ಶ್ರೀಹರಿಕೋಟ (ಆಂಧ್ರಪ್ರದೇಶ), ಡಿ 11: ಭೂ ಪರಿವೀಕ್ಷಣೆಯ ರಿಸ್ಯಾಟ್-2ಬಿಆರ್ಐ ಉಪಗ್ರಹ ಮತ್ತು ಇತರ 9 ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ-ಸಿ48 ರಾಕೆಟ್ ಅನ್ನು ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ 3.25ಕ್ಕೆ ಯಶಸ್ವಿಯಾಗಿ ಉಡಾಯಿಸಲಾಯಿತು.
628 ಕೆ.ಜಿ ತೂಕದ ರಿಸ್ಯಾಟ್-2 ಬಿಆರ್ ಐ ಉಪಗ್ರಹ ಮತ್ತು ಇತರ 9 ವಾಣಿಜ್ಯ ಉಪಗ್ರಹಗಳನ್ನು ಪಿಎಸ್ಎಲ್ವಿ-ಸಿ48 ಕಕ್ಷೆಗೆ ಸೇರಿಸಲಿದೆ.
22.45 ತಾಸಿನ ಕ್ಷಣಗಣನೆ ನಂತರ 44.4 ಮೀಟರ್ ಎತ್ತರ ಉಡಾವಣಾ ವಾಹಕ ಪಿಎಸ್ಎಲ್ವಿ-ಸಿ48 ಆಗಸಕ್ಕೆ ಚಿಮ್ಮಿತು.
ಪಿಎಸ್ಎಲ್ವಿಯ 50ನೇ ಉಡಾವಣೆ ಇದಾಗಿದೆ. ಅಲ್ಲದೆ, ಈ ಕೇಂದ್ರದಿಂದ 75ನೇ ಉಡಾವಣೆ ಸಹ ಆಗಿರುವುದರಿಂದ ಪಿಎಸ್ಎಲ್ವಿ-48 ಉಡಾವಣೆ ಐತಿಹಾಸಿಕ ಸಾಧನೆಯಾಗಿದೆ.
ಪಿಎಸ್ಎಲ್ವಿ-48 ಯಶಸ್ವಿ ಉಡಾವಣೆಗಾಗಿ ಇಸ್ರೋ ಅಧ್ಯಕ್ಷ ಡಾ.ಸಿವನ್ ಸೋಮವಾರ ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ್ದರು.