರೆ ಅನೇಕ ಪ್ರಕರಣಗಳಲ್ಲಿ ಗುರುವಿನ ಸ್ಥಾನದಲ್ಲಿರುವ ಶಿಕ್ಷಕರಿಂದಲೇ ನಿಯಮಗಳ ಉಲ್ಲಂಘನೆ ಕಂಡುಬರುತ್ತಿರುವುದು ವಿಷಾಧಕರವಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಶಿಕ್ಷಕರ ಪಾತ್ರ ಏನು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಜೊತೆಗೆ ಹಕ್ಕುಗಳ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದರು.